Home Uncategorized ಪ್ರದಕ್ಷಿಣೆ ಯಾಕೆ ಆರಂಭವಾಗಿರಬಹುದು?

ಪ್ರದಕ್ಷಿಣೆ ಯಾಕೆ ಆರಂಭವಾಗಿರಬಹುದು?

4467
0
SHARE
 ದೇವಾಲಯಕ್ಕೆ ಹೋದಾಗ ಪ್ರದಕ್ಷಿಣೆ ಹಾಕಿ ನಮಸ್ಕರಿಸುವುದು ಸಂಪ್ರದಾಯ. ಎಲ್ಲಾ ದೇವಾಲಯಗಳಲ್ಲಿಯೂ ಪ್ರದಕ್ಷಿಣಾಪಥ ಇದ್ದೇ ಇರುತ್ತದೆ. ದೇವರ ಬಲಭಾಗದಿಂದ ಮತ್ತು ನಮ್ಮ ಬಲಬದಿಯಿಂದ ದೇವಾಲಯದ ಗರ್ಭಗುಡಿಯ ಸುತ್ತ ಸುತ್ತುವುದು ಕ್ರಮ. ದೇವಾಲಯಗಳಲ್ಲಿ ಗರ್ಭಗುಡಿಗೆ ಸುತ್ತು ಬರುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅನಾದಿ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಇದು ಒತ್ತಾಯ ಪೂರ್ವಕ ಸಂಪ್ರದಾಯವಲ್ಲ. ಜನರು ಸಮಾಯವಕಾಶವಿದ್ದಾಗ ಅಥವಾ ಮನಸ್ಸಿದ್ದಾಗ ಸುತ್ತು ಬಂದು ನಮಸ್ಕರಿಸುತ್ತಾರೆ. ಆದರೆ ಈ ಪ್ರದಕ್ಷಿಣೆ ಆರಂಭ ಯಾಕಾಗಿರಬಹುದು ಮತ್ತು ಅದರಿಂದಾಗುವ ಪ್ರಯೋಜನವಾದರೂ ಏನು? ಎಂಬುದನ್ನು ಚಿಂತಿಸುತ್ತ ಹೋದರೆ ಸರಳ ಉತ್ತರ ಸಿಗುತ್ತದೆ.
ಗಣಪತಿ ಮತ್ತು ಸುಬ್ರಹ್ಮಣ್ಯನಿಗೆ ಶಿವಪಾರ್ವತಿಯರು ಜಗತ್ತನ್ನು ಸುತ್ತಿಬನ್ನಿ ಎಂದು ಹೇಳಿದಾಗ ಸುಬ್ರಹ್ಮಣ್ಯ ನವಿಲನ್ನೇರಿ ಜಗತ್ತನ್ನು ಸುತ್ತಲು ಹೊರಟೇ ಬಿಟ್ಟ. ಆದರೆ ಗಣಪತಿ ತನ್ನ ಗಜಕಾಯದಿಂದ ಅಣ್ಣನಷ್ಟು ಸಲೀಸಾಗಿ ಜಗತ್ತನ್ನು ಸುತ್ತಲು ಸಾಧ್ಯವಿಲ್ಲ ಎಂದು ಯೋಚಿಸುತ್ತ ತನ್ನ ತಂದೆತಾಯಿ ಅಂದರೆ ಶಿವಪಾರ್ವತಿಯರಿಗೇ ಮೂರು ಸುತ್ತು ಬಂದ. ಆಗ ಶಿವಪಾರ್ವತಿಯರು ಗಣಪತಿಯನ್ನು ಮೆಚ್ಚಿಕೊಳ್ಳುತ್ತಾರೆ. ಅಂದರೆ ದೇವರೇ ಜಗತ್ತು ಅರ್ಥಾತ್ ದೇವರನ್ನು ಸುತ್ತಿದರೆ ಜಗತ್ತನ್ನೇ ಸುತ್ತಿದಂತೆ ಎಂಬುದನ್ನು ಈ ಕಥೆ ಬಿಂಬಿಸುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ದೇವಾಲಯಗಳಲ್ಲಿ ಪ್ರದಕ್ಷಿಣೆ ಹಾಕುವ ಸಂಪ್ರದಾಯವನ್ನು ಹೇಳಲಾಗುತ್ತದೆ.
ಅಲ್ಲದೆ ಪ್ರತಿಯೊಂದು ದೇವಾಲಯ ಸುತ್ತಲೂ ಆಯಾದೇವಾಲಯದ ಮೂಲ, ಪುರಾಣಗಳು, ಶಕ್ತಿ ಮೊದಲಾದ ಸಂಗತಿಗಳನ್ನು ಭಿತ್ತರಿಸುವ ಶಿಲೆಗಳಿಂದ ಕೆತ್ತಿದ ಆಕೃತಿಗಳು ಹಾಗೂ ಗೋಡೆಗಳಲ್ಲಿ ಬಿಡಿಸಲಾದ ಚಿತ್ರಗಳು ಕಂಡುಬರುತ್ತವೆ.
