Home ಧಾರ್ಮಿಕ ಸುದ್ದಿ ಜೂ. 24: ಏತಡ್ಕ ದೇಗುಲದಲ್ಲಿ ಹಲಸಿನ ಹಣ್ಣಿನ ಅಪ್ಪ ಸೇವೆ

ಜೂ. 24: ಏತಡ್ಕ ದೇಗುಲದಲ್ಲಿ ಹಲಸಿನ ಹಣ್ಣಿನ ಅಪ್ಪ ಸೇವೆ

1496
0
SHARE

ಏತಡ್ಕ: ಏತಡ್ಕ ಸದಾಶಿವ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಹಲಸಿನ ಹಣ್ಣಿನ ಅಪ್ಪ ಸೇವೆ ಸುಮಾರು ಐವತ್ತು ವರ್ಷಗಳಿಂದಲೂ ನಡೆದು ಬರುತ್ತಿದೆ. ಈ ದೇವಳದಲ್ಲಿ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ದೇವರಿಗೆ ವಿಶೇಷ ಸೇವೆ ನಡೆದು ಬರುತ್ತಿದೆ. ಈ ಬಾರಿ ಜೂ.24 ರಂದು ರವಿವಾರ ಈ ಉತ್ಸವ ನಡೆಯಲಿದೆ. ಅಕ್ಕಿ ಹುಡಿ, ತುಪ್ಪ, ತೆಂಗಿನ ಕಾಯಿ, ಬೆಲ್ಲ, ಏಲಕ್ಕಿ, ಹಲಸಿನ ಹಣ್ಣಿನ ಸೊಳೆ(ಕೊಚ್ಚೆಲು)ಗಳ ಪಾಕದಲ್ಲಿ ‘ಅಪ್ಪ’ ಸಿದ್ಧಗೊಳ್ಳುತ್ತದೆ. ಊರ ಭಕ್ತಾದಿಗಳು ಪಾಲ್ಗೊಂಡು ಹಲಸಿನ ಮಹಿಮೆಯನ್ನು ದೇವರ ಸಮ್ಮುಖದಲ್ಲಿ ಕೊಂಡಾಡುತ್ತಾರೆ. ಬಹುಶ: ಒಂದು ಹಣ್ಣಿಗೆ ಈ ಗೌರವ ನೀಡುವ ಭಕ್ತಾದಿಗಳ ಮನೋಭೂಮಿಕೆಯಲ್ಲಿ ಗತ ಕಾಲದ ಹಲಸಿನ ದಿನಗಳಲ್ಲಿ ಹಲಸಿನ ಕಾಯಿ ಹೊಟ್ಟೆ ತುಂಬಿಸಿದ ಉಪಕಾರ ಸ್ಮರಣೆ ಇರಬಹುದು.

ಮೃಷ್ಟಾನ ಭೋಜನವಾದೆ
‘ಕೊಚ್ಚಿದರೆ ನೀ ಗೋವುಗಳಿಗೆ ಮಡ್ಡಿಯಾದೆ, ಬಿಚ್ಚಿದರೆ ಕಷ್ಟದ ಮಳೆಗಾಲ ಪೂರ್ಣ ಮೃಷ್ಟಾನ ಭೋಜನವಾದೆ’ ಎನ್ನುವ ಕೃತಾರ್ಥ ಭಾವ ಹಳ್ಳಿಗರಲ್ಲಿ. ಹಳ್ಳಿಗಳಲ್ಲಿ ಧಾರಾಳ ಲಭ್ಯವಿರುವ ಈ ಫಲ ವಸ್ತುವಿನ ಸರ್ವಾಂಗವೂ ವಿವಿಧ ಅಡುಗೆ ರೀತಿ ರಿವಾಜಿಗೆ ಬಗ್ಗಿಕೊಳ್ಳುವುದು. ಮನೆಯ ಸಕಲರನ್ನು ಸೆಳೆಯುವ ಏಕೈಕ ಹಣ್ಣು. ಹಾಗೆಂದು ದಿನಾ ಬಳಸಿದಾಗಲೂ ‘ಬೋರು’ ಹೊಡೆಸದೇ ಇರುವ ತರಕಾರಿಯಾಗಿಯೂ ಇದರ ಮಹಿಮೆ ಭಕ್ತಾದಿಗಳ ಮನದಲ್ಲಿ ಹಾದು ಹೋಗುತ್ತದೆ.

