Home ಧಾರ್ಮಿಕ ಕ್ಷೇತ್ರಗಳು ಪುಷ್ಕರ ತೀರ್ಥ ಎಲ್ಲಿದೆ; ಇದು ಪುರಾತನ ಬ್ರಹ್ಮ ದೇವಾಲಯ

ಪುಷ್ಕರ ತೀರ್ಥ ಎಲ್ಲಿದೆ; ಇದು ಪುರಾತನ ಬ್ರಹ್ಮ ದೇವಾಲಯ

4770
0
SHARE

ಭಾರತದ ಸುಪ್ರಸಿದ್ಧ ಪ್ರಾಚೀನ ನಗರದಲ್ಲೊಂದು, ರಾಜಸ್ತಾನದ ಅಜ್ಮೇರ್ ಜಿಲ್ಲೆಯ ಪುಷ್ಕರ ಕ್ಷೇತ್ರ. ಬ್ರಹ್ಮದೇವನ ಮಂದಿರದಿಂದ ಸುಪ್ರಸಿದ್ಧವಾಗಿರುವ ಈ ಪಟ್ಟಣ ಹಿಂದೂಗಳಿಗೆ ಮಾತ್ರವಲ್ಲ; ಜೈನ, ಸಿಕ್ಖರಿಗೂ ಪವಿತ್ರವಾಗಿರುವ ಕ್ಷೇತ್ರ.

‘ಚಾರ್ ಧಾಮ್’ (ಬದರಿ, ದ್ವಾರಕಾ, ಪುರಿ, ರಾಮೇಶ್ವರ) ಯಾತ್ರೆಯನ್ನು ಪೂರೈಸಿದವರು ಐದನೆಯ ಮಹತ್ವದ ಯಾತ್ರಾರ್ಹ ಕ್ಷೇತ್ರವಾದ ಪುಷ್ಕರದಲ್ಲಿ ತೀರ್ಥಸ್ನಾನ ಮಾಡದಿದ್ದರೆ ಯಾತ್ರೆಯ ಫಲ ಲಭಿಸಬಾರದು ಎಂಬುದು ಪರಂಪರಾಗತ ನಂಬಿಕೆ.

ಇದೇ ಅಕ್ಟೋಬರ್ 31ರಿಂದ ನವೆಂಬರ್ ನಾಲ್ಕರವರೆಗೆ ಇಲ್ಲಿ ನಡೆಯುವ ವಿಶ್ವಪ್ರಸಿದ್ಧ ಉತ್ಸವಕ್ಕೆ, ಧಾರ್ಮಿಕ ಹುಣ್ಣಿಮೆಯ ಪವಿತ್ರಸ್ನಾನ ವಿಧಿಯನ್ನು ಒಳಗೊಂಡಿರುವ ಈ ಉತ್ಸವ ಜಾನಪದ ನೃತ್ಯ, ಸಂಗೀತ, ಒಂಟೆಗಳ ಮೇಳ, ಕುದುರೆ ನೃತ್ಯ, ಬೆಳದಿಂಗಳ ರಾತ್ರಿಗಳಲ್ಲಿ ಡೇರೆವಾಸದ ಅನನ್ಯ ಅನುಭವ-ಮುಂತಾದ ರಂಗು ರಂಜನೆಗಳಿಂದ ಕೂಡಿ ದೇಶ-ವಿದೇಶಗಳಿಂದ ಲಕ್ಷಗಟ್ಟಲೆ ಜನರನ್ನು ತನ್ನೆಡೆಗೆ ಬರ ಮಾಡಿಕೊಳ್ಳುತ್ತದೆ.

ಇಲ್ಲಿದೆ ಪುಷ್ಕರ ಮೇಳದ ಧಾರ್ಮಿಕ-ಸಾಂಸ್ಕೃತಿಕ-ವಾಣಿಜ್ಯಿಕ ಆಯಾಮಗಳ ಬಗೆಗೊಂದು ಕುತೂಹಲದ ಕಣ್ಣೋಟ.

ರಾಜಸ್ತಾನದ ಅಜ್ಮೇರ್ ಜಿಲ್ಲೆಯ ಸುಪ್ರಸಿದ್ಧ ಪಟ್ಟಣ ಪುಷ್ಕರ. ಅಜ್ಮೇರ್ ನಿಂದ 14 ಕಿಲೋಮೀಟರ್ ವಾಯುವ್ಯಕ್ಕೆ, ನಾಗಪರ್ಬತ್ ಆಚೆಗೆ, ಸಮುದ್ರಮಟ್ಟದಿಂದ 510 ಮೀಟರ್ ಎತ್ತರದಲ್ಲಿರುವ ಈ ಪ್ರದೇಶ ಭಾರತದ ಸುಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದು.

ಹಿಂದೂ ಧರ್ಮದಲ್ಲಿ ಬದರೀನಾಥ, ದ್ವಾರಕೆ, ಪುರಿ ಮತ್ತು ರಾಮೇಶ್ವರಗಳಿಗೆ ಚಾರ್ ಧಾಮ್ (ನಾಲ್ಕು ಧಾಮಗಳು ಎಂದು ಹೆಸರು. ಈ ಚಾರ್ ಧಾಮ್ ಗಳ ಜೊತೆಗೆ ಐದನೆಯ ಧಾಮ ಎಂದು ಸೇರಿಕೊಳ್ಳುತ್ತದೆ ಪುಷ್ಕರ ಕ್ಷೇತ್ರ. ಚಾರ್ ಧಾಮ್ ಯಾತ್ರೆ ಮುಗಿಸಿದವರು ಕೊನೆಯದಾಗಿ ಪುಷ್ಕರದಲ್ಲಿ ಸ್ನಾನ ಮಾಡದಿದ್ದರೆ ಅವರಿಗೆ ತೀರ್ಥಯಾತ್ರೆಯ ಫಲ ಸಿಗುವುದಿಲ್ಲ, ಮೋಕ್ಷ ಸಿಗುವುದಿಲ್ಲ ಎಂದು ಪ್ರತೀತಿ.

