Home ನಂಬಿಕೆ ಸುತ್ತಮುತ್ತ ಕಣ್ಣಿಗೆ ಕಾಣುವ ದೇವರು ಯಾರು?

ಕಣ್ಣಿಗೆ ಕಾಣುವ ದೇವರು ಯಾರು?

2923
0
SHARE

ಈ ಕಲಿಯುಗದಲ್ಲಿ ದೇವರನ್ನು ಕಂಡವರಿಲ್ಲ. ದೇವರಿದ್ದಾನೆಂಬ ಅರಿವು ಬದುಕಿನ ದಾರಿಯನ್ನು ನಿರ್ಮಿಸಿದೆ. ಮತ್ತು ಆ ಅರಿವಿನ ಮೂಲ ಶಕ್ತಿಯೂ ದೇವರೇ ಆಗಿರುವುದರಿಂದ ದೇವರನ್ನು ಎಲ್ಲರೂ ಕಂಡಿದ್ದಾರೆ. ಇಲ್ಲ ನಾನು ದೇವರನ್ನು ನೋಡಲೇ ಇಲ್ಲ ಎನ್ನುವುದು ನಮ್ಮ ಆಲೋಚನೆಯ ಸಂಕೀರ್ಣ ಸ್ವರೂಪ. ಕಣ್ಣಿಗೆ ಕಾಣುವ ದೇವರು ನಮ್ಮಿದುರಿಗೆ ಓಡಾಡುತ್ತಿದ್ದಾನೆಂದರೆ ಆಶ್ಚರ್ಯವೂ ಅಲ್ಲ; ಉತ್ಪ್ರೇಕ್ಷೆಯೂ ಅಲ್ಲ. ಹಾಗಾದರೆ ಆ ದೇವರು ಅಂದರೆ ಕಣ್ಣಿಗೆ ಕಾಣುವ ದೇವರು ಯಾರು?

ದೇವರು ಎಂದರೆ ಅತಿಮಾನುಷ ಶಕ್ತಿ. ಮನುಷ್ಯನನ್ನು ಮೀರಿದ್ದು, ಕಣ್ಣಿಗೆ ಕಾಣದ್ದು ಎಲ್ಲ ಕ್ರಿಯೆಗಳಿಗೆ ಮೂಲ ಕಾರಣವಾದದ್ದನ್ನು ನಾನು ದೇವರು ಎಂದು ಕೊಳ್ಳುತ್ತೇನೆ. ನನ್ನ ಪ್ರಕಾರ ವಿಜ್ಞಾನ ಎಷ್ಟೇ ಮುಂದುವರಿದು ಜಗತ್ತಿನ ಆಗುಹೋಗುಗಳಿಗೆ ವೈಜ್ಞಾನಿಕ ಕ್ರಿಯೆ, ಕಾರಣಗಳನ್ನು ನೀಡಿದರೂ ಆ ಕಾರಣವನ್ನು ಹುಡುಕುವ ಶಕ್ತಿ ಅಥವಾ ಬುದ್ಧಿಯನ್ನು ಕೊಟ್ಟಿದ್ದಾದರೂ ಯಾರೆಂದರೆ ಅದು ದೇವರೇ ಎಂಬುದು ನನ್ನ ಬಲವಾದ ನಂಬಿಕೆ. ಆದರೆ ಅದು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಜಗತ್ತಿನಲ್ಲಿರುವ ಎಲ್ಲ ಶಕ್ತಿಗಳು ಕಾಣಲೇ ಬೇಕೆಂದೇನಿಲ್ಲವಲ್ಲ. ಇದು ಕಾಣದ ದೇವರು ಮತ್ತು ಕೈ ಬಿಡದ ದೇವರ ಬಗೆಗಿನ ಮಾತು. ಈ ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಇದ್ದಾನೆ ಅದರಿಂದಾಗಿಯೇ ಇವತ್ತಿಗೂ ಜಗತ್ತು ಕೆಲವಷ್ಟು ನೀತಿ ನಿಯಮಗಳು ಪಾಲಿಸಲ್ಪಡುತ್ತಿವೆ.

ಕಣ್ಣಿಗೆ ಕಾಣುವ ದೇವರೆಂದರೆ ಗುರು. ಅರಿವಿನ ಅಕ್ಷರವನ್ನು ಮನಸ್ಸಿನೊಳಗೆ ತುಂಬುವ ಗುರುವೇ ದೇವರು. ದೇವರನ್ನು ಕಾಣಲು ಬೇಕಾಗುವ ಪರಿಕರವನ್ನು ಒದಗಿಸಿಕೊಡುವ ಅಥವಾ ಸನ್ಮಾರ್ಗವನ್ನು ತೋರಿಕೊಡುವ ಮಹಾನ್ ಕಾರ್ಯ ಮಾಡುವ ಜೀವಂತ ವಿಶೇಷ ಶಕ್ತಿಯೆಂದರೆ ಗುರು. ಇದರಿಂದಾಗಿಯೇ

ಗುರುಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಿ ಶ್ರೀ ಗುರುವೇ ನಮಃ || ಎಂದು ನಮಸ್ಕರಿಸುತ್ತೇವೆ. ಇದು ಗುರುವೇ ಸರ್ವಸ್ವ ಎಂದು ಸಾರುವ ಸಂಸ್ಕೃತದ ಶ್ಲೋಕ.

