ಎಡನೀರು : ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ 58ನೇ ಚಾತು ರ್ಮಾಸ ವ್ರತಾಚರಣೆ ಗುರುವಾರ ವಿಧ್ಯುಕ್ತವಾಗಿ ಆರಂಭ ಗೊಂಡಿದ್ದು, ಸೆ. 25ರ ವರೆಗೆ 53 ದಿನಗಳ ಪರ್ಯಂತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ಜರಗಲಿದೆ.
ಗುರುವಾರ ಬೆಳಗ್ಗೆ ಶ್ರೀ ಗುರು ಗಳು ಚಾತುರ್ಮಾಸ ಸಂಕಲ್ಪ ಕೈಗೊಂಡು ಬಳಿಕ 108 ಕಾಯಿಗಳ ಗಣಹೋಮ, ದಕ್ಷಿಣಾಮೂರ್ತಿ ಹಾಗೂ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಹವನ ಗಳನ್ನು ನೆರವೇರಿಸಿದರು. ಬಳಿಕ ಸ್ವಯಂವರ ಪಾರ್ವತಿ, ಶ್ರೀ ಸೂಕ್ತ ಹವನಗಳು ನಡೆದವು.
ಸಂಜೆ ಉದ್ಘಾಟನಾ ಸಮಾರಂಭ ನಡೆಯಿತು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖೀಲ ಕರ್ನಾಟಕ ಬ್ರಾಹ್ಮಣ ಸಭಾ ಬೆಂಗಳೂರು ಇದರ ಅಧ್ಯಕ್ಷ ಕೆ.ಎನ್. ವೆಂಕಟ್ ನಾರಾಯಣ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಡಾ| ನರಸಿಂಹ ಅಡಿಗ ಉಪಸ್ಥಿತರಿದ್ದರು. ರಾತ್ರಿ 8ರಿಂದ ಶ್ರೀಗಳಿಂದ ದೇವರ ನಾಮ ಗಾಯನ ನಡೆಯಿತು.
ಶುಕ್ರವಾರ ಸಂಜೆ 6.30ಕ್ಕೆ ಯತಿ ಚಾತುರ್ಮಾಸ ಕುರಿತು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ವಿಶೇಷ ಪ್ರವಚನ ನೀಡುವರು. ರಾತ್ರಿ 8ರಿಂದ ವಿದ್ವಾನ್ ಚಂದ್ರಶೇಖರ ನಾವಡರ ಶಿಷ್ಯೆ ರಂಜಿನಿ ಕೃಷ್ಣ ಪ್ರಸಾದ್ ಅವರಿಂದ ಭರತ ನಾಟ್ಯ, ಶನಿವಾರ ಸುಜಾತಾ ಗುರವ್ ಧಾರವಾಡ ಮತ್ತು ಬಳಗದಿಂದ ಸಂಜೆ 6.30ರಿಂದ ಹಿಂದೂಸ್ಥಾನೀ ಗಾಯನ ನಡೆಯಲಿದೆ.