Home ಧಾರ್ಮಿಕ ಕ್ಷೇತ್ರಗಳು ಭಕ್ತರ ಯೋಗಿ ಹಕ್ಕಲಕೇರಿಯ ಯೋಗಾನರಸಿಂಹ

ಭಕ್ತರ ಯೋಗಿ ಹಕ್ಕಲಕೇರಿಯ ಯೋಗಾನರಸಿಂಹ

1837
0
SHARE

ದಶಾವತಾರದ ಮೂಲಕ ಭಕ್ತರನ್ನು ಸದಾ ಪೊರೆಯುವ ಶ್ರೀಮಹಾ ವಿಷ್ಣು ತನ್ನ ವೈವಿಧ್ಯಮಯ ಅವತಾರ ರೂಪಗಳಿಂದ ಸದಾ ಭಕ್ತರನ್ನು ಪೊರೆಯುತ್ತಾ ಪ್ರಸಿದ್ಧನಾಗಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿ ಬಳಿಯ ಹಕ್ಕಲಕೇರಿಯ ಯೋಗಾನರಸಿಂಹ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಕ್ಕಲಕೇರಿಯಲ್ಲಿರುವ ಈ ದೇವಾಲಯ ಸುಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಾಲಯದ ತಿರುವನ ಬಳಿ ಇದೆ ರಾಷ್ಟ್ರೀಯ ಹೆದ್ದಾರಿಯ ಮಟ್ಟಕ್ಕಿಂತ ತಗ್ಗಿನಲ್ಲಿರುವ ಈ ದೇವಾಲಯ ಆಕರ್ಷಕ ನೋಟ, ಸುಂದರ ಪುಷ್ಕರಣಿ, ಹಲವು ಪರಿವಾರ ದೇವತೆಗಳ ಆವಾಸದಿಂದ ಪ್ರೇಕ್ಷಣೀಯ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.

ದುಷ್ಟ ರಾಕ್ಷಸನಾದ ಹಿರಣ್ಯಕಶಿಪುವನ್ನು ಸಂಹರಿಸಿ ಭಕ್ತನಾದ ಪ್ರಹ್ಲಾದನನ್ನು ಉದ್ಧರಿಸಲು ಮಹಾ ವಿಷ್ಣು ನರಸಿಂಹ ಅವತಾರ ತಾಳಿದಾಗ ಋಷಿಮುನಿಗಳು, ಜಪ-ತಪ -ಅನುಷ್ಠಾನ ನಿರತ ಸಾಧು-ಸಂತರು ಶಾಂತನಾಗಿ ಪ್ರಸನ್ನತೆ ತೋರಿ ಜಗತ್ತನ್ನು ಪೊರೆಯುವಂತೆ ಮಹಾ ವಿಷ್ಣುವಿನಲ್ಲಿ ಮೊರೆ ಹೋದರಂತೆ. ಇಲ್ಲಿಗೆ ಹತ್ತಿರವೇ ಗುಣವಂತೇಶ್ವರ ಕ್ಷೇತ್ರ, ಇಡಗುಂಜಿ ಮಹಾಗಣಪತಿ ಸನ್ನಿಧಾನ ಇತ್ಯಾದಿ ಪುರಾಣ ಪ್ರಸಿದ್ಧ ದೇವಾಲಯಗಳಿರುವ ಕಾರಣ ಯೋಗಿಗಳೆಲ್ಲ ಸೇರಿ ಈ ಸ್ಥಳದಲ್ಲಿ ವಿಷ್ಣುವನ್ನು ಆರಾಧಿಸಲು ತೊಡಗಿದರಂತೆ. ದೀರ್ಘ‌ವಾಗಿ ಪೂಜೆಯಲ್ಲಿ ತೊಡಗಿದ ಯೋಗಿಗಳ ವೃಂದದ ಬೇಡಿಕೆಯಂತೆ ವಿಷ್ಣು ಈ ಸ್ಥಳದಲ್ಲಿ ಯೋಗಾನರಸಿಂಹ ರೂಪದಲ್ಲಿ ನೆಲೆಯಾದನಂತೆ.ಇದು ಈ ಕ್ಷೇತ್ರದ ಮಹತ್ವವಾಗಿದೆ.