ಪುಷ್ಕರಕ್ಕೆ ಯಾಕಿಷ್ಟು ಮಹತ್ತ್ವ?
ಪುಷ್ಕರದ ವರ್ಣನೆ ಪದ್ಮಪುರಾಣದಲ್ಲಿ ಬರುತ್ತದೆ. ಹಿಂದೊಮ್ಮೆ ವಜ್ರನಾಭ ಎಂಬ ರಾಕ್ಷಸ ಭೂಲೋಕದಲ್ಲಿ ಹಾಹಾಕಾರ ಎಬ್ಬಿಸಿದ್ದ. ಬ್ರಹ್ಮದೇವ ಒಂದು ತಾವರೆಯನ್ನು ಮಂತ್ರಿಸಿ ಎಸೆದು ವಜ್ರನಾಥನನ್ನು ವಧಿಸಿದ್ದ. ಈ ತಾವರೆಯ ಮೂರು ಎಸಳುಗಳು ಭೂಮಿಗೆ ಬಿದ್ದಾಗ ಪವಿತ್ರ ಕೆರೆಗಳು ಸೃಷ್ಟಿಯಾಗಿದ್ದವು.

ಬ್ರಹ್ಮನ ಕರದಿಂದ ಬಿದ್ದ ಪುಷ್ಪಗಳ ಕಾರಣ ಈ ಕೆರೆಗಳಿಗೆ ಪುಷ್ಕರ ಎಂದು ಹೆಸರು ಬಂದಿತ್ತು. ಈ ಮೂರು ಕೆರೆಗಳಿಗೆ ಜ್ಯೇಷ್ಠ ಪುಷ್ಕರ, ಮಧ್ಯ ಪುಷ್ಕರ ಮತ್ತು ಕನಿಷ್ಠ ಪುಷ್ಕರ ಎಂದು ಹೆಸರು ಬಂತು.

ವಜ್ರನಾಭನನ್ನು ವಧಿಸಿದ ಬಳಿಕ ಈ ಪ್ರದೇಶವನ್ನು ರಾಕ್ಷಸರ ಉಪಟಳದಿಂದ ಮುಕ್ತಗೊಳಿಸುವ ಸಲುವಾಗಿ ಬ್ರಹ್ಮದೇವ ಜ್ಯೇಷ್ಠ ಪುಷ್ಕರದ ಬಳಿ ಮಹಾಯಜ್ಞ ನಡೆಸಿದ್ದ. ಈ ಕೆರೆಯಲ್ಲಿ ಸರಸ್ವತೀ ದೇವಿ ಹರಿಣಿ, ವಜ್ರೀಣಿ, ನ್ಯಾಂಕು, ಕಪಿಲಾ ಮತ್ತು ಸರಸ್ವತಿಯ ಎಂಬ ಐದು ದಾರೆಗಳಾಗಿ ಹರಿದಿದ್ದಳು.

ರಾಕ್ಷಸರಿಂದ ವಿಘ್ನವಿಲ್ಲದೆ ಯಜ್ಞ ಸಾಂಗವಾಗಿ ನಡೆಯುವಂತೆ ಬ್ರಹ್ಮ ದಕ್ಷಿಣದಲ್ಲಿ ರತ್ನಗಿರಿ, ಉತ್ತರದಲ್ಲಿ ನೀಲಗಿರಿ, ಪಶ್ಚಿಮದಲ್ಲಿ ಸಂಚೂರಾ ಮತ್ತು ಪೂರ್ವದಲ್ಲಿ ಸೂರ್ಯಗಿರಿಗಳನ್ನು ನಿರ್ಮಿಸಿ ಅಲ್ಲಿ ದೇವತೆಗಳನ್ನು ಕಾವಲಿಗೆ ನೇಮಿಸಿದ್ದ.ಇದಿಷ್ಟು ಪದ್ಮಪುರಾಣದ ಕಥೆ.

ಸ್ಥಳ ಪುರಾಣದ ಪ್ರಕಾರ ಯಜ್ಞದ ನಡುವೆ ಬ್ರಹ್ಮನ ಪತ್ನಿ ಸಾವಿತ್ರಿ ಲಕ್ಷ್ಮಿ, ಪಾರ್ವತಿ ಮತ್ತು ಇಂದ್ರಾಣಿಯರನ್ನು ಎದುರುಗೊಳ್ಳಲು ಹೋಗಿದ್ದ ಕಾರಣ ಯಜ್ಞದ ಆಹುತಿ ಕೊಡುವ ವೇಳೆ ಅವಳು ಅಲ್ಲಿರಲಿಲ್ಲ. ಹೀಗಾಗಿ ಯಜ್ಞ ನಡೆಸುತ್ತಿದ್ದ ಗುರ್ಜರ ಋಷಿಗಳು ಗಾಯತ್ರಿ ಎಂಬ ಗುರ್ಜರ ಯುವತಿಯನ್ನು ಬ್ರಹ್ಮದೇವನಿಗೆ ಮದುವೆ ಮಾಡಿಸಿದರು. ಅವಳ ತಲೆಯ ಮೇಲೆ ಅಮೃತ ಕಲಶ ಇರಿಸಿ, ಕೈಯಲ್ಲಿ ಆಹುತಿ ಕೊಟ್ಟು ಯಜ್ಞಕ್ಕೆ ಕೂರಿಸಿದ್ದ.

