Home ನಂಬಿಕೆ ಸುತ್ತಮುತ್ತ ದೇವರು ಎಂದರೆ ಯಾರು?

ದೇವರು ಎಂದರೆ ಯಾರು?

5539
0
SHARE

ದೇವರು ಎಂದರೆ ಯಾರು? ಎಂಬ ಪ್ರಶ್ನೆ ಇದಿರಾದರೆ ದೇವರು ಎಂದರೆ ದೇವರು ಬೇರೇ ಏನು ಅಲ್ಲ ಎಂದು ಸರಳವಾಗಿ ಹೇಳಿಬಿಡಬಹುದು. ದೇವರಿದ್ದಾನೋ ಇಲ್ಲವೋ? ಎಂಬ ಪ್ರಶ್ನೆ ಹಲವು ಬಾರಿ ಕಾಡುತ್ತದೆ. ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ಕಷ್ಟಗಳು ಬಂದಾಗ ನಮ್ಮನ್ನು ಕಾಪಾಡಲು ದೇವರು ಇಲ್ಲವೇ? ಎಂದುಕೊಳ್ಳುತ್ತೇವೆ. ಪ್ರಪಂಚದಲ್ಲಿ ಉತ್ತರವೇ ದೊರಕದ ಪ್ರಶ್ನೆಗಳು ಹಲವಾರಿದೆ. ಆದರೆ ಉತ್ತರಬೇಕೆಂದು ಹಟದಿಂದ ಹುಡುಕುತ್ತ ಹೋದರೆ ಕೆಲವು ಪ್ರಶ್ನೆಗಳಿಗಾದರೂ ಉತ್ತರ ಸಿಗುತ್ತವೆ. ಹಾಗಾದರೆ ಈ ದೇವರು ಎಂದರೆ ಯಾರು? ನಾವು ನಂಬಿ ಕೈಮುಗಿಯುತ್ತಿರುವ ಆ ಶಕ್ತಿ ದೇವರೇ? ಎಲ್ಲಿದ್ದಾನೆ? ಹೇಗಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ.

ದೇವರು ಎಂದರೆ ಯಾರು?
ದೇವರೆಂದರೆ ಪ್ರಕೃತಿಯಲ್ಲಿನ ಅಮೂರ್ತ ಶಕ್ತಿ. ಅದೊಂದು ಕ್ರಿಯೆಯ ಪ್ರೇರಕ. ಕ್ರಿಯೆಗೆ ಕಾರಣ. ಪ್ರಕೃತಿಸಹಜವಾದದ್ದು ನಡೆಯುವುದಕ್ಕೂ ಒಂದು ಶಕ್ತಿ ಸಂಚಲನದ ಅವಶ್ಯಕತೆಯಿದೆ. ಆ ಶಕ್ತಿಯನ್ನೇ ದೇವರು ಎನ್ನುತ್ತೇವೆ. ನದಿಯ ನೀರು ಸೆಳೆದೊಯ್ಯುತ್ತಿರುವಾಗ ಆತನಿಗೊಂದು ಬಂಡೆ ಆಸರೆಯಾಗುತ್ತದೆ. ಅದೇ ದೇವರು. ಅಂದರೆ ಜಗದ ಆಗುಹೋಗುಗಳಿಗೆ ಕಾರಣವಾಗುವ ಶಕ್ತಿಯೇ ದೇವರು. ಮನುಷ್ಯನಿಗೆ ಬುದ್ಧಿ ಎಲ್ಲಿಂದ ಬಂತೆಂದು ಕೇಳಿದರೆ ಅದಕ್ಕೆ ಕಾರಣ ದೇವರು. ಮನುಷ್ಯ ಕೆಟ್ಟಬುದ್ಧಿಯನ್ನು ಹೋಂದಲು ಕಾರಣವೇನೇಂದು ಕೇಳಿದರೆ ಅದಕ್ಕೆ ಕಾರಣ ದೇವರನ್ನು ನಂಬದಿರುವುದು.

ದೇವರು ಎಲ್ಲಿದ್ದಾನೆ?
ದೇವರು ಎಲ್ಲಾ ಕಡೆಯೂ ಇದ್ದಾನೆ. ಅಣು ಅಣುವಿನಿಂದ ಹಿಡಿದು ಎಲ್ಲಾ ವಸ್ತು, ಪ್ರಾಣಿ ಪಕ್ಷಿಗಳಲ್ಲೂ ದೇವರಿದ್ದಾನೆ. ನಿರ್ವಾತದಲ್ಲೂ ದೇವರಿದ್ದಾನೆ. ಪ್ರತಿ ಉಸಿರಿಗೆ ನಾವು ತೆಗೆದುಕೊಳ್ಳುವ ಗಾಳಿಯಲ್ಲಿಯೂ ದೇವರಿದ್ದಾನೆ. ದೇವರಿಲ್ಲದ ಜಾಗವೇ ಇಲ್ಲ. ಶುದ್ಧವಾದ ನಂಬಿಕೆಯೂ ದೇವರ ಪ್ರತಿರೂಪವೇ. ನಾವು ‘ದೇವರು ಇಲ್ಲಿ ಇಲ್ಲ’ ಎಂದುಕೊಂಡಲೆಲ್ಲಾ ದೇವರು ಇದ್ದಾನೆ!

