Home ನಂಬಿಕೆ ಸುತ್ತಮುತ್ತ ಧರ್ಮದ ಉನ್ನತಿಗೆ ಕಾರಣವಾಗುವ ಅಂಶ ಯಾವುದು?

ಧರ್ಮದ ಉನ್ನತಿಗೆ ಕಾರಣವಾಗುವ ಅಂಶ ಯಾವುದು?

2617
0
SHARE

“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಮಾತಿದೆ. ಎಲ್ಲಿ ಧರ್ಮವು ರಕ್ಷಿಸಲ್ಪಡುತ್ತದೆಯೋ ಅಲ್ಲಿ ಧರ್ಮವೇ ನಮ್ಮನ್ನು ರಕ್ಷಿಸುತ್ತದೆ. ಮುಕ್ತಿ ಮಾರ್ಗಕ್ಕೊಯ್ಯುತ್ತದೆ ಎಂಬುದು ಇದರ ಅರ್ಥ. ಅಧರ್ಮದ ಹಾದಿಗಳು ಸುಲಭ ಮತ್ತು ಕಣ್ಣಿಗೆ ಗೋಚರವಾಗುವಂತದ್ದು. ಮತ್ತು ಆ ಕ್ಷಣದಲ್ಲಿ ಸುಖವನ್ನೋ ಸಂತೋಷವನ್ನೋ ನೀಡುವಂತೆ ಕಂಡುಬಂದರೂ ಅವು ನಮ್ಮನ್ನು ಅವನತಿಯತ್ತ ನಿಧಾನವಾಗಿ ಕೊಂಡೊಯ್ಯುತ್ತವೆ. ಹಾಗಾಗಿ ಅಧರ್ಮದ ನಡೆಯನ್ನು ತಡೆದು, ಧರ್ಮದ ಹಾದಿಯಲ್ಲಿಯೇ ಜೀವಿಸುವ ವಿಧಾನವನ್ನು ಅಳವಡಿಸಿಕೊಳ್ಳಬೇಕಾದುದು ತೀರಾ ಅಗತ್ಯ.

ಜಗತ್ತು ತ್ರಿಗುಣಾತ್ಮಕವಾದುದು. ಆ ತ್ರಿಗುಣಗಳೇ ಜಗತ್ತಿನಲ್ಲಿ ಧರ್ಮವನ್ನು ಆಳುತ್ತವೆ. ಈ ಮೂರು ಗುಣಗಳೆಂದರೆ ಸತ್ತ್ವ, ತಮ ಮತ್ತು ರಜೋಗುಣಗಳು. ಸತ್ತ್ವಗುಣವು ಸಾತ್ತ್ವಿಕತೆಯನ್ನು ಪ್ರತಿನಿಧಿಸುತ್ತದೆ. ಅರಿಷಡ್ ವೈರಿಗಳಿಂದ ದೂರವಿದ್ದು, ಶುದ್ಧತೆ, ಮಾನವಧರ್ಮ ಪಾಲನೆ ಮತ್ತು ಸಮತೋಲನವಾದ ಮನಸ್ಥಿತಿಯನ್ನು ಹೊಂದಿರುವುದಾಗಿದೆ. ತಮೋಗುಣವೆಂದರೆ ಅರಿಷಡ್ ವೈರಿಗಳತ್ತ ಆಕರ್ಷಿತರಾಗಿ, ಮನಸ್ಸು ಚಂಚಲವಾಗಿರುವುದು. ರಜೋಗುಣವೆಂದರೆ ರಾಕ್ಷಸೀ ಗುಣವೆಂದೂ ಹೇಳಲಾಗುತ್ತದೆ. ಅರಿಷಡ್ ವೈರಿಗಳಿಗೇ ಪ್ರಾಮುಖ್ಯತೆ ಕೊಡುತ್ತ, ಆಲಸ್ಯ, ಮೂರ್ಖತನ, ಅನಾಚಾರಗಳಲ್ಲಿ ತೊಡಗಿಕೊಳ್ಳುವುದಾಗಿದೆ. ಆದರೆ ಸತ್ತ್ವಗುಣವನ್ನು ಬೆಳಿಸಿಕೊಳ್ಳುವುದರಿಂದ ಜಗತ್ತು ಧರ್ಮವನ್ನು ಪಾಲಿಸಲು ಸಾಧ್ಯವಿದೆ.

