Home ಧಾರ್ಮಿಕ ಸುದ್ದಿ ದೊಡ್ಡಣಗುಡ್ಡೆ ಶ್ರೀಕ್ಷೇತ್ರಕ್ಕೆ ದಾರುಶಿಲ್ಪ ವೈಭವ

ದೊಡ್ಡಣಗುಡ್ಡೆ ಶ್ರೀಕ್ಷೇತ್ರಕ್ಕೆ ದಾರುಶಿಲ್ಪ ವೈಭವ

361
0
SHARE

ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಎ. 27ರಿಂದ ಆರಂಭಗೊಂಡು ಮೇ 4ರ ತನಕ ನಡೆಯಲಿರುವ ಅಷ್ಟಬಂಧ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ವಾರ್ಷಿಕ ಮಹೋತ್ಸವ ಮತ್ತು ನಾಗಮಂಡಲದ ಪ್ರಯುಕ್ತ ನೂತನ ಬಡಗು ಮಂಟಪ, ರಾಜಗೋಪುರ, ಮುಖಮಂಟಪ ಸಹಿತ ಸುತ್ತುಪೌಳಿಯ ಸಮರ್ಪಣೆ ನಡೆಯಲಿದೆ.

ಗರ್ಭಗುಡಿಗೆ ದಾರುಶಿಲ್ಪ ಸಂಭ್ರಮಿಸುವಂತಿರುವ ಮುಖಮಂಟಪವನ್ನು ಜೋಡಿಸಲಾಗಿದೆ. ಚತುರಸ್ರ ಆಕಾರದಲ್ಲಿದ್ದ ಗರ್ಭಗುಡಿ ಈಗ ಮುಖಮಂಟಪ ಸಹಿತವಾದ ಪ್ರಾಸಾದದಂತೆ ಕಾಣುತ್ತದೆ. ನೂತನ ಅಳವಡಿಕೆಯು ಗರ್ಭಗುಡಿಗೆ ದೀಪದಳಿಯನ್ನು ಜೋಡಿಸಿದಂತಿದೆ. ದೀಪದಳಿಯು ಚಾರೆಗುಂಟ ಮಾದರಿಯಲ್ಲಿ ಜೋಡಿಸಲ್ಪಟ್ಟಿದೆ. ಮರದ ರಚನೆಯು ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಮುಂಭಾಗದ ದಾರಂದದಲ್ಲಿ ಕೆತ್ತಿರುವ ಕೀರ್ತಿಮುಖ ಆಕರ್ಷಣೀಯವಾಗಿದೆ. ದ್ವಾರ ಶಾಖೆಯಲ್ಲೂ ಸಂದರ ಕೆತ್ತನೆಗಳಿವೆ. ಐದು ಹಂತಗಳಲ್ಲಿ ಉಬ್ಬು ಚಿತ್ರಗಳನ್ನು ಅಳವಡಿಸಲಾಗಿದೆ.

ದೀಪದಳಿಯ ನಾಲ್ಕು ದಿಕ್ಕುಗಳಲ್ಲಿ ಕಡೆಗೋಲನ್ನಿರಿಸಿ ಶ್ರೀ ಕೃಷ್ಣನ ಸುಂದರ ಮಂದಿರಗಳ ನಗರವೆನ್ನುವುದನ್ನು ನೆನಪಿಸುತ್ತದೆ. ಬಾಗಿಲವಾಡದಲ್ಲಿ ಶಂಖ, ಚಕ್ರ, ಗದಾ, ಪದ್ಮ ಹಾಗೂ ದೀಪ ಮುಂತಾದ ಉಬ್ಬು ಚಿತ್ರಗಳಿವೆ. ಸಪ್ತಮಾತೃಕೆಯರು, ನವಗ್ರಹಗಳು, ವಿಶ್ವಕರ್ಮ ಸಹಿತ ಗಣಪತಿ, ಸುಬ್ರಹ್ಮಣ್ಯ, ಅಯ್ಯಪ್ಪ, ಸತ್ಯನಾರಾಯಣ, ಲಕ್ಷ್ಮೀ , ಸರಸ್ವತಿ, ಪಾರ್ವತಿ ಮುಂತಾದ ದೇವಾನು ದೇವತೆಗಳನ್ನು, ಮಹರ್ಷಿಗಳನ್ನು, ದಶಾವತಾರ, ಬಸವ, ಮಾಚಿದೇವ, ಮಧ್ವ ಶಂಕರರೇ ಮೊದಲಾದ ಸಂತರು, ಫ‌ಲವಸ್ತುಗಳು, ತುಳುನಾಡಿನ ಬದುಕಿಗೆ ಅಗತ್ಯದ ಹಾಗೂ ಕೃಷಿ ಸಂಸ್ಕೃತಿಯ ಮರೆಯಾಗುತ್ತಿರುವ ವಿಷಯಗಳ ಚಿತ್ರಗಳು.

