Home ನಂಬಿಕೆ ಸುತ್ತಮುತ್ತ ದೀಪಾವಳಿಯ ಶುಭದಿನಗಳಲ್ಲಿ ಲಕ್ಷ್ಮೀ ಆರಾಧನೆ

ದೀಪಾವಳಿಯ ಶುಭದಿನಗಳಲ್ಲಿ ಲಕ್ಷ್ಮೀ ಆರಾಧನೆ

ದೀಪಾವಳಿ ಎಂಬ ದೀಪೋತ್ಸವ; ಜಗತ್ಸರ್ವಮ್ ಜ್ಯೋತಿರ್ಮಯಂ  

1932
0
SHARE

ವಿಷ್ಣುವಿನ ಪತ್ನಿಯಾದ ಲಕ್ಷ್ಮೀದೇವಿಯು ಸಂಪತ್ತಿನ ಒಡತಿ. ಧನ ಕನಕಾದಿ ಚರಾಚರ ಸಂಪತ್ತುಗಳಿಗೆ ಈಕೆಯೇ ದೇವತೆ. ಮಹಾವಿಷ್ಣುವು ತ್ರಿಮೂರ್ತಿಗಳಲ್ಲಿ ಒಬ್ಬ. ಪಾಲನಾಕರ್ತನೀತ. ಈತನ ಮಡದಿ ಲಕ್ಷ್ಮೀದೇವಿ. ವಿಷ್ಣುವು ಪಾಲಕನಾದರೆ ಈಕೆ ಸರ್ವರಿಗೂ ತಾಯೀ ಸ್ವರೂಪಿ. ಸಕಲಭಾಗ್ಯವನ್ನೂ ಕರುಣಿಸಿ, ಸಂಪತ್ತನ್ನು ಅನುಗ್ರಹಿಸಿ ನಮ್ಮ ಜೀವನವು ಸುಖವಾಗಿ ಸಾಗುವಂತೆ ಕಾಯುವ ಶ್ರೀ ಲಕ್ಷ್ಮೀದೇವಿಯನ್ನು ಈ ಶುಭದಿನ ಪೂಜಿಸುವುದೂ ಒಂದು ಸಂಭ್ರಮವೇ.

ಸಿದ್ಧಿ ಬುದ್ಧಿ ಪ್ರದೇ ದೇವಿ |
ಭಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರಮೂರ್ತೆ ಸದಾ ದೇವಿ |
ಮಹಾಲಕ್ಷ್ಮೀ ನಮೋಸ್ತುತೇ || ಎಂಬ ಸ್ತೋತ್ರದಲ್ಲಿ ಹೇಳಿದಂತೆ ಲಕ್ಷ್ಮೀದೇವಿಯು ಸಿದ್ಧಿ ಅಂದರೆ ಜಯವನ್ನೂ ಬುದ್ಧಿಯನ್ನೂ ನೀಡುವವಳು, ಅಲ್ಲದೆ ಪ್ರೀತಿಯನ್ನು ಕೊಡುವವಳು, ಮುಕ್ತಿಯನ್ನು ಕರುಣಿಸುವವಳೂ ಆಗಿದ್ದಾಳೆ. ಹಾಗಾಗಿಯೇ ದಾಸರು ಭಾಗ್ಯದ ಲಕ್ಷ್ಮೀ ಬಾರಮ್ಮ ಎಂದು ಹಾಡಿಹೊಗಳಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ನರಕ ಚತುರ್ದಶಿಯ ಮಾರನೆಯ ದಿನ ಅಂದರೆ ಆಶ್ವಯುಜ ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆಯನ್ನು ಮಾಡುವ ಪದ್ಧತಿ ತಲತಲಾಂತರಗಳಿಂದ ಬಂದಿದೆ. ನಮ್ಮಲ್ಲಿರುವ ಸಂಪತ್ತನ್ನು ನಮ್ಮ ಬದುಕು ಅವಲಂಬಿಸಿದೆ. ದುಡ್ಡಿಲ್ಲವೆಂದರೆ ತುತ್ತು ಅನ್ನವೂ ಸಿಗದು. ಮನೆಗಳಲ್ಲಿ, ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವ ಕ್ರಮವೇ ಲಕ್ಷ್ಮೀಪೂಜೆ. ನಾವು ಎಲ್ಲ ವಸ್ತುಗಳಲ್ಲೂ ದೇವರನ್ನು ಕಾಣುವ ಸಂಸ್ಕಾರವನ್ನು ಹೊಂದಿದವರಾದ್ದರಿಂದ ಹಣ, ಚಿನ್ನ, ಭೂಮಿ ಇನ್ನಿತರ ಸಂಪತ್ತುಗಳನ್ನು ಲಕ್ಷ್ಮೀರೂಪದಲ್ಲಿ ಕಾಣುತ್ತೇವೆ ಮತ್ತು ಪೂಜಿಸುತ್ತೇವೆ.