ಶ್ರೀಕೃಷ್ಣನು ಸತ್ತ್ವಗುಣದಿಂದಲೇ ಧರ್ಮವು ನೆಲೆಗೊಳ್ಳುತ್ತದೆ ಎಂದಿದ್ದಾನೆ. ಹಾಗಾಗಿ ಧರ್ಮವನ್ನು ರಕ್ಷಿಸಲು ಅಥವಾ ಧರ್ಮದ ವೃದ್ಧಿಗೆ ಅಥವಾ ಉನ್ನತಿಗೆ ಈ ಸತ್ತ್ವಗುಣವೇ ಮೂಲಕಾರಣ. ಸತ್ತ್ವಗುಣದಿಂದಾಗಿ ತಮ ಮತ್ತು ರಜೋಗುಣಗಳು ದೂರವಾಗಿ ಅಧರ್ಮದ ಕಾರ್ಯಗಳಾಗುವುದು ತಪ್ಪುತ್ತದೆ. ಇದರಿಂದ ಎಲ್ಲರೂ ಧರ್ಮವನ್ನು ಪಾಲಿಸುವಂತಾಗುತ್ತದೆ. ಆ ಮೂಲಕ ಪ್ರತಿಯೊಬ್ಬರ ಅಂತಃಕರಣವು ಶುದ್ಧವಾಗುತ್ತದೆ ಮತ್ತು ಶಾಂತಿ ನೆಲೆಸುತ್ತದೆ.

ಸತ್ತ್ವಗುಣವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಇದಕ್ಕೆ ಸಾತ್ತ್ವಿಕ ಆಹಾರವನ್ನೇ ಸೇವಿಸುವುದು ಒಂದು ಮಾರ್ಗವಾಗಿದೆ. ಮುಖ್ಯವಾಗಿ ಶಾಸ್ತ್ರ, ಜಲ, ಪ್ರಜೆ ಅಥವಾ ಸಂತತಿ, ದೇಶ, ಕಾಲ, ಕರ್ಮ, ಜನ್ಮ, ಧ್ಯಾನ, ಮಂತ್ರ ಮತ್ತು ಸಂಸ್ಕಾರ ಈ ಹತ್ತು ವಿಷಯಗಳು ಸಾತ್ತ್ವಿಕವಾಗಿದ್ದಾಗ ಮಾತ್ರ ಸತ್ತ್ವಗುಣದ ವೃದ್ಧಿಯಾಗುತ್ತದೆ. ಇಲ್ಲವೆಂದಾದಲ್ಲಿ ತಮೋಗುಣ ಮತ್ತು ರಜೋಗುಣದ ವೃದ್ಧಿಗೆ ಕಾರಣವಾಗುತ್ತವೆ. ಇದರಿಂದ ಅಧರ್ಮವೇ ತಲೆದೋರುತ್ತದೆ. ಪ್ರಸ್ತುತ ಆಗಿರುವುದು ಮತ್ತು ಆಗುತ್ತಿರುವುದು ಇದೇ ಆಗಿದೆ.

