ಓಂ ಭುಜಂಗೇಶಾಯ ನಮಃ
ಭುಜಂಗೇಶಾಯ ವಿದ್ಮಹೇ ಸರ್ಪರಾಜಾಯ ಧೀಮಹಿ| ತನ್ನೋ ನಾಗಃ ಪ್ರಚೋದಯಾತ್ಣ|
ದೇವರು ಸರ್ವರಲ್ಲೂ ಇದ್ದಾನೆ; ಸಕಲದಲ್ಲೂ ಇದ್ದಾನೆ. ನೆಲ, ಜಲ, ವಾಯು, ಬೆಂಕಿ, ಮರ ಗಿಡ, ಹೂವು ಹಣ್ಣು, ಪ್ರಾಣಿ ಪಕ್ಷಿ, ಮನುಜ.. ಹೀಗೆ ಎಲ್ಲವುಗಳಲ್ಲೂ ದೇವನಿದ್ದಾನೆ. ಇವುಗಳಲ್ಲಿ ಕೆಲವನ್ನು ಪೂಜಿಸುವ ಸಂಪ್ರದಾಯ ಹಿಂದಿನ ಕಾಲದಿಂದ ನಡೆದು ಬಂದಿದೆ. ಅಂತಹ ದೇವತಾರೂಪಗಳಲ್ಲಿ ನಾಗನೂ ಒಂದು. ಆದಿಶೇಷನೆಂಬ ನಾಗದೇವರು ಈ ಭೂಮಿಯನ್ನು ಹೊತ್ತುಕೊಂಡಿದ್ದಾನೆಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಅಂದರೆ ನಾವು ದೇವರ ಕೃಪೆಯಿಂದಲೇ ಬದುಕುತ್ತಿದ್ದೇವೆ ಎನ್ನುವುದರ ಪ್ರತೀಕವಿದು.
ಇಡೀ ಭೂಮಿಯ ನಾಗದೇವನ ಆಳ್ವಿಕೆಗೆ ಒಳಪಟ್ಟಿದೆ. ನಾಗದೇವನ ಆಶೀರ್ವಾದ ಎಲ್ಲರಿಗೂ ಇದ್ದೇ ಇದೆ. ನಾಗದೋಷದಿಂದ ಬಹುವಾದ ತೊಂದರೆಯನ್ನನುಭವಿಸುತ್ತಿರುವವರನ್ನೂ ನಾನು ನೋಡಿದ್ದೇನೆ. ನಾಗನ ಪ್ರೀತಿಗೆ ಪಾತ್ರರಾಗಿ ತಮ್ಮ ಕಷ್ಟದಿಂದ ಪಾರಾದವರನ್ನೂ ನಾನು ನೋಡಿದ್ದೇನೆ. ನಾಗದೇವರ ಕುರಿತಾದ ಅನೇಕ ಕಥೆಗಳಿವೆ. ಕಲಿಯುಗದಲ್ಲಿ ನಡೆದ ಸತ್ಯಘಟನೆಗಳೂ ಇದೆ. ನಾಗನೆಂದರೆ ಸುಬ್ರಹ್ಮಣ್ಯ ದೇವರ ಪ್ರತಿರೂಪವೂ ಹೌದು. ಈ ಭೂಮಿಯಲ್ಲಿ ನಾಗನಸ್ಥಾನಗಳಿವೆ, ದೇವಸ್ಥಾನಗಳಿವೆ;ಬನಗಳೂ ಇವೆ.
ಹಾಗಾದರೆ ಈ ನಾಗದೇವರೆಂದರೆ ಯಾರು? ಕಲಿಯುಗದಲ್ಲಿ ಹಲವರು ನಂಬುವ, ನಂಬಿ ಒಳಿತನ್ನು ಕಂಡ ದೇವತಾಶಕ್ತಿಯ ರೂಪವೇ ನಾಗ. ನಾಗನೆಂದರೆ ಪ್ರಕೃತಿ. ಪ್ರಕೃತಿಯೆಂದರೆ ಪೃಥ್ವಿ. ಪೃಥ್ವಿ ಎಂದರೆ ಜೀವನ. ಹಸಿರಿದ್ದರೆ ಉಸಿರು ಎಂಬಂತೆ ಮನುಷ್ಯ ಬೆಳೆಯುತ್ತ ಬೆಳೆಯುತ್ತ ಹಸಿರನ್ನು ನಾಶಪಡಿಸುತ್ತಿದ್ದಾನೆ. ಅರ್ಥಾತ್ ತನ್ನ ಉಸಿರಿಗೆ ತಾನೇ ಕೊಡಲಿಯೇಟನ್ನು ಕೊಟ್ಟುಕೊಳ್ಳುತ್ತಿದ್ದಾನೆ. ಇಂತಹ ಸಮಯದಲ್ಲೂ ಹಸಿರನ್ನು ಉಳಿಸಿಕೊಳ್ಳುತ್ತಿರುವವರು ಆಮೂಲಕ ನಮ್ಮ ಉಸಿರೂ ಹಸಿರಾಗಿರುವಂತೆ ನೋಡಿಕೊಳ್ಳುತ್ತಿರುವವರು ಈ ನಾಗದೇವತೆಗಳು. ನಾಗನ ಬನ, ಬೀದಿಯ ಸುತ್ತಮುತ್ತ ಮರಕಡಿಯುವುದು, ಮಲಿನಗೊಳಿಸುವುದು, ನೆಲವನ್ನು ಅಗೆದು ಹಾಳುಮಾಡುವುದು, ಬೆಂಕಿಯಿಂದ ಹಸಿರನ್ನೋ ಭೂಮಿಯನ್ನೋ ಸುಡುವುದು ನಿಷಿದ್ಧ. ಇಂತಹ ನಿಷೇದಿತ ಕಾರ್ಯಗಳಿಂದ ಆಗುವ ಅನಾಹುತಗಳಿಗೆ ಮನುಷ್ಯರೇ ಹೊಣೆಗಾರರೂ ಕೂಡ. ಇಂತಹ ಪ್ರಕೃತಿಗೆ ವಿರುದ್ಧವಾದ ಕಾರ್ಯಗಳನ್ನು ಮಾಡದಂತೆ ಮಾನವನನ್ನು ತಡೆಯುವುದೇ ಈ ನಾಗದೇವರು.