ಇಂದಿಗೂ ಪುಷ್ಕರ ದೇವಾಲಯದಲ್ಲಿ ಗುರ್ಜರ ಸಮುದಾಯದ ಪೂಜಾರಿಗಳು ಇದ್ದಾರೆ. ಇವರಿಗೆ ಭೋಪಾ ಎಂದು ಹೆಸರು.

ಈ ಸುದ್ದಿ ತಿಳಿದಾಗ ಸಾವಿತ್ರಿ ರೊಚ್ಚಿಗೆದ್ದಿದ್ದಳು. ಬ್ರಹ್ಮನಿಗೆ ಪುಷ್ಕರ ಕ್ಷೇತ್ರ ಒಂದನ್ನು ಬಿಟ್ಟರೆ ಬೇರೆಲ್ಲೂ ಪೂಜೆ ಸಲ್ಲಬಾರದು ಎಂದು ಶಾಪ ಕೊಟ್ಟಿದ್ದಳು. ಇದೇ ಕಾರಣಕ್ಕೆ ಬ್ರಹ್ಮದೇವನಿಗೆ ಪೂಜೆ ಸಲ್ಲುವ ಏಕಮಾತ್ರ ದೇವಾಲಯ ಪುಷ್ಕರ ಎಂದು ಇಲ್ಲಿನ ಜನರು ಹೇಳುತ್ತಾರೆ.

ಬ್ರಹ್ಮದೇವನಿಗೆ ಪೂಜೆ ಯಾಕೆ ಸಲ್ಲುವುದಿಲ್ಲ ಎಂಬ ಬಗ್ಗೆ ಇರುವ ಕಥೆ ಇದೊಂದೇ ಅಲ್ಲ.

ಶೈವ ಸಂಪ್ರದಾಯದಲ್ಲಿ ಪುಷ್ಕರಕ್ಕೆ ವಿಶೇಷ ಮಹತ್ತ್ವ ಇದೆ.ಸತೀ ದೇವಿ ದಕ್ಷಯಜ್ಞದ ಅಗ್ನಿಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದಾಗ ಶಿವ ಎಷ್ಟು ಕಣ್ಣಿರು ಸುರಿಸಿದ ಎಂದರೆ, ಅವನ ಕಣ್ಣೀರಿನಿಂದ ಎರಡು ಕೆರೆಗಳು ಸೃಷ್ಟಿಯಾದವು ಎನ್ನುತ್ತದೆ ಪುರಾಣ. ಇವುಗಳಲ್ಲಿ ಒಂದು ಪುಷ್ಕರದ ಕೆರೆ.

ಇದಕ್ಕೇ ಪುಷ್ಕರಕ್ಕೆ ತೀರ್ಥರಾಜ ಎಂದು ಹೆಸರು. (ಶಿವನ ಕಣ್ಣೀರಿನಿಂದ ಸೃಷ್ಟಿಯಾದ ಇನ್ನೊಂದು ಕೆರೆ ಕಟಾಕ್ಷ. ಇಂದು ಕಾತಸ್ ರಾಜ್ ಎಂಬ ಹೆಸರಿರುವ ಈ ಎರಡನೆಯ ಕೆರೆ ಪಾಕಿಸ್ತಾನದ ಚಕ್ ವಾಲ್ ಜಿಲ್ಲೆಯಲ್ಲಿದೆ.ಇಲ್ಲಿನ ಕಾತಸ್ ರಾಜ ದೇವಾಲಯಕ್ಕೆ ಹಿಂದೂ ಧರ್ಮದಲ್ಲಿ ಭಾರೀ ಮಹತ್ತ್ವ ಇದೆ.)

ಹಿಂದೂ ಧರ್ಮಿಯರಿಗೆ ಮಾತ್ರವೇ ಅಲ್ಲ, ಪುಷ್ಕರ ಕ್ಷೇತ್ರ ಜೈನರಿಗೂ ಪರಮ ಪವಿತ್ರವಾಗಿದೆ. ಅವರು ಈ ಪಟ್ಟಣವನ್ನು ಪದ್ಮಾವತೀ ತೀರ್ಥ ಎಂದು ಕರೆಯುತ್ತಾರೆ. ಜೈನ ಇತಿಹಾಸದ ಪ್ರಕಾರ ಪುಷ್ಕರದ ಸುತ್ತಲಿನ ವಿಶಾಲ ಮರುಭೂಮಿಯ ಮರಳಲ್ಲಿ ಪಾಟನ್ ಎಂಬ ಅವರ ಚಾರಿತ್ರಿಕ ಪಟ್ಟಣ ಹುಗಿದುಹೋಗಿದೆ. ಈ ಮರಳ ಗರ್ಭದಲ್ಲಿ ಅವರ ಚಾರಿತ್ರಿಕ ಪಟ್ಟಣ ಹುಗಿದುಹೋಗಿವೆ.ಈ ಮರಳ ಗರ್ಭದಲ್ಲಿ ಅವರ ಸಾವಿರಾರು ಪವಿತ್ರ ದೇವಾಲಯಗಳಿವೆ ಎಂದು ಅವರ ನಂಬಿಕೆ. ಈ ಪರಿಸರದಲ್ಲಿ ನಡೆದಿರುವ ಉತ್ಖನಗಳು ಅವರ ನಂಬಿಕೆಗೆ ಪುಷ್ಟಿ ಕೊಡುತ್ತವೆ.