ಸತ್ತ್ವಗುಣ ಸಂಪನ್ನರಾಗಲು ಮನಸ್ಸಿನ ನಿಯಂತ್ರಣ ಬಹುಮುಖ್ಯವಾದುದು. ಸುಜ್ಞಾನದ ವೃದ್ಧಿಗೂ ಸತ್ತ್ವಗುಣ ಸಹಾಯಕ. ತಮೋ ಮತ್ತು ರಜೋಗುಣಗಳು ಒಂದು ರೀತಿಯ ಅಂದಕಾರವಿದ್ದಂತೆ; ಅಜ್ಞಾನವಿದ್ದಂತೆ. ಈ ಗುಣಗಳಿಂದ ನಾವು ಕಣ್ಣಿದ್ದೂ ಕುರುಡಾಗಿರುತ್ತೇವೆ. ಯಾಕೆಂದರೆ ಜ್ಞಾನದ ಕಣ್ಣುಗಳನ್ನು ಈ ಎರಡು ದುರ್ಗುಣಗಳು ಸಂಪೂರ್ಣವಾಗಿ ಮುಚ್ಚಿ, ಸುಳ್ಳನ್ನೇ ಸಂತೋಷವೆಂದೂ ಅಜ್ಞಾನವನ್ನೇ ತಿಳುವಳಿಕೆಯೆಂದೂ ಬಿಂಬಿಸಿ ಬಿಡುತ್ತವೆ. ಹುಟ್ಟಿದ ಮಗುವಿಗೆ ನವಿಲನ್ನು ತೋರಿಸಿ ಹುಲಿಯೆಂದೂ, ಹುಲಿಯನ್ನು ತೋರಿಸಿ ನವಿಲೆಂದೂ ಪಾಠಹೇಳಿ ಸತ್ಯವನ್ನು ಗೊತ್ತುಮಾಡದೇ ಇದ್ದರೆ, ಆ ಮಗುವು ಬೆಳೆದು ದೊಡ್ಡವಾದ ಮೇಲೂ ನವಿಲನ್ನೇ ಹುಲಿಯೆಂದುಕೊಳ್ಳುತ್ತದೆ. ಇದೇ ಕೆಲಸವನ್ನು ರಜ ಮತ್ತು ತಮಗುಣಗಳು ಮಾಡುತ್ತಿವೆ. ಇವೆರಡರಿಂದ ಹೊರಬಂದು ಸಾತ್ತ್ವಿಕ, ಸತ್ಯದ ಶುದ್ಧವಾದ ಜೀವನವನ್ನು ನಡೆಸುವಂತಾದಾಗ ಧರ್ಮ ತಾನಾಗಿಯೇ ಬೆಳೆಯುತ್ತದೆ ಮತ್ತು ಉಳಿಯುತ್ತದೆ.

ಸಾತ್ತ್ವಿಕಗುಣಗಳಿಂದಾಗಿ ಪರಿಶುದ್ಧವಾದ ಅಂತಃಕರಣವು ಗುಣಾತೀತವಾಗಲು ಸಾಧ್ಯವಿದೆ. ತ್ರಿಗಣವು ಬುದ್ಧಿಯಿಂದಲೇ ಹೊರತು ಆತ್ಮದಿಂದಲ್ಲ. ಹಾಗಾಗಿ ಗುಣಾತೀತನಾಗಲು ಸಾತ್ತ್ವಿಕಗುಣವು ಸೂಕ್ತ ಸಾಧನ. ಆ ಮೂಲಕ ಭಗವತತ್ತ್ವದ ಜ್ಞಾನವುಂಟಾಗಿ ಕೊನೆಯಲ್ಲಿ ಸಾತ್ತ್ವಿಕಗುಣವನ್ನೂ ಬಿಟ್ಟು ಗುಣಾತೀತನಾದಾಗ ಭಗವತ್ಪ್ರಾಪ್ತಿಯಾಗವುದೆಂದು ಶ್ರೀಕೃಷ್ಣನು ಹೇಳಿದ್ದಾನೆ. ಇಂತಹ ಸುಲಭ ಮಾರ್ಗಗಳನ್ನು ನಾವು ಸರಳವಾಗಿ ಅರ್ಥೈಸಿಕೊಂಡು ಸಾತ್ತ್ವಿಕರಾಗಿ ಧರ್ಮವನ್ನು ಕಾಪಾಡುವ ನಿರ್ಧಾರಕ್ಕೆ ಬರೋಣ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here