Home ಧಾರ್ಮಿಕ ಸುದ್ದಿ ಹಲಸಿನ ಹಣ್ಣಿನ ಖಾದ್ಯ ಕಜ್ಜಾಯ ಸಮರ್ಪಣೆ

ಹಲಸಿನ ಹಣ್ಣಿನ ಖಾದ್ಯ ಕಜ್ಜಾಯ ಸಮರ್ಪಣೆ

ಏತಡ್ಕ ಸದಾಶಿವ ದೇವರಿಗೆ ನಾಳೆ ಊರವರ ಸೇವೆ

860
0
SHARE
1. ಹಲಸಿನ ಹಣ್ಣಿನ ಅಪ್ಪ 2. ಏತಡ್ಕ ಸದಾಶಿವ ದೇವಸ್ಥಾನ

ಏತಡ್ಕ: ದೈವ ದೇವರು ಈ ನೆಲದ ಆರಾಧನೀಯ ಶಕ್ತಿಗಳು. ನಾಲ್ಕೂವರೆ ಶತಮಾನ ಹಿಂದೆ ಹೈಗನಾಡಿನಿಂದ (ಈಗಿನ ಹೊನ್ನಾವರ ಪ್ರದೇಶ) ತುಳುನಾಡಿಗೆ ಬಂದ ಹವ್ಯಕರು ತಾವು ಆರಾಧಿಸುವ ದೇವರ ಜತೆ ಸ್ಥಳೀಯ ದೈವ ದೇವರುಗಳನ್ನೂ ಪರಿವಾರಕ್ಕೆ ಸೇರಿಸಿಕೊಂಡುದು ಒಂದು ಕುತೂಹಲದ ಮತ್ತು ಅಧ್ಯಯನ ಯೋಗ್ಯ ವಿಷಯ. ಮನುಷ್ಯರ ಹಾಗೆ ದೇವರುಗಳನ್ನೂ ಒಂದು ಕುಟುಂಬ ಮಾಡಿ ಅವಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಆ ವ್ಯವಸ್ಥೆಯನ್ನು ‘ದೇವರಗಳ ಗ್ರಾಮ’ ಎಂದು ಹೇಳಬಹುದು.

ತುಳುನಾಡಿನ ಬದುಕಿಲ್ಲಿ – ಆರಾಧನೆಗೆ ದೈವದೇವರುಗಳು; ಮಳೆಗಾಲದ ಕಷ್ಟದ ದಿನಗಳಲ್ಲಿ ಆಹಾರಕ್ಕೆ ಹಲಸಿನಕಾಯಿ ಎಂಬ ಎರಡು ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದು ಪರಿಶೀಲನೆ ಮಾಡಬೇಕಾದ ವಿಷಯ. ಹಲಸಿನಕಾಯಿ ತುಳುನಾಡಿನ ಜನರ ಹೊಟ್ಟೆ ತುಂಬಿಸಿದ ಒಂದು ಆಹಾರ. ವಿಶೇಷ ಎಂದರೆ ದೈವ ದೇವರುಗಳ ಜೊತೆಗೆ ಹಲಸಿನಕಾಯಿಯ ಬಳಕೆಗೆ ಸಂಬಂಧಿಸಿದ ನಂಬಿಕೆ. ಧಾರಾಕಾರ ಮಳೆಸುರಿಯುವ ಮಳೆಗಾಲದ ಮೂರು ತಿಂಗಳು ದಾರಿದ್ರ್ಯದ ಕಷ್ಟಕಾರ್ಪಣ್ಯದ ಕಾಲ. ಒಂದೆಡೆ ಕೈಗಳಿಗೆ ಕೆಲಸವಿಲ್ಲ. ಕೆಲಸ ಇದ್ದರೂ ಮಳೆ ಸುರಿಯುವಾಗ ಕೆಲಸ ಮಾಡಲು ಸಾಧ್ಯವಿಲ್ಲ. ಇನ್ನೊಂದೆಡೆ ಹೊಟ್ಟೆಗೆ ಆಹಾರವಿಲ್ಲ. ಬಡತನ, ರೋಗರುಜಿನಗಳ ಜೊತೆಗೆ ಮನುಷ್ಯನ ಅಸಹಾಯಕತೆಯ ದಿನಗಳವು. ಆ ಕಾರ (ಕಾರ್ತೆಲ್) ತಿಂಗಳಲ್ಲಿ ಹಲಸಿನಕಾಯಿ ಬೆಳೆದು ಸಿಗುತ್ತಿತ್ತು. ದೇವರ ವರಪ್ರಸಾದದಂತೆ ಒದಗಿ ಬರುತ್ತಿದ್ದ ಹಲಸಿನ ಕಾಯಿಯ ಖಾದ್ಯ ಕಜ್ಜಾಯಗಳನ್ನು ದೈವದೇವರುಗಳಿಗರ್ಪಿಸಿ ಅನಂತರ ತಾವು ಉಪಯೋಗಿಸುವ ಪರಿಪಾಠ ಬೆಳೆದು ಬಂತು. ದೇವರಿಗೆ ಅರ್ಪಣೆ ಮಾಡಿದ ಮೇಲೆ ತಾನೇ ನಾವು ಪ್ರಸಾದ ಸ್ವೀಕರಿಸುವುದು?ಇದೊಂದು ಜನಪದ ನಂಬಿಕೆ ಆಗಿರಬಹುದು; ಆದರೆ ದೈವದೇವರು ನೆಲೆಸಿದ ಪ್ರದೇಶದಲ್ಲಿ ಸ್ಥಳೀಯ ಜನರು ಆ ದೈವಗಳಿಗೆ ಸಲ್ಲಿಸಿದ ಅತ್ಯುನ್ನತ ಭಕ್ತಿ ಗೌರವ. ಆ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ.