ದೇವರು ಏನು ಮಾಡುತ್ತಿದ್ದಾನೆ?
ಈ ಪ್ರಶ್ನೆಗೆ ನಮ್ಮ ಸುತ್ತಲೂ ಒಮ್ಮೆ ಕಣ್ಣರಳಿಸಿ ನೋಡಿದರೆ ಉತ್ತರ ಸಿಗುತ್ತದೆ. ಹನಿಮಳೆಗೆ ಇಳೆಯಲ್ಲಿ ಹಸಿರು ಚಿಗುರುತ್ತಿವೆ, ಅತೀ ಸೂಕ್ಷ್ಮ ಜೀವಿಯಿಂದ ಹಿಡಿದು ಆನೆಯಂತಹ ದೊಡ್ಡ ಗಾತ್ರದ ಪ್ರಾಣಿಗಳು ಹುಟ್ಟುತ್ತಲೇ ಇವೆ, ಮರದಿಂದ ಬಿದ್ದ ಹಣ್ಣು ಬೀಜದಿಂದ ಬೇರ್ಪಟ್ಟರೂ ಆ ಬೀಜ ಇನ್ನೆಲ್ಲೊ ನಿಧಾನವಾಗಿ ಚಿಗುರೊಡೆಯುತ್ತಿದೆ. ಅದೇಷ್ಟೂ ಗಿಡ, ಮರ, ಹಣ್ಣು ಬೇರುಗಳು ಔಷಧೀಯ ಶಕ್ತಿ ಹೊಂದಿವೆ. ಸಮುದ್ರ ಇನ್ನೂ ಬತ್ತಿಲ್ಲ, ಮಳೆಯ ಹನಿಗೆ ಕಾಡುಗಳು ಬೆಳೆದಿವೆ, ಕಾಡುಪ್ರಾಣಿಗಳು ಇನ್ನೂ ಜೀವಂತವಾಗಿವೆ. ಸೂರ್ಯೊದಯಾಸ್ತಗಳಾಗಿವೆ. ಮಗುವಾಗಿಲ್ಲ, ಇನ್ನು ಮಗುವಾಗುವುದೇ ಇಲ್ಲ ಎಂದು ಬೇಸತ್ತ ದಂಪತಿಗಳಿಗೆ ಮಕ್ಕಳಾಗಿವೆ. ಒಂದೊಂದು ಹೂವು ಒಂದೊಂದು ಪರಿಮಳ, ಒಂದೊಂದು ಹಣ್ಣಿಗೂ ಒಂದೊಂದು ರುಚಿ. ಪ್ರಕೃತಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದೆ ಎಂದಾದರೆ ಇದನ್ನೆಲ್ಲ ದೇವರೇ ಮಾಡುತ್ತಿದ್ದಾನೆ ಎಂದರ್ಥ. ದೇವರಿಲ್ಲ ಎಂದುಕೊಂಡು ದೇವರ ನೆರಳಿನಲ್ಲೇ ಬದುಕುತ್ತಿರುವುವರೂ ಇದ್ದಾರೆ.

ದೇವರು ಹೇಗಿದ್ದಾನೆ?
ದೇವರನ್ನು ನೋಡುವ ಶಕ್ತಿಯಾಗಲಿ, ನೈತಿಕಬಲವಾಗಲಿ ಇಂದು ಯಾರಿಗೂ ಇರಲಿಕ್ಕಿಲ್ಲ. ದೇವರು ನಮ್ಮ ನಂಬಿಕೆಯ ರೂಪದಲ್ಲಿದ್ದಾನೆ. ಮೂರ್ತವಾಗಿಯೂ ಇದ್ದಾನೆ; ಅಮೂರ್ತವಾಗಿಯೂ ಇದ್ದಾನೆ. ಕಲ್ಲು ಮಣ್ಣಿನಲ್ಲೂ ಇರುವ ದೇವರು ನೋಡಲು ಶುದ್ಧಮನಸ್ಸಿನ ರೀತಿಯಲ್ಲಿದ್ದಾನೆ. ನಿಮ್ಮದು ಶುದ್ಧ ಮನಸ್ಸಾದರೆ ದೇವರ ರೂಪ ಕಾಣುತ್ತದೆ. ದೇವರು ಯಾರು? ಎಂಬುದು ಅನಂತವಾದ ಉತ್ತರಗಳುಳ್ಳ ಪ್ರಶ್ನೆಯಾಗಿಬಿಡುತ್ತದೆ. ದೇವರು ಎಂಬುದು ಕಲ್ಪನೆಯಲ್ಲ ನಂಬಿಕೆ. ಈ ನಂಬಿಕೆ ಎಂಬುದೇ ಶಕ್ತಿ. ಈ ನಂಬಿಕೆಕೆ ನಾವು ಕೊಟ್ಟಿದ್ದೇ ರೂಪ. “ನಾನು” ಎಂಬುವವನು ಸತ್ಯದಿಂದ, ಧರ್ಮದಿಂದ “ಎಲ್ಲವೂ ನೀನು” ಎಂಬಂತೆ ಬದುಕುವುದೇ ದೇವರು. ಹಾಗಾಗಿ ದೇವರಿಗೆ ನಿರ್ಧಿಷ್ಟ ಆಕಾರವಿಲ್ಲ. ದೇವರ ಶಕ್ತಿ:ದೇವರು ಎಂಬ ಶಕ್ತಿಯನ್ನು ಸುಮ್ಮನೆ ನಂಬುತ್ತ ಕೇವಲ ಒಳ್ಳೆಯದನ್ನೇ ಆಚರಿಸುತ್ತ ಹೋದರೆ ಭೂಲೋಕವೇ ದೇವಲೋಕವಾದೀತು.

ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ

ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here