ಇವುಗಳನ್ನು ನೋಡಿ ಅ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಸುತ್ತುಬರುವ ಕ್ರಮ ಆರಂಭವಾಯಿತು. ಇನ್ನು ಕೆಲವು ದೇವಾಲಯಗಳಲ್ಲಿ ಆ ದೇವರಿಗೆ ಸಂಬಂಧಪಟ್ಟ ಶ್ಲೋಕಗಳನ್ನು ಸುತ್ತಲೂ ಪ್ರದರ್ಶನಕ್ಕಟ್ಟಿರುತ್ತಾರೆ. ದೇವಾಲಯಗಳೆಂದರೆ ಒಂದು ಧನಾತ್ಮಕ ಪರಿಸರವಿರುವ ಸ್ಥಳ. ದೇವಾಲಯ ಎಷ್ಟೇ ದೊಡ್ಡ ಪೇಟೆಯ ಮಧ್ಯವಿದ್ದರೂ ದೇವಾಲಯದೊಳಗೆ ಕಾಲಿಟ್ಟರೆ ಅಲ್ಲೊಂದು ಮೌನದ, ಮನಸ್ಸಿಗೆ ಮುದ ನೀಡುವ ವಾತಾವರಣ ಇದ್ದೇ ಇರುತ್ತದೆ. ಅಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಪ್ರದಕ್ಷಿಣೆ ಸಹಾಯಕವಾಗುತ್ತದೆ. ಇನ್ನು ತುಂಬಾ ಜನಸಂದಣಿಯಿರುವಾಗ ನಿಂತಲ್ಲೇ ನಿಂತು ನಮಸ್ಕರಿಸುತ್ತ ನಿಂತಿದ್ದರೆ ನಮಗೂ ಕಷ್ಟ;  ಇತರರಿಗೂ ಕಷ್ಟ.
ಪ್ರದಕ್ಷಿಣೆ ಎಂಬುದಕ್ಕೆ ಕಲಾತ್ಮಕವಾಗಿ ಸುತ್ತು ಬರುವುದು ಎಂಬರ್ಥವಿದೆ. ಈ ಪ್ರದಕ್ಷಿಣೆಯೂ ನಮ್ಮ ಮನಸ್ಸನ್ನು ಹಿಡಿದಿಡುವ ಸೂತ್ರವೇ. ದೇವಾಲಗಳಲ್ಲಿದ್ದಾಗ ನಮ್ಮ ಮನಸ್ಸು ಚಂಚಲವಾಗಿ ಹೊರಜಗತ್ತಿನತ್ತ ಅಂದರೆ ಅಲೌಕಿಕ ಸಂಗತಿಗಳ ಬಗ್ಗೆ ಗಮನ ಹರಿಸದೇ ದೇವರತ್ತ ಚಿತ್ತವಿರಿಸಿ ಏಕಾಗ್ರತೆಯನ್ನು ಸಾಧಿಸಿ ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಒಂದು ಉತ್ತಮ ಮಾರ್ಗವೂ ಹೌದು. ದೇವರ ಪುರಾಣ ಕತೆಗಳನ್ನು ಓದುತ್ತ ತಿಳಿಯತ್ತ, ಶ್ಲೋಕಗಳನ್ನು ಪಠಿಸುತ್ತ ಆ ಮೂಲಕ ನಮ್ಮ ಚಿಂತನಾಕ್ರಮವನ್ನು ಧನಾತ್ಮಕವಾಗಿ ಬೆಳಸಿಕೊಳ್ಳಲು ಇದು ಸಹಾಯಕವಾಗಿದೆ.
ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿಚ|
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ||
ಎಂಬ ಶ್ಲೋಕವನ್ನು ಸುತ್ತು ಬರುವಾಗ ಸಾಮಾನ್ಯವಾಗಿ ಪಠಿಸಲಾಗುತ್ತದೆ.
ಈ ಸುತ್ತು ಬರುವುದು ಜಗತ್ತಿನ ನಿಯಮವೂ ಹೌದು. ಭೂಮಿ ತನ್ನನ್ನು ಸುತ್ತುತ್ತಾ ಸೂರ್ಯನನ್ನು ಸುತ್ತುತ್ತಿದೆ. ಜಗತ್ತಿನ ಆಗುಹೋಗುಗಳಿಗೆಲ್ಲ ಕಾರಣವೇ ಈ ಸುತ್ತುವಿಕೆ. ಅಂದರೆ ಜನಜೀವನದ ಮೂಲತತ್ತ್ವ ನಿಂತಲ್ಲಿ ನಿಲ್ಲದೆ ಸುತ್ತುತ್ತಲೇ ಇದ್ದಾಗ ಮಾತ್ರ ಜೀವನ ಮುನ್ನಡೆಯುತ್ತದೆಂಬ ಸೂಚಕವೂ ಇದಾಗಿದೆ.
ಪ್ರದಕ್ಷಿಣೆಯ ಅರಿಕೆ: ದೇವರನ್ನು ಸುತ್ತುತ್ತಾ ತನ್ನಲ್ಲಿರುವ ತಪ್ಪುನಡೆಗಳನ್ನು ತೊಡೆದು ಹಾಕಲು ತೆರೆದುಕೊಳ್ಳುವ ಅವಕಾಶವೇ ಈ ಪ್ರದಕ್ಷಿಣೆ.
   ||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here