ಸಿಕ್ಖರಿಗೂ ಪುಷ್ಕರ ಒಂದು ಪವಿತ್ರ ತೀರ್ಥಕ್ಷೇತ್ರ. ಸಿಕ್ಖರ ಆದಿಗುರು ನಾನಕ್ ಮತ್ತು ಹತ್ತನೆಯ ಗುರು ಗೋಬಿಂದ್ ಸಿಂಗ್ ಇಲ್ಲಿಗೆ ಭೇಟಿ ನೀಡಿದ್ದರು. ಗುರು ಗೋಬಿಂದಸಿಂಗ್ ಪುಷ್ಕರಿಣಿಯ ದಡದಲ್ಲಿ ಕುಳಿತು ಪವಿತ್ರ ಸ್ಮರಣಾರ್ಥವಾಗಿ ಇಲ್ಲಿ ರಚನೆಯಾಗಿರುವ ಗುರುದ್ವಾರ ‘ಸಿಂಗ್ ಸಭಾ’, ಸಿಕ್ಖರಿಗೆ ಪವಿತ್ರವಾಗಿದೆ.

ವೈಷ್ಣವರಿಗೆ ಪುಷ್ಕರ 108 ದಿವ್ಯ ದೇಶಮ್ ಗಳಲ್ಲಿ ಒಂದಾಗಿದೆ. ಇಲ್ಲಿ ಮಾಹಾವಿಷ್ಣು ವರಾಹರೂಪ ತಾಳಿ ಹಿರಣ್ಯಾಕ್ಷನನ್ನು ವಧಿಸಿದ್ಧ ಎಂದು ಅವರ ನಂಬಿಕೆ. 108 ದಿವ್ಯ ದೇಶಗಳ ಪೈಕಿ ಇರುವ ಕೇವಲ ಎಂಟು ಸ್ವಯಂಭೂ ತೀರ್ಥಗಳಲ್ಲಿ ಪುಷ್ಕರ ಒಂದಾಗಿದೆ.

ಪುಷ್ಕರದ ಬ್ರಹ್ಮ ದೇವಾಲಯ
ಪುಷ್ಕರದ ಜಗತ್ ಪಿತ ಬ್ರಹ್ಮ ಮಂದಿರ ರಾಜಸ್ತಾನದ ಹೆಮ್ಮೆಯ ದೇವಾಲಯ. ಇದು ಎರಡು ಸಾವಿರ ವರ್ಷ ಪುರಾತನ ಎಂದು ಪ್ರತೀತಿ. ಆದಿಕಾಲದಲ್ಲಿ ಬ್ರಹ್ಮದೇವ ಇಲ್ಲಿ ಯಜ್ಞ ನಡೆಸಿದ್ದ. ಯಜ್ಞದ ಬಳಿಕ ವಿಶ್ವಾಮಿತ್ರ ಬ್ರಹ್ಮದೇವಾಲಯ ನಿರ್ಮಿಸಿದ್ದ ಎಂದು ಸ್ಥಳ ಪುರಾಣ ಹೇಳುತ್ತದೆ. ಎಂಟನೆಯ ಶತಮಾನದಲ್ಲಿ ಆದಿಶಂಕರರು ಈ ದೇವಾಲಯದ ಪುನರುತ್ಥಾನ ಮಾಡಿದ್ದರು. ಹಲವು ಬಾರಿ ದುರಸ್ತಿ, ಪುನರುತ್ಥಾನದ ಬಳಿಕ ಈಗಿನ ದೇವಾಲಯವನ್ನು 14ನೆಯ ಶತಮಾನದಲ್ಲಿ ರತ್ಲಾಂನ ಮಹಾರಾಜ ಜವತ್ ರಾಜ್ ನಿರ್ಮಿಸಿದ್ದ. ಆದರೆ ಮೂಲ ಗರ್ಭಗುಡಿಯ ಹಿಂದಿನಂತೆಯೇ ಇದೆ ಎನ್ನುತ್ತಾರೆ.

ಪಟ್ಟಣದ ನಡುವೆ ಕೇಂದ್ರ ಸ್ಥಾನದಲ್ಲಿರುವ ಬ್ರಹ್ಮ ದೇವಾಲಯ ಶ್ವೇತ ಅಮೃತ ಶಿಲೆಯ ಒಂದು ಸುಂದರ ವಾಸ್ತು ರಚನೆ.ಈ ದೇವಾಲಯದ ಮೆಟ್ಟಿಲು ಮತ್ತು ಗೋಡೆಗಳ ಸುತ್ತ ಭಕ್ತರು ಬೆಳ್ಳಿಯ ನಾಣ್ಯಗಳನ್ನು ಕೂರಿಸಿದ್ದಾರೆ.

ಮೆಟ್ಟಿಲುಗಳನ್ನೇರಿ, ಅಮೃತಶಿಲೆಯ ಮುಖಮಂಟಪ ದಾಟಿದ ಒಳಗಿನ ದೇವಾಲಯದ ದರ್ಶನವಾಗುತ್ತದೆ. ದೇವಾಲಯದ ಕೆಂಪು ಶಿಖರ (ಗೋಪುರ) ಮತ್ತು ಮೇಲಿರುವ ಹಂಸದ ಶಿಲ್ಪಗಳು ಆಕರ್ಷಕವಾಗಿವೆ.