ಒಮ್ಮೆ ನಾಗನ ಬೀದಿಯಲ್ಲೊಬ್ಬ ನೆಲವನ್ನು ಅಗೆದು ಬಿಟ್ಟಿದ್ದ. ಮರುದಿನವೇ ಆ ಜಾಗದಲ್ಲಿ ನಾಗ ಕಾಣಿಸಿಕೊಂಡು ಆತ ಮಾಡಿದ ತಪ್ಪನ್ನು ಸೂಚಿಸಿತು. ಇದು ನನ್ನ ಸ್ವತಃ ಅನುಭವಕ್ಕೆ ಬಂದ ಸತ್ಯಸಂಗತಿ. ಮಕ್ಕಳಾಗದವರೂ ನಾಗನನ್ನು ಪೂಜಿಸಿ, ನಾಗನ ಆಶೀರ್ವಾದದಿಂದ ಮಗುವನ್ನು ಪಡೆದಿದ್ದನ್ನು ನಾನು ಕಂಡಿದ್ದೇನೆ. ನನಗೆ ನಾಗನೆಂಬ ವಿಶೇಷ ಶಕ್ತಿಯನ್ನು ಕಂಡು ಆಶ್ಚರ್ಯವಾದದ್ದಿದೆ! ನಾಗನ ರಕ್ಷಣೆ ಎಂದರೆ ಈ ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತ್ಯವ್ಯ ಕೂಡ. ಇವತ್ತು ನಾಗನಿಂದಾಗಿಯೇ ಅದೆಷ್ಟೋ ಮರಗಳು ಉಳಿದುಕೊಂಡಿವೆಯೆಂದರೆ ತಪ್ಪಾಗಲಾರದು.
ನಾಡಿಗೆ ಹಬ್ಬವಾಗಿರುವ ನಾಗರಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲಪಂಚಮಿಯ ದಿನದಂದು ಆಚರಿಸಲಾಗುತ್ತದೆ. ನಾಗನ ದೇವಾಲಯ ಅಥವಾ ನಾಗಬನಗಳಿಗೆ ತೆರಳಿ ಸೀಯಾಳಾಭಿಷೇಕ, ಕ್ಷೀರಾಭಿಷೇಕ ಮಾಡಿ, ಗಂಧ, ಅರಶಿನ, ಕುಂಕುಮ, ಹೂವುಗಳಿಂದ ಅರ್ಚಿಸಿ ದೇವನ ಕೃಪೆಗೆ ಪಾತ್ರರಾಗುವುದು ಈ ದಿನದ ವಿಶೇಷ.
ನಾಗನರಕ್ಷೆ: ನಾಗನೆಂದರೆ ಬನ, ಬನವೆಂದರೆ ವನ. ವನವನ್ನು ಬಿಟ್ಟು ಮಾನವ ಬದುಕಿ ಉಳಿಯಲು ಸಾಧ್ಯವೇ ಇಲ್ಲ. ಮಾನವ ಎಂಬ ಪದದಲ್ಲಿಯೇ ತಿರುಗಿಕೊಂಡಿರುವ ವನ ಎಂಬ ಪದವಿದೆ. ಘವನ ಮಾ(ನವ). ಈ ನಾಗಾರಾಧನೆ ಎಂಬುದು ನಮ್ಮನ್ನು ನಾವು ಉಳಿಸುಕೊಳ್ಳುವ ಸುಲಭದಾರಿ/ಯೇ ಹೊರತು ಆಡಂಬರಕ್ಕೆ ಸೀಮಿತವಾದ ಸಂಪ್ರದಾಯವಲ್ಲ.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
ವಿಷ್ಣು ಭಟ್ಟ ಹೊಸ್ಮನೆ.