ಈ ದಿನ ಸಂಧ್ಯಾಕಾಲದಲ್ಲಿ ಲಕ್ಷ್ಮೀದೇವಿಯನ್ನು ಆಹ್ವಾನಿಸಿ, ಅರಶಿನ ಕುಂಕುಮ, ಗಂಧ, ಪುಷ್ಪ, ಅಕ್ಷತಾದಿಗಳಿಂದ ಅರ್ಚಿಸಿ, ದೂಪದೀಪವನ್ನು ಬೆಳಗಿ, ನೈವೇದ್ಯವನ್ನು ಇಟ್ಟು, ಮಹಾಮಂಗಳಾರತಿಯನ್ನು ಮಾಡಿ, ಅವಳಿಗೆ ಶ್ರದ್ಧಾ ಭಕ್ತಿಪೂರ್ವಕವಾಗಿ ನಮಸಿ, ಹಣ, ಐಶ್ವರ್ಯ ಮತ್ತು ಸಂಪತ್ತು ಲಭಿಸುವಂತೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಾಗದಂತೆ ಕಾಪಾಡು ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ. ಸಂಪತ್ತಿನ ದೇವಿ ಲಕ್ಷ್ಮೀದೇವಿಯು ಸಂತೃಪ್ತಳಾದರೆ ಧನಕನಕಾದಿಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಸುಖ ಸಮೃದ್ಧಿಯನ್ನು ನೀಡುತ್ತಾಳೆ.

ಲಕ್ಷ್ಮೀದೇವಿಯನ್ನು ಶ್ರೀ ಎಂಬುದಾಗಿಯೂ ಕರೆಯಲಾಗುತ್ತದೆ. ಲಕ್ಷ್ಮೀದೇವಿಯ ಬಗೆಗೆ ಶ್ರೀಸೂಕ್ತದಲ್ಲಿ ಹೇಳಲಾಗಿದೆ. ಆಕೆ ಶುಭವನ್ನೇ ಅನುಗ್ರಹಿಸುವವಳು. ಸಂಪತ್ತು ಮತ್ತು ಹಣಗಳಿಗೇಕೆ ಲಕ್ಷ್ಮೀರೂಪವೆನ್ನಲಾಗಿದೆ? ಎಂಬ ಪ್ರಶ್ನೆಗೆ ಉತ್ತರ ಸರಳವಾದುದು. ನಮ್ಮ ಜೀವನದ ಆಗುಹೋಗುಗಳಿಗೆ ಕಾರಣವಾಗುವ ಪ್ರತಿಯೊಂದು ಗೋಚರ ಅಗೋಚರ ಅಂಶಗಳಿಗೆ ನಾವು ದೇವರ ಬೇರೆಬೇರೆ ರೂಪಗಳನ್ನು ಕೊಟ್ಟಿದ್ದೇವೆ. ಯಾಕೆಂದರೆ ಮನುಷ್ಯನ ಪ್ರತಿಯೊಂದು ಚರ್ಯೆಯೂ ದೇವರಿಂದ ಅಂದರೆ ಕಾಣದ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತದೆ. ಹಾಗಾಗಿ ಈ ಧನಕನಕಾದಿ ಐಶ್ವರ್ಯಗಳೂ ದೇವರೇ ಆಗಿವೆ. ಅನ್ನ ಕೊಟ್ಟವನು ದೇವರ ಸಮಾನ. ಅಂತೆಯೇ ಈ ಸಂಪತ್ತು ನಿತ್ಯಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮೂಲಭೂತವಾದ ಅಂಶ. ಸೃಷ್ಟಿ,ಸ್ಥಿತಿ ಮತ್ತು ಲಯವೆಂಬ ಮೂರು ಭಾಗಗಳಲ್ಲಿ ನಾವು ಸಾವು ಬರುವ ತನಕ ಸ್ಥಿತಿಯಲ್ಲಿರುತ್ತೇವೆ. ಈ ಸ್ಥಿತಿ ಅಂದರೆ ಜೀವನವು ಧನವನ್ನು ಅಂದರೆ ಲಕ್ಷ್ಮೀದೇವಿಯ ಕೃಪೆಯನ್ನು ಅವಲಂಬಿಸಿದೆ. ಅಂತಹ ವಸ್ತುಗಳನ್ನು ಮನುಷ್ಯನು ಯಾವತ್ತೂ ಕೀಳಾಗಿ ನೋಡಬಾರದು, ಮತ್ತು ಹಣ ಸಂಪತ್ತಿನ ವಿಷಯದಲ್ಲಿ ಮೋಸವನ್ನೂ ಮಾಡಬಾರದು. ದೇವಿಯು ಕೊಡುವ ವಸ್ತುಗಳೆಲ್ಲವೂ ಅವಳದ್ದೇ ಆಸ್ತಿಯಾದ್ದರಿಂದ ಸಿರಿತನ ಬಂದಾಗ ದಾನ ಧರ್ಮಗಳಲ್ಲಿ ಮುಂದಾಗಬೇಕಂಬುದರ ಪ್ರತೀಕವಾಗಿ ನಮ್ಮಲ್ಲಿರುವ ಸಂಪತ್ತನ್ನ ಲಕ್ಷ್ಮೀದೇವಿಯ ರೂಪದಲ್ಲಿ ಕಾಣಲಾಗುತ್ತದೆ.

ಮುಂದುವರಿಯುವುದು…

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here