70 ಅಡಿ ಎತ್ತರದ ಬ್ರಹ್ಮದೇವಾಲಯದ ಶಿಖರ ಪಟ್ಟಣದ ಸುತ್ತಲೂ ದೂರ ದೂರಕ್ಕೆ ಕಾಣಿಸುತ್ತದೆ.

ಗರ್ಭಗುಡಿಯ ನಡುವೆ ಚತುರ್ಮುಖ ಬ್ರಹ್ಮನ ವಿಗ್ರಹ ವಿರಾಜಮಾನವಾಗಿದೆ. ಅಮೃತಶಿಲೆಯ ಈ ಮೂರ್ತಿಯನ್ನು ಕ್ರಿ.ಶ.718ರಲ್ಲಿ ಆದಿಶಂಕರರು ಪ್ರತಿಷ್ಠಾಪಿಸಿದರು. ಬ್ರಹ್ಮನ ಜೊತೆಗೆ ಅವನ ಎಡ ಮಗ್ಗುಲಲ್ಲಿ ಎರಡನೆಯ ಪತ್ನಿ ಗಾಯತ್ರಿ ಇದ್ದಾಳೆ, ಬಲಭಾಗದಲ್ಲಿ ಸಾವಿತ್ರಿ ಕುಳಿತಿದ್ದಾಳೆ. ಸುತ್ತಲೂ ಇತರ ದೇವ ದೇವತೆಗಳ ಮೂರ್ತಿಗಳಿವೆ. ಬ್ರಹ್ಮದೇವ ಪದ್ಮಾಸನ ಹಾಕಿ, ವಿಶ್ವಕರ್ಮ (ಸೃಷ್ಟಿಕರ್ತ) ಮುದ್ರೆಯಲ್ಲಿ ಕುಳಿತಿದ್ದಾನೆ. ನಾಲ್ಕು ಕೈಗಳು, ನಾಲ್ಕು ತಲೆಗಳ ಈ ಮೂರ್ತಿಗೆ ಚೌಮೂರ್ತಿ ಎಂದು ಹೆಸರು. ನಾಲ್ಕು ಕೈಗಳಲ್ಲಿ ಅಕ್ಷಮಾಲೆ, ಪುಸ್ತಕ, ಕುರ್ಕಾ (ಕುಶ ಹುಲ್ಲು), ಮತ್ತು ಕಮಂಡಲ ಇದೆ, ದೇವಾಲಯಸ ಸುತ್ತಗೋಡೆಗಳ ಮೇಳಲೆ ನವಿಲುಗಳ ಚಿತ್ರಗಳಿವೆ.

ಗರ್ಭಗುಡಿಯ ದ್ವಾರದಲ್ಲಿ ಸೂರ್ಯದೇವನ ಅದ್ಭುತ ವಿಗ್ರಹ ಇದೆ. ಎಲ್ಲ ದೇವ ದೇವತೆಗಳನ್ನು ಬರಿಗಾಲಿನಲ್ಲಿ ತೋರಿಸುವುದು ವಾಡಿಕೆ. ಸೂರ್ಯದೇವ ಮಾತ್ರ ಯೋಧನ ಪಾದರಕ್ಷೆಗಳನ್ನು ಧರಿಸಿದ್ದಾನೆ.

ಜನರು ಪುಷ್ಕರ ಸ್ನಾನದ ಬಳಿಕ ಬ್ರಹ್ಮ ದೇವಾಲಯಕ್ಕೆ ಬಂದು ಬ್ರಹ್ಮದೇವನಿಗೆ ಪೂಜೆ ಸಲ್ಲಿಸಿದ ಬಳಿಕ ಗಾಯತ್ರಿ ಪೂಜೆ ನಡೆಸಿ, ಅನಂತರ ಉಳಿದೆಲ್ಲ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಸಂಪ್ರದಾಯ.

ದೇವಾಲಯ ಚಳಿಗಾಲದಲ್ಲಿ ಬೆಳಿಗ್ಗೆ 6.30 ರಿಂದ 8.30ರ ತನಕ ತೆರೆದಿರುತ್ತದೆ. ಬೇಸಿಗೆಯಲ್ಲಿ ದೇವಾಲಯ ಮುಂಜಾನೆ 6 ರಿಂದ ಸಂಜೆ 9 ಗಂಟೆಯ ತನಕ ತೆರೆದಿರುತ್ತದೆ. ಎಲ್ಲ ದಿನಗಳಲ್ಲೂ ಮಧ್ನಾಹ್ನ 1.30 ರಿಂದ 3 ಗಂಟೆಯ ನಡುವೆ ದೇವಾಲಯ ಮುಚ್ಚಿರುತ್ತದೆ.

ಬ್ರಹ್ಮದೇವನಿಗೆ ಮುಂಜಾನೆ ಸೂರ್ಯೋದಯಕ್ಕೆ ಎರಡು ಗಂಟೆಗಳ ಮೊದಲು ಮಂಗಳಾರತಿ, ಸಂಜೆ ಸೂರ್ಯಾಸ್ತದ 40 ನಿಮಿಷಗಳ ಬಳಿಕ ಸಂಧ್ಯಾರತಿ ಮತ್ತು ರಾತ್ರಿಯ ವೇಳೆ ರಾತ್ರಿ ಶಯನಾರತಿ ಎಂಬ ಮೂರು ಆರತಿಗಳು ಸಲ್ಲುತ್ತವೆ.

ದೇವಾಲಯ ಸಾಧು ಸಂಘಟನೆಯ ಆಧಿಪತ್ಯವಿದೆ. ಇಲ್ಲಿನ ಪೂಜಾರಿಗಳು ಪರಾಶರ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.

ದೇವಾಲಯದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಮದುವೆಯಾದ ಗಂಡಸರು ಗರ್ಭಗುಡಿಯ ಒಳಗೆ ಹೋಗಿ ಬ್ರಹ್ಮನಿಗೆ ಪೂಜೆ ಸಲ್ಲಿಸುವಂತಿಲ್ಲ. ಸಂನ್ಯಾಸಿಗಳಿಗೆ ಮಾತ್ರ ಈ ಅಧಿಕಾರ.

ಪುಷ್ಕರದಲ್ಲಿ ಪುಷ್ಕರ ಕೆರೆಯ ವಿರುದ್ಧ ದಿಕ್ಕುಗಳಲ್ಲಿ ಬೆಟ್ಟಗಳ ಮೇಲೆ ಬ್ರಹ್ಮದೇವನ ಇಬ್ಬರು ಪತ್ನಿಯರ ದೇವಾಲಯಗಳೂ ಇವೆ. ಬ್ರಹ್ಮದೇವನಿಗೆ ಶಾಪ ನೀಡಿದ್ದ ಸಾವಿತ್ರಿ (ಪ್ರಥಮ ಪತ್ನಿ)ಯ ದೇವಾಲಯ ಬ್ರಹ್ಮದೇವಾಲಯದ ಹಿಂಭಾಗದಲ್ಲಿ, ಪುಷ್ಕರದ ಎಲ್ಲಕ್ಕಿಂತ ಎತ್ತರದ ರತ್ನಗಿರಿ ಬೆಟ್ಟದ ಮೇಲಿದೆ. ಅವಳ ಕೋಪಕ್ಕೆ ಹೆದರಿರುವ ಗಾಯತ್ರಿಯ ದೇವಾಲಯ ತಗ್ಗಿನ ಬೆಟ್ಟದ ಮೇಲಿದೆ.

ದೇವಾಲಯಗಳ ನಗರಿ
2001ರ ಜನಗಣತಿಯ ಪ್ರಕಾರ ಪುಷ್ಕರದ ಜನಸಂಖ್ಯೆ 14,789. ಇಂದು ಇಲ್ಲಿನ ಜನಸಂಖ್ಯೆ ಸುಮಾರು 1.2 ಲಕ್ಷ ಎಂದೂ ಅಂದಾಜು. ಇಲ್ಲಿನ ಸಾಕ್ಷರತೆ ಶೇ.72 ಕ್ಕೂ ಹೆಚ್ಚಿದೆ.
ಸಹಸ್ರಮಾನಗಳ ಹಿಂದಿನಿಂದಲೂ ಪುಷ್ಕರಕ್ಕೆ ದೇವಾಲಯಗಳ ಪಟ್ಟಣ ಎಂಬ ಬಿರುದು ಇತ್ತು. ಪುಷ್ಕರ ಕೆರೆಯ ಸುತ್ತ ಅಸಂಖ್ಯ ದೇವಾಲಯಗಳಿದ್ದವು.

ಮಧ್ಯಕಾಲದಲ್ಲಿ ದಾಳಿಕೋರರ ಕೈಯಲ್ಲಿ ಇಲ್ಲಿನ ಹೆಚ್ಚಿನ ದೇವಾಲಯಗಳು ನೆಲಸಮವಾಗಿದ್ದವು. ಹೀಗೆ ನೆಲಕಚ್ಚಿದ ದೇವಾಲಯಗಳನ್ನು 14ನೆಯ ಶತಮಾನದ ಬಳಿಕ ಪುನರ್ನಿರ್ಮಾಣ ಮಾಡಲಾಗಿತ್ತು.

ಇಂದು ಪುಷ್ಕರದಲ್ಲಿ ಎಷ್ಟು ದೇವಾಲಯಗಳಿವೆ ಎಂದು ಲೆಕ್ಕ ಹಾಕುವುದೇ ಅಸಾಧ್ಯ. ಇಲ್ಲಿ 400ರಿಂದ 500 ದೇವಾಲಯಗಳಿವೆ ಎಂದು ಅಂದಾಜು.

ಪುಷ್ಕರದಲ್ಲಿ ಸರ್ವಪ್ರಸಿದ್ಧವಾಗಿರುವುದು ಜಗತ್ ಪಿತ ಶ್ರೀ ಬ್ರಹ್ಮ ದೇವಾಲಯ. ಜಗತ್ತಿನಲ್ಲಿರುವ ಕೆಲವೇ ಬ್ರಹ್ಮದೇವಾಲಯಗಳಲ್ಲಿ ಇದು ಒಂದಾಗಿದೆ. ಪ್ರಾಚೀನ ಕಾಲದಿಂದಲೂ ಪುಷ್ಕರದಲ್ಲಿದ್ದ ಈ ದೇವಾಲಯವನ್ನು 14ನೆಯ ಶತಮಾನದಲ್ಲಿ ಪುನರ್ನಿಮಾಣ ಮಾಡಲಾಗಿತ್ತು.

ಮಹಾವಿಷ್ಣುವಿನ ವರಾಹಾವತಾರದ ಮೂರ್ತಿ ಇರುವುದು ಸುಪ್ರಸಿದ್ಧ ವರಾಹ ದೇವಾಲಯ ಇದು. ಇದನ್ನು 12ನೆಯ ಶತಮಾನದಲ್ಲಿ ರಾಜ ಅಣ್ಣಾಜಿ ಚೌಹಾಣ್ ನಿರ್ಮಿಸಿದ್ದ. ಪುಷ್ಕರ ಯಾತ್ರೆಯಲ್ಲಿ ಈ ದೇವಾಲಯಕ್ಕೆ ಭಾರೀ ಮಹತ್ತ್ವ ಇದೆ.