ಪೂರ್ವಾಭಿಮುಖವಾಗಿರುವ ಈ ದೇವಾಲಯದ ಎಡ ಭಾಗದಲ್ಲಿ ಪುಣ್ಯ ತೀರ್ಥವನ್ನೊಳಗೊಂಡ ಪುಷ್ಕರಣಿ ಇದೆ. ಶ್ರಾವಣ ಮಾಸವಿಡೀ ನಿತ್ಯ ವೈವಿಧ್ಯಮಯ ಅಲಂಕಾರ ಪೂಜೆ, ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ದೀಪೋತ್ಸವ ನಡೆಯುತ್ತದೆ. ವೈಶಾಖ ಮಾಸದಲ್ಲಿ ನಿತ್ಯ ವಿಶೇಷ ಅಭಿಷೇಕ ಪೂಜೆ ನಡೆಯುತ್ತದೆ, ಮಹಾ ನೈವೇದ್ಯ ವಿತರಿಸಲಾಗುತ್ತದೆ. ಪ್ರತಿ ಏಕಾದಶಿಯಂದು ಸಂಜೆ ದೇವರ ಸನ್ನಿಧಾನದಲ್ಲಿ ಯಕ್ಷಗಾನ ತಾಳಮದ್ದಳೆ ಸೇವೆ ನಡೆಯುತ್ತದೆ. ತೆಂಕು ಮತ್ತು ಬಡಗು ತಿಟ್ಟಿನ ಪ್ರಸಿದ್ಧ ಅರ್ಥಧಾರಿಗಳು ಮತ್ತು ಹಿಮ್ಮೇಳದ ಕಲಾವಿದರು ಇಲ್ಲಿ ಬಂದು ತಮ್ಮ ಯಕ್ಷಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಪ್ರತಿ ವರ್ಷ ಚೈತ್ರ ಶುದ್ಧ ಮತ್ತು ಸಪ್ತಮಿಯಂದು ವಿಶೇಷ ವಾರ್ಷಿಕ ಪೂಜಾ ಮಹೋತ್ಸವವನ್ನು ವೈಭವದಿಂದ ನಡೆಸಲಾಗುತ್ತದೆ. ವಿವಾಹ ಮತ್ತು ಸಂತಾನ ಪ್ರಾಪ್ತಿಗಾಗಿ ಭಕ್ತರು ಇಲ್ಲಿ ಹರಕೆ ಹೊತ್ತು ಬರುತ್ತಾರೆ. ತಮ್ಮ ಸಮಸ್ಯೆ ಪರಿಹಾರಕ್ಕೆ ಇಲ್ಲಿ ಪ್ರಸಾದ ಕೇಳಲಾಗುತ್ತದೆ. ಅಡಕೆ ಸಿಂಗಾರವನ್ನು ದೇವರಿಗೆ ಮುಡಿಸಿ ಮನ ಸಂಕಲ್ಪ ಅಥವಾ ಸಮಸ್ಯೆ ನಿವೇದಿಸಿಕೊಂಡಾಗ ಇಚ್ಛೆ ಫ‌ಲಿಸುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಸಿಂಗಾರದ ಪ್ರಸಾದವಾಗುವುದು ವಿಶೇಷವಾಗಿದೆ. ಶ್ರೀನರಸಿಂಹ ಮೂಲ ಮಂತ್ರ ಹೋಮ, ಸುದರ್ಶನ ಹವನ, ಕೊಟ್ಟೆಕಡುಬಿನ ನೈವೇದ್ಯ ಇಲ್ಲಿ ಬಹಳ ಪ್ರಸಿದ್ಧವಾಗಿದೆ. ಸ್ಥಳೀಯ ಮೀನುಗಾರರು, ಹಾಲಕ್ಕಿ ಜನಾಂಗದವರು ಇಲ್ಲಿಗೆ ಬಂದು ಹರಕೆ ಹೊರುತ್ತಾರೆ.

ಎನ್‌.ಡಿ.ಹೆಗಡೆ ಆನಂದಪುರ

 

LEAVE A REPLY

Please enter your comment!
Please enter your name here