ನಾವು ದೇವರನ್ನು ಸೇರಲು ಬಯಸುತ್ತೇವೆ. ಅದಕ್ಕೆ ದಾರಿಯನ್ನು ತೋರಿಸಿ ಕೈಹಿಡಿದು ನಡೆಸುವವನು ಗುರು. ಹೊರ ಜಗತ್ತಿನ ಮುಖವನ್ನು ಪರಿಚಯಿಸುತ್ತ ಜೊತೆಗೆ ಲೋಕಕ್ಕೆ ನಮ್ಮನ್ನು ಅನಾವರಣ ಮಾಡುವವನೇ ಗುರು. ಶಿಶುತನ ಎಂಬುದು ಒಂದು ಆಕೃತಿ ರಚನೆಗೆ ತಯಾರಿಸಿಟ್ಟ ಜೇಡಿಮಣ್ಣಿನಂತೆ. ಅದಕ್ಕೆ ಸ್ಪಷ್ಟ ಆಕಾರ ಕೊಡಲು ಅಪ್ಪ ಅಮ್ಮನ ಪರಿಶ್ರಮವಿದ್ದರೂ ಅದರ ಪರಿಪೂರ್ಣತೆಗೆ ಗುರುವಿನ ಮೊರೆ ಹೋಗಲೇ ಬೇಕು.

ಯಾಕೆಂದರೆ ಮಮತೆಯ ಕಣ್ಣುಗಳು ಕೆಲವೊಮ್ಮೆ ತಂದೆತಾಯಿಯರನ್ನು ಬಂಧಿಸಿಬಿಡುವ ಅವಕಾಶ ಹೆಚ್ಚಿರುವುದರಿಂದ ಮಗು ತಪ್ಪುದಾರಿ ಹಿಡಿಯಲು ಕಾರಣವಾಗಬಹುದು. ಆದರೆ ಗುರುವಿಗೆ ಮಗುವಿನ ಮೇಲೆ ಪ್ರೀತಿಯಿದ್ದರೂ ಆತ ಶಿಕ್ಷಿಸಿಯಾದರೂ ತಪ್ಪನ್ನು ತಿದ್ದಿ ಸರಿದಾರಿಗೆ ತರಬಲ್ಲ. ಇಂದು ಜಗತ್ತಿನಲ್ಲಿ ಜೀವನದಲ್ಲಿ ಮಹತ್ತರ ಸಾಧನೆಯನ್ನು ಮಾಡಿದವರ ಹಿಂದೆ ಗುರಗಳ ಶಕ್ತಿ ಇದೆ ಎಂಬುದು ಸರ್ವಸಮ್ಮತವಾದುದು.

ಇನ್ನು ನಿಸ್ವಾರ್ಥ ಪ್ರೀತಿಯನ್ನು ಯಾರು ಕೊಡುತಾರೆಂದು ಕೇಳಿದರೆ ಅದಕ್ಕೂ ಉತ್ತರ ಗುರು. ಮಿತ್ರರು, ಬಂಧುಗಳು ಕೊಡುವ ಪ್ರೀತಿಯಲ್ಲಿ ಮುಂದೆಲ್ಲೋ ನಮಗೆ ಸಹಾಯಕ್ಕಾಗಬಹುದೆಂಬ ಸ್ವಾರ್ಥವಿರುತ್ತದೆ. ತಂದೆ ತಾಯಿಯರೂ ತಮ್ಮ ಮುದಿತನದಲ್ಲಿ ನಮ್ಮನ್ನು ಮಕ್ಕಳು ನೋಡುತ್ತಾರೆಂಬ ಅರಿವಿಲ್ಲದ ಸ್ವಾರ್ಥ ಇದ್ದೇ ಇರುತ್ತದಂತೆ. ಆದರೆ ಗುರುವಿಗೆ ತನ್ನ ಶಿಷ್ಯನ ಮೇಲೆ ಪ್ರೀತಿ ತೋರುವಾಗ ಯಾವುದೇ ಸ್ವಾರ್ಥವಿರದೆ ಆ ಮಗುವಿನ ಶ್ರೇಯಸ್ಸಿಗೋಸ್ಕರ ಪ್ರೀತಿಂದಲೇ ಜ್ಞಾನವನ್ನು ಧಾರೆಯೆರೆಯುತ್ತಾನೆ. ಆದುದರಿಂದಲೇ ಕಣ್ಣಿಗೆ ಕಾಣುವ ದೇವರೆಂದರೆ ಗುರು.

ಗುರು ಶಕ್ತಿ: ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಒಯ್ಯುವ ನಿಸ್ವಾರ್ಥ ಪ್ರೀತಿಯ ಪೂಜ್ಯನೀಯ ಶಕ್ತಿ. ಅಂತಹ ಗುರುವಿಗ ಸಾಷ್ಟಾಂಗ ವಂದನೆ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here