ಬ್ರಹ್ಮದೇವನ ಪ್ರಥಮ ಪತ್ನಿ ಸಾವಿತ್ರೀ ದೇವಿಯ ದೇವಾಲಯ ಇರುವುದು ಬ್ರಹ್ಮ ದೇವಾಲಯದ ಹಿಂಭಾಗದಲ್ಲಿ, ಬೆಟ್ಟದ ಮೇಲೆ. ಮೆಟ್ಟಿಲುಗಳ ಸಾಲವನ್ನು ಹತ್ತಿ ಇಲ್ಲಿಗೆ ತಲುಪಲು ಸುಮಾರು ಒಂದು ಗಂಟೆ ತಗಲುತ್ತದೆ. ಈ ದೇವಾಲಯದಲ್ಲಿ ಸಾವಿತ್ರಿಯ ಶ್ವೇತ ಅಮೃತಶಿಲೆಯ ಮೂರ್ತಿ ಇದೆ.

ಸಾವಿತ್ರೀ ದೇವಾಲಯದ ಬೆಟ್ಟದಿಂದ ಮುಂಜಾನೆಯ ವೇಳೆ ಪಟ್ಟಣ ಮತ್ತು ಮರುಭೂಮಿಯ ವಿಹಂಗಮ ದೃಶ್ಯ ವೀಕ್ಷಿಸಲು ಯಾತ್ರಿಗಳು ಸಾಗುತ್ತಾರೆ.

ರಾಣ್ ಜೀ (ವೈಕುಂಠನಾಥ್ ಜೀ) ಮಂದಿರ, ಇಲ್ಲಿನ ಇನ್ನೊಂದು ಸುಪ್ರಸಿದ್ಧ ದೇವಾಲಯ. ರಾಣ್ ಜೀ ಯನ್ನು ವಿಷ್ಣುವಿನ ಅವತಾರವೆಂದು ತಿಳಿಯಲಾಗುತ್ತದೆ. ದಕ್ಷಿಣ ಭಾರತ, ಮೊಘಲ್ ಮತ್ತು ರಜಪೂತ ಶೈಲಿಗಳ ಮೇಳವನ್ನು ಈ ದೇವಾಲಯದ ವಾಸ್ತುಶಿಲ್ಪದಲ್ಲಿ ಕಾಣಬಹುದು. ಇದರ ಎತ್ತರದ ಗೋಪುರ ದಕ್ಷಿಣಭಾರತದ ದೇವಾಲಯಗಳಂತೆ ಇದೆ.

ಪಾಪಮೋಚನಿ ಗಾಯತ್ರೀ ಮಂದಿರದಲ್ಲಿ ಗಾಯತ್ರೀ ದೇವಿಗೆ ಏಕಾದಶೀ ಮಾತಾ ಎಂಬ ಹೆಸರಿನಲ್ಲಿ ಪೂಜೆ ಸಲ್ಲುತ್ತಿದೆ. ಈ ದೇವಾಲಯಕ್ಕೆ ಭಾರೀ ಧಾರ್ಮಿಕ ಮಹತ್ತ್ವ ಇದೆ. ಇಲ್ಲಿ ಪೂಜೆ ಸಲ್ಲಿಸುವ ಭಕ್ತರ ಇಹಪರಗಳ ಪಾಪಗಳು ಮಾತ್ರವೇ ಅಲ್ಲ. ಬ್ರಹ್ಮಹತ್ಯೆಯ ದೋಷವೂ ಪರಿಹಾರವಾಗುತ್ತದೆ ಎಂದು ನಂಬಿಕೆ ಇದೆ. ಶ್ರೀ ಕೃಷ್ಣನಿಂದ ಶಾಪ ಪಡೆದಿದ್ದ ಅಶ್ವತ್ಥಾಮ ತನ್ನ ಪಾಪಮುಕ್ತಿಗಾಗಿ ಇಲ್ಲಿ ಬಂದಿದ್ದ ಎನ್ನುತ್ತದೆ ಸ್ಥಳಪುರಾಣ. ಹೀಗಾಗಿ ಬ್ರಹ್ಮ ದೇವಾಲಯದ ಬಳಿಕ ಸರ್ವಾಧಿಕ ಯಾತ್ರಿಗಳ ಸಂದಣಿ ಇರುವುದು ಈ ದೇವಾಲಯದಲ್ಲಿ.

ಪಾಪಮೋಚನಿ ಗಾಯತ್ರೀ ಮಂದಿರ ಇರುವುದು ಪುಷ್ಕರದ ಕೊಳದ ಆಚೆಗೆ ಚಿಕ್ಕ ಬೆಟ್ಟದ ಮೇಲೆ. ಮಾರವಾಡ ಬಸ್ ಸ್ಟ್ಯಾಂಡ್ ನ ಹಿಂದಿನ ಬೆಟ್ಟದ ದಾರಿಯಲ್ಲಿ. ಇಲ್ಲಿಗೆ ತಲುಪಲು ಸುಮಾರು ಅರ್ಧ ಗಂಟೆ ಹಿಡಿಯುತ್ತದೆ.