ಚೆನ್ನೆಮಣೆ, ಸಂಗೀತ, ನೃತ್ಯ ದೃಶ್ಯಗಳು ಮತ್ತು ಉಪಕರಣಗಳು, ಯಕ್ಷಗಾನ ಮುಂತಾದ ಚಿತ್ತಾರಗಳನ್ನು ಮರದಲ್ಲಿ ಪಡಿಮೂಡಿಸಿ ಅಳವಡಿಸಿರುವ ದಾರುಶಿಲ್ಪಿ ಪೇರಲ್ಕೆ ಜಗದೀಶ ಆಚಾರ್ಯರು ವಿವರಿಸಿದಷ್ಟು ಹಂತ ಹಂತವಾಗಿ ಬರೆಯಲಾಗಲಿಲ್ಲ. ಆದರೆ ಗರ್ಭಗುಡಿಗೆ ಹೊಂದಿಸಲಾದ ದಾರು ಶಿಲ್ಪದ ಅಲಂಕರಣವು ಶಿಲ್ಪಿಯ ಚಿಂತನೆ, ನಿರ್ಮಿಸುವ ತಂತ್ರದ ಅಭಿವ್ಯಕ್ತಿಯಾಗಿದೆ.

ರಾಜಗೋಪುರ – ಮುಖಮಂಟಪ
ನಾಲ್ಕು ಮರಗಳ ವಿನ್ಯಾಸವಿರುವ ರಾಜಗೋಪುರ ಪ್ರಕೃತಿ ಸಹಜವಾಗಿ, ಭೂಮಿಯಿಂದ ಮೇಲೆದ್ದು ಬಂದಂತೆ ಭಾಸವಾಗುವ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮರದ ಬುಡದಲ್ಲಿ ಹಸುರು ಹಾಸನ್ನು ಅಳವಡಿಸಿರುವುದರಿಂದ ಮತ್ತಷ್ಟು ನಿಸರ್ಗದೊಂದಿಗೆ ಸಂವಾದಿಯಾಗುತ್ತದೆ. ಇದು ಉದ್ಘಾಟನೆಗೊಳ್ಳಲಿದೆ. ಬಡಗು ಬದಿಯ ಮಂಟಪವೂ ಸಿದ್ಧಗೊಂಡಿದ್ದು ಅನಾವರಣಗೊಳ್ಳಲಿದೆ. ಗರ್ಭಗುಡಿಗೆ ನೂತನವಾಗಿ ಹೊಂದಿಸಲಾದ ಮುಖಮಂಟಪ ಮತ್ತು ಸುತ್ತುಪೌಳಿಯು ಅಮ್ಮನಿಗೆ ಅರ್ಪಿಸಲು ಅಣಿಗೊಂಡಿವೆ. ಪ್ರತಿಷ್ಠಾಪಿತ ಮೂಲ ಸನ್ನಿಧಾನವನ್ನು ಅಷ್ಟಬಂಧದ ಮೂಲಕ ದೃಢಗೊಳಿಸಿ ಪುನಃಪ್ರತಿಷ್ಠೆ ತದಂಗವಾಗಿ ಬ್ರಹ್ಮಕಲಶಾಭಿಷೇಕ ನೆರವೇರಲಿದೆ.

LEAVE A REPLY

Please enter your comment!
Please enter your name here