ಮನೆಯಲ್ಲಿ ಊಟಕ್ಕೆ ತತ್ವಾರ ಆದಾಗ ಬಂದ ಬಂಧುಗಳಿಗೆ ರುಚಿಯಾದ ಹಣ್ಣಿನ ತೊಳೆಯನ್ನು ನೀಡಿ ಮತ್ತೆ ಊಟದ ತಟ್ಟೆ ಇಟ್ಟಾಗ ಒಂದಿಷ್ಟು ಗಂಜಿ ಸಾಕಾಗಿ ಮರ್ಯಾದೆ ಉಳಿದ ಘಟನೆಯನ್ನು ತಾಯಿಯೊಬ್ಬರು ದೇವಸ್ಥಾನದ ನಡೆಯಲ್ಲಿ ನೆನೆಸಿಕೊಂಡದ್ದುಂಟು. ಇಂತಿಪ್ಪ ಆಹಾರ ಭದ್ರತೆ ನೀಡಿದ ಹಲಸಿನ ಹಣ್ಣನ್ನು ದೇವರಿಗೆ ಒಪ್ಪಿಸಿ ನಮೋ….ನಮೋ….ಎಂದು ವರ್ಷಕ್ಕೊಮ್ಮೆಯಾದರು ಹೇಳದಿದ್ದರೆ ಹೇಗೆ ?

ಹಿನ್ನೆಲೆ: 1940 ರಷ್ಟು ಹಿಂದೆ ಏತಡ್ಕ ಸಮೀಪದ ಪಡ್ರೆ ಗ್ರಾಮದಲ್ಲಿರುವ ಈ ದೇವಸ್ಥಾನದ ಮೂಡು ಭಾಗದಲ್ಲಿ ಪ್ರದಕ್ಷಿಣಾಕಾರದಲ್ಲಿ ಹರಿದು ಪಳ್ಳತ್ತಡ್ಕ ದಾರಿಯಾಗಿ ಕುಂಬಳೆ ಸೇರುವ ನದಿಯಲ್ಲಿ ಹಿಂದೆಂದೂ ಕೇಳರಿಯದ ನೆರೆ ಬಂದು ಸುತ್ತುಮುತ್ತಲಿನ ಅನೇಕ ಮನೆಗಳು ಕುಸಿದು ನೆರೆ ಪಾಲಾದವು. ಅಕ್ಕಪಕ್ಕದ ಕೃಷಿ ಭೂಮಿಗಳು ಹೂಳು ತುಂಬಿ ಕೃಷಿ ಅಯೋಗ್ಯವಾಗಿ ರೂಪುಗೊಂಡವು. 1941 ರಲ್ಲಿ ಏತಡ್ಕ ಸುಬ್ರಾಯ ಭಟ್‌ ಅವರು ಅಪರೂಪವಾಗಿದ್ದ ದೇವಸ್ಥಾನವಿದ್ದ ಜಾಗವನ್ನು ಖರೀದಿಸಿದ್ದರು. 1948ರಲ್ಲಿ ಜೀರ್ಣೋದ್ದಾರ, ಬ್ರಹ್ಮಕಲಶ ನೆರವೇರಿಸಿದರು.

ಧನ-ಧಾನ್ಯ ಎರಡೂ ದುರ್ಲಭ ಎನ್ನುವ ಪರಿಸ್ಥಿತಿ. ಇಡೀ ಊರವರ ಹಸಿವಿನ ಕೈ ಹಿಡಿದು ಅನ್ನ ಕೋಶವನ್ನು ತುಂಬಿದ್ದು ‘ಹಲಸಿನ ಕಾಯಿ ಮತ್ತು ಹಣ್ಣು’. ದಿನದ ಮೂರೂ ಹೊತ್ತು ಹಲಸಿನ ಹಲವು ಬಗೆ. ಅನ್ನ, ತರಕಾರಿ, ಹಣ್ಣು, ಹಂಪಲು ಎಲ್ಲವೂ ಒಂದರಲ್ಲಿ ಎಂದರೇ ಹಲಸಿನ ಕಾಯಿಯೇ. ದಿ|ಏತಡ್ಕ ಸುಬ್ರಾಯ ಭಟ್‌ ಅವರು ಈ ಮರಕ್ಕೆ ಊರವರು ಚಿರಋಣಿಯಾಗಿರಬೇಕು ಎನ್ನುವ ಪರಿಕಲ್ಪನೆಯಿಂದ ಹಲಸಿನ ಹಣ್ಣಿನ ಅಪ್ಪ ಸೇವೆಯನ್ನು ಆಚರಣೆಗೆ ತಂದರು. ಆ ಬಳಿಕ ಪ್ರತೀ ವರ್ಷವೂ ತಪ್ಪದೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯುತ್ತಿದೆ. ರವಿವಾರ ಬೆಳಗ್ಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯಲಿದೆ.

LEAVE A REPLY

Please enter your comment!
Please enter your name here