108 ಮಹಾದೇವ ಎಂಬ ಪ್ರಾಚೀನ ಮಂದಿರದಲ್ಲಿ ನೇಪಾಳದ ಪಶುಪತಿನಾಥ ದೇವಾಲಯದ ಶಿವನನ್ನು ಹೋಲುವ ಮೂರ್ತಿ ಇದೆ. ಇದರೊಳಗೆ 108 ಶಿವನ ವಿಗ್ರಹಗಳು ಇರುವ ಕಾರಣ ಇದಕ್ಕೆ ಹೆಸರು ಬಂದಿದೆ.

ಆಪ್ತೇಶ್ವರ ಮಹಾದೇವ ಮಂದಿರ ಇರುವುದು ಬ್ರಹ್ಮದೇವಾಲಯದ ಪಕ್ಕದ ಒಂದು ಗುಹೆಯಲ್ಲಿ. ಬ್ರಹ್ಮದೇವ ಯಜ್ಞ ನಡೆಸುತ್ತಿದ್ದಾಗ ಶಿವ ಅಲ್ಲಿಗೆ ತಾಂತ್ರಿಕ ಸಾಧೂವಿನ ರೂಪದಲ್ಲಿ ಕೈಯಲ್ಲಿ ಒಂದು ಕಪಾಲಿ ಹಿಡಿದು ಬಂದಿದ್ದ. ಯಜ್ಞ ಶಾಲೆಯ ಜನರು ಅವನನ್ನು ತಡೆದಾಗ ಶಿವ ಯಜ್ಞ ಶಾಲೆಯ ತುಂಬ ಕಪಾಲಗಳು ತುಂಬಿಕೊಳ್ಳುವಂತೆ ಮಾಡಿದ್ದ. ಬ್ರಹ್ಮದೇವನಿಗೆ ಈ ತಾಂತ್ರಿಕ ಸಾಧು ಸಾಕ್ಷಾತ್ ಶಿವನೇ ಎಂದು ದಿವ್ಯ ದೃಷ್ಟಿಯಿಂದ ತಿಳಿಯಿತು. ಬ್ರಹ್ಮದೇವನ ಶಿವನ ಕ್ಷಮೆ ಕೇಳಿ, ಯಜ್ಞಕ್ಕೆ ಆದರದಿಂದ ಸ್ವಾಗತಿಸಿದ್ದು ಮಾತ್ರವಲ್ಲದೆ, ಯಜ್ಞಶಾಲೆಯ ಪಕ್ಕದಲ್ಲೇ ಶಿವನ ಗೌರವಾರ್ಥವಾಗಿ ಅಪ್ತೇಶ್ವವರ ದೇವಾಲಯವನ್ನು ನಿರ್ಮಿಸಿದ್ದ. ಶಿವರಾತ್ರಿಯಂದು ಇಲ್ಲಿ ಸಂಭ್ರಮದ ಉತ್ಸವ ನಡೆಯುತ್ತದೆ.

ಇವಲ್ಲದೆ ಗೌತಮ ಮಹರ್ಷಿ ದೇವಾಲಯ, ಶ್ರೀ ಸವಾಯಿ ಭೋಜ ದೇವಾಲಯ, ಮನ್ ಮಹಲ್, ಗುರುದ್ವಾರ ಸಿಂಗ್,ಆಲೂ ಬಾಬಾ ಕಾಲ್ ಭಾಯಿ ರಾವ್ ಮಂದಿರಗಳು ಜನಪ್ರಿಯವಾಗಿವೆ.

ಪುಷ್ಕರದಲ್ಲಿ ರಾಜಸ್ತಾನಿ ಶೈಲಿಯ ಒಂದು ಸುಂದರ ಅರಮನೆಯೂ ಇದೆ. ಮಹಾರಾಜ ಮಾನ್ ಸಿಂಗ್ ನಿರ್ಮಿಸಿದ್ದ ಈ ಭವನಕ್ಕೆಮನ್ ಮಹಲ್ ಎಂದು ಹೆಸರು.
ಪುಷ್ಕರ ತೀರ್ಥ

ಪುಷ್ಕರಿಣಿ ಎಂದರೆ, ಸಂಸ್ಕೃತದಲ್ಲಿ ಕೊಳ ಎಂದರ್ಥ. ಪುಷ್ಕರದ ಶಬ್ದ ಮೂಲ ಇದೇ ಆಗಿರಬಹುದು.

ಪುಷ್ಕರ ಎಂದರೆ ನೀಲಿ ತಾವರೆ ಎಂದು ಅರ್ಥ ಹೇಳುತ್ತಾರೆ. ಸ್ಥಳಪುರಾಣದ ಪ್ರಕಾರ ಸತ್ಯ ಲೋಕದಿಂದ ದೇವತೆಗಳು ಒಂದು ಹಂಸದ ಕೊಕ್ಕಿನಲ್ಲಿ ನೀಲಿ ತಾವರೆಯನ್ನು ಇರಿಸಿ ಹಾರಲು ಬಿಟ್ಟಿದ್ದರು. ಈ ತಾವರೆ ಭೂಮಿಗೆ ಬಿದ್ದ ಜಾಗದಲ್ಲಿ ಬ್ರಹ್ಮದೇವ ಯಜ್ಞ ಮಾಡುವುದಾಗಿ ನಿರ್ಧಾರವಾಗಿತ್ತು.ನೀಲಿ ತಾವರೆ ಭೂಮಿಗೆ ಬಿದ್ದ ಜಾಗವೇ ಪುಷ್ಕರ ಎಂದು ನಿರ್ಧಾರವಾಗಿತ್ತು.

(ಮುಂದುವರಿಯುವುದು…ಪುಷ್ಕರ ತೀರ್ಥ ಎಂದರೇನು?)

LEAVE A REPLY

Please enter your comment!
Please enter your name here