Home ನಂಬಿಕೆ ಸುತ್ತಮುತ್ತ ಮನುಷ್ಯನ ಮೂಲ ಶತ್ರು ಯಾರು?

ಮನುಷ್ಯನ ಮೂಲ ಶತ್ರು ಯಾರು?

2506
0
SHARE

ಈಗ ಅಂತ ಅಲ್ಲ ಶತ್ರುಗಳು ಇಲ್ಲದ ಕಾಲ ಎಂದಿಗೂ ಸಿಗದು. ಹಿಂದೆಯೂ ಇರಲಿಲ್ಲ; ಮುಂದೆಯೂ ಬರುವದಿಲ್ಲ. ಸುಮ್ಮನೆ ಇದ್ದವನಿಗೂ ಶತ್ರುಗಳು ಇದ್ದಾರೆ. ಹುಟ್ಟು ಮೂಗನಿಗೂ ಅಥವಾ ಮೌನಿಗೂ ಶತ್ರುಗಳಿದ್ದಾರೆ. ಕಾರಣ ಎಲ್ಲರಲ್ಲಿಯೂ ವಾಸವಾಗಿರುವ ಅರಿಷಡ್ವರ್ಗಗಳು. ಇವುಗಳಿಗೆ ಬಲಿಯಾಗುವ ಮನಸ್ಸು! ನನಗೆ ಯಾರೊಂದಿಗೂ ಜಗಳವಾಗಲಿ ವೈಷಮ್ಯವಾಗಲಿ ಬಾರದಿರಲಿ. ಎಲ್ಲರೂ ಒಂದಾಗಿ ನೆಮ್ಮದಿಯಿಂದ ಬದುಕುವ ದಿನಗಳೇ ಬರಲಿ ಎಂಬುದು ಎಲ್ಲರ ಆಶಯ. ಅದರೆ ಬದುಕು ಅಷ್ಟು ಸುಲಭವಾಗಿ ಈ ಆಶಯವನ್ನು ಪೂರ್ಣಗೊಳಿಸಲು ಬಿಡದು.

ದೇವರಿಗೇ ಶತ್ರುಗಳಿರುವಾಗ ಹುಲುಮಾನವ ಅದರಲ್ಲೂ ಚಂಚಲ ಚಿತ್ತವುಳ್ಳವ, ಒಮ್ಮೆ ಭಾವುಕನೂ ಇನ್ನೊಮ್ಮೆ ಸಜ್ಜನನೂ ಮತ್ತೊಮ್ಮೆ ಸ್ವತಃ ರಾಕ್ಷಸನೂ ಆಗಿ ಬಿಡುವ ಬುದ್ಧಿಯುಳ್ಳ ಮನುಷ್ಯನಿಗೆ ಶತ್ರುಗಳಿಲ್ಲವೆಂದರೆ ಅದು ಜಗತ್ತನ ಅದ್ಭುತಗಳ ಸಾಲಲ್ಲಿ ಸೇರೀತು. ಇವತ್ತಿನವರೆಗೂ ವೈಷಮ್ಯಕ್ಕೆ ವಿಶೇಷವಾದ ಅಥವಾ ವಿಷಪೂರಿತವಾದ ಕಾರಣಗಳು ಕಡಮೆಯೇ! ಅದರೂ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಶತ್ರುಗಳನ್ನು ಹೊಂದಿದವರೇ. ಪರಾವಲಂಬಿಯಾಗುತ್ತಲೇ ವೈರತ್ವವೂ ಎಲ್ಲೊ ಬೆಳೆಯುತ್ತಲೇ ಇರುತ್ತದೆ. ಇದು ಅತಿರೇಕಕ್ಕೆ ಹೋದಾಗ ಯುದ್ಧಕ್ಕೆ ಕಾರಣವಾಗುತ್ತದೆ ಮತ್ತು ನಾಶಕ್ಕೆ ನಾಂದಿಯಾಗುತ್ತದೆ.

ಈ ವೈರತ್ವದಿಂದ ಏನು ದೊರಕೀತು? ಇದು ಬದುಕಿನ ಅನಿವಾರ್ಯವೇ? ಅಥವಾ ಇದೇ ಬದುಕೇ? ಮುಂದೆ ಮುಕ್ತಿಯನ್ನರಸುವ ಮನಸ್ಸಿಗೆ ಇದು ಪೂರಕವೇ? ಎಂದು ಕೇಳಿಕೊಳ್ಳುತ್ತ ಹೋದರೆ ವೈರತ್ವದಿಂದ ಉಂಟಾಗುವ ಅನಾಹುತಗಳಲ್ಲಿ ಮುಕ್ತಿ ಸಿಗದ ಸ್ಥಿತಿಯೂ ಒಂದು ಎಂಬ ಉತ್ತರವನ್ನು ಧರ್ಮ ಹೇಳುತ್ತದೆ. ಭಗವದ್ಗೀತೆಯ ಧ್ಯಾನಯೋಗದಲ್ಲಿ ನಮ್ಮ ನಿಜವಾದ ಅಥವಾ ಮೂಲ ಶತ್ರು ಯಾರು ಎಂಬುದಕ್ಕೆ ಉತ್ತರವಿದೆ. ಇಲ್ಲಿ ಇದಕ್ಕೆ ಸಂಬಂಧಿಸಿ ಎರಡು ಶ್ಲೋಕಗಳಿವೆ.

ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್|
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ||೫||
ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ|
ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್ ||೬||

ಮನುಷ್ಯನು ತನ್ನ ಮನಸ್ಸಿನ ಸಹಾಯದಿಂದಲೇ ತನ್ನನ್ನು ಉದ್ಧಾರ ಮಾಡಿಕೊಳ್ಳಬೇಕು. ತನ್ನನ್ನು ಹೀನೈಸಿಕೊಳ್ಳಬಾರದು. ಬದ್ಧಜೀವಿಗೆ ಮನಸ್ಸೇ ಬಂಧು ಮತ್ತು ಮನಸ್ಸೇ ಶತ್ರು. ಹಾಗೂ ಯಾರು ಮನಸ್ಸನ್ನು ಗೆದ್ದಿದ್ದಾರೋ ಅವನಿಗೆ ಮನಸ್ಸೇ ಅತ್ಯಂತ ಒಳ್ಳೆಯ ಬಂಧುವಾಗುತ್ತದೆ. ಆದರೆ ಮನಸ್ಸನ್ನು ಗೆಲ್ಲದೇ ಇದ್ದವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ ಎಂಬುದು ಈ ಎರಡು ಶ್ಲೋಕಗಳ ಅರ್ಥ ಮತ್ತು ಜೀವನದ ಅರ್ಥ ಕೂಡ.

ಮನಸ್ಸೇ ಎಲ್ಲವದಕ್ಕೂ ಮೂಲ ಕಾರಣ. ಮನಸ್ಸೇ ಮಿತ್ರ ಮತ್ತು ಮನಸ್ಸೇ ನಮ್ಮ ಮೂಲ ಶತ್ರು. ಮನಸ್ಸು ಹಿಡಿತದಲ್ಲಿದ್ದಾಗ ಅರಿಷಡ್ವರ್ಗಗಳು ದಾಳಿ ಮಾಡುವುದಿಲ್ಲ. ಒಬ್ಬನನ್ನು ದ್ವೇಷಿಸುವುದಕ್ಕೂ ಪ್ರೀತಿಸುವುದಕ್ಕೂ ಮನಸ್ಸೇ ಕಾರಣ. ಮನಸ್ಸಿನಿಂದಲೇ ಸಾಧ್ಯ. ಕಾಮ, ಕ್ರೋಧ, ಮದ, ಮತ್ಸರಗಳು ಮನಸ್ಸನ್ನು ನಿಯಂತ್ರಿಸ ತೊಡಗಿದಾಗ ನಮ್ಮೊಳಗೆ ಶತ್ರುಭಾವಗಳು ಹುಟ್ಟುತ್ತವೆ. ಮನಸ್ಸು ನಮ್ಮ ಹತೋಟಿಯಲ್ಲಿದ್ದಾಗ ಸನ್ಮಾರ್ಗವಷ್ಟೇ ನಮಗೆ ಗೊಚರವಾಗುತ್ತದೆ. ಒಂದು ಸಣ್ಣ ಅಸೂಯೆ ಸಾಕು ನಿನ್ನೆಯ ತನಕ ಪ್ರೀತಿ ಪಾತ್ರರಾಗಿದ್ದವರು ಇವತ್ತು ವೈರಿಯಾಗಲು. ಒಂದು ಸಿಟ್ಟು ಬದುಕಿನ ಸೌಂದರ್ಯವನ್ನು ಕ್ಷಣಾರ್ಧದಲ್ಲಿ ಹಾಳು ಮಾಡಿಬಿಡುತ್ತದೆ. ಸ್ಥಿರವಾದ ಮನಸ್ಸು ಮಾತ್ರ ತುಂಬಿದ ಕೊಡದಂತೆ. ತುಳುಕಾಟವಿಲ್ಲದ, ಹೊಯ್ದಾಟವಿಲ್ಲದ ಸಮಾಧಾನದ ಸ್ಥಿತಿ. ಮನಸ್ಸಿಗೆ ಶಾಂತಿ ಇಲ್ಲ ಎಂಬುದರ ಅರ್ಥ ಅದು ಚಂಚಲವಾಗಿದೆ, ಇಲ್ಲದ್ದನ್ನು ಬಯಸುತ್ತಿದೆ ಎಂದೇ ಅರ್ಥ. ಹಾಗಾಗಿಯೇ ಇದು ನಮ್ಮ ಮೊದಲ ಶತ್ರು. ಮನಸ್ಸನ್ನು ಗೆದ್ದು ಮಿತ್ರನನ್ನಾಗಿಸಿಕೊಳ್ಳುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಭಕ್ತಿ, ಧ್ಯಾನ, ಪೂಜೆ, ದೇವರು, ದೇವರದೀಪ, ಅಭಿಷೇಕ, ಆರತಿ ಎಲ್ಲವೂ ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತ, ಅದರ ಮೇಲೆ ಹಿಡಿತ ಸಾಧಿಸಲು ಇರುವ ಸುಗಮ ದಾರಿಗಳು!

ವಿಷ್ಣು ಭಟ್ ಹೊಸ್ಮನೆ.

LEAVE A REPLY

Please enter your comment!
Please enter your name here