ಯೇತಡ್ಕದಲ್ಲಿರುವ ಸದಾಶಿವ ದೇವರಿಗೆ ‘ಕಾರ’ (ಕಾರ್ತೆಲ್) ತಿಂಗಳಲ್ಲಿ ಹಲಸಿನ ಹಣ್ಣಿನ ಕಜ್ಜಾಯ (ಅಪ್ಪ) ಮಾಡಿ ಸಮರ್ಪಿಸುವ ವಿಶೇಷವಾದೊಂದು ‘ಅಪ್ಪಸೇವೆ’ ಹಿಂದಿನಿಂದಲೂ ನಡೆದುಕೊಂಡು ಬಂದಿದೆ (ಕಾರ ತಿಂಗಳು ಸಾಮಾನ್ಯವಾಗಿ ಜೂನ್‌ ಮಧ್ಯಭಾಗದಿಂದ ಜುಲೈ ಮಧ್ಯಭಾಗದ ಅವಧಿಯಲ್ಲಿ ಬರುತ್ತದೆ). ಅಂದು ಗ್ರಾಮಸ್ಥರಿಗೆಲ್ಲ ಒಂದು ಹಬ್ಬ. ನಿಸರ್ಗದಿಂದ ತಮಗೆ ಸಿಗುವ ಅಮೂಲ್ಯವಾದ ಆಹಾರ ವಸ್ತುವನ್ನು ದೇವರಿಗೆ ಸಮರ್ಪಿಸಿ ಅನಂತರ ತಾವು ಸ್ವೀಕರಿಸುವ ಈ ಸೇವೆಯ ಹಿಂದೆ ಬದುಕು ಕೊಟ್ಟ ದೇವರಿಗೆ ಕೃತಜ್ಞತೆ ಸಲ್ಲಿಸುವ ಆರಾಧನಾ ಮನೋಭಾವವನ್ನು ಕಾಣಬಹುದು. ನೈವೇದ್ಯ ಮಾಡಿದ ಮೇಲೆಯೇ ಹಲಸಿನ ಕಾಯಿ ದೋಸೆ, ಹಣ್ಣಿನ ಕೊಟ್ಟಿಗೆ, ಕಜ್ಜಾಯ (ಅಪ್ಪ ಅಥವಾ ಸುಟ್ಟವು) ಅಥವಾ ಪಾಯಸ ಮಾಡಿ ಉಣ್ಣ ಬೇಕೆಂಬ ಕಟ್ಟಳೆ ಅಲ್ಲಿನ ಕೆಲವು ಮನೆತನದಲ್ಲಿದೆ. ಇಂತಹ ನಂಬಿಕೆ- ಕಟ್ಟುಕಟ್ಟಳೆ ಗ್ರಾಮ ಬದುಕಿನ ಮೌಲ್ಯಗಳಿಗೆ ಕನ್ನಡಿಯಾಗಿದೆ.

ದೈವ/ಭೂತಗಳು
ಕುಂಬಳೆ ಸೀಮೆಯಲ್ಲಿ ಮಡ್ವ, ಕಾನ ಮೊದಲಾದ ಕಡೆ ಹವ್ಯಕ ಕುಟುಂಬಗಳಿಗೆ ಸಂಬಂಧಿಸಿದ ದೈವ/ಭೂತಗಳಿವೆ. ಮಡ್ವದ ಮತ್ತು ಕಾನದ ಧೂಮಾವತಿ ಇಂತಹ ದೈವಗಳು. ಸುಮಾರು ಮುನ್ನೂರೈವತ್ತು ವರ್ಷಗಳ ಹಿಂದೆ ದೈವಗಳ ಆರಾಧನೆಯ ಉದ್ದೇಶಕ್ಕೆ ಆಸ್ತಿಯನ್ನು ಉಂಬಳಿ ಬಿಟ್ಟು, ಕಟ್ಟುಕಟ್ಟಳೆ ಮಾಡಿಕೊಂಡ ನಿದರ್ಶನ ಕುಂಬಳೆ ಸೀಮೆಯಲ್ಲಿದೆ. ಇಂದಿಗೂ ಮಡ್ವ ಮತ್ತು ಕಾನದಲ್ಲಿ ಧೂಮಾವತಿಗೆ ನಿರ್ದಿಷ್ಟ ಹವ್ಯಕ ಮನೆತನದವರು ವಾರ್ಷಿಕ ನೇಮ ಆರಾಧನೆಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಕಾಣಬಹುದು. ಹನ್ನೆರಡು- ಹದಿಮೂರು ತಲೆಮಾರುಗಳ ನಂತರವೂ ಈ ವ್ಯವಸ್ಥೆ ನಡೆದುಕೊಂಡು ಬರುತ್ತಿರುವುದು ತುಳುನಾಡಿನ ದೈವದೇವರುಗಳ ಪಾರಮ್ಯಕ್ಕೆ ಒಂದು ಉದಾಹರಣೆ. ತುಳುನಾಡಿನಲ್ಲಿ ಇನ್ನೂ ಕೆಲವು ಕಡೆ ಇಂತಹ ರೂಢಿ-ರಿವಾಜುಗಳಿವೆ.

ಡಾ| ವಸಂತಕುಮಾರ ಪೆರ್ಲ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here