Home ನಂಬಿಕೆ ಸುತ್ತಮುತ್ತ ಧರ್ಮದ ಮೂಲ ಯಾವುದು?

ಧರ್ಮದ ಮೂಲ ಯಾವುದು?

868
0
SHARE

ಧರ್ಮದ ಮೂಲವನ್ನು ಹುಡುಕುತ್ತಾ ಹೋದಂತೆ ಅದರ ಮೂಲ ನಾವು ಬದುಕುವ ರೀತಿಯಲ್ಲಿಯೇ ಇದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಜಗತ್ತು ಬದುಕುವ ದಾರಿಯನ್ನು ಈ ಧರ್ಮದಿಂದಲೇ ಕಂಡುಕೊಂಡಿದೆ ಎಂಬು ಸತ್ಯ. ಅಂತೆಯೇ ಈ ಧರ್ಮ ಎಂದರೆ ಏನು? ಧರ್ಮ ಎಂಬುದು ಸರಳವಾಗಿ ಲೋಕದ ಹಿತವನ್ನು ಕಾಪಾಡಿಕೊಂಡು ಜೀವಿಸುವ ವಿಧಾನ. ಅದರಲ್ಲಿನ ವಿಧಾನಗಳು ಮನಸ್ಸು ಮತ್ತು ದೇಹವನ್ನು ಹಿಡಿತದಲ್ಲಿಟ್ಟುಕೊಂಡು ಬದುಕುವ ಶೈಲಿಯನ್ನು ಕಲಿಸಿಕೊಡುತ್ತವೆ. ಧರ್ಮಮಾರ್ಗದಲ್ಲಿ ಬದುಕುವುದನ್ನು ಬಿಟ್ಟಮೇಲೆ ಜಗತ್ತಿನ ನೆಮ್ಮದಿ ನಾಶವಾಗುತ್ತಲೇ ಇದೆ.

ಹಾಗಾದರೆ ಈ ಧರ್ಮದ ಮೂಲ ಯಾವುದು? ಸಂಸ್ಕಾರವೇ ಧರ್ಮದ ಮೂಲ. ಈ ಸಂಸ್ಕಾರವನ್ನು ಅರಿತು ಬಾಳಿದರೆ ಧರ್ಮವನ್ನು ಪಾಲಿಸಿದಂತೆಯೇ ಸರಿ. ಎಲ್ಲಕ್ಕೂ ಮೂಲ ಕಾರಣವೇ ಸಂಸ್ಕಾರ. ಸಂಸ್ಕಾರಯುತವಾದ ಬದುಕಿನ ಸತ್ಯವೇ ಈ ಧರ್ಮ. ನೀತಿಯುತವಾಗಿ ಬಾಳಬೇಕೆಂಬುದನ್ನು ಧರ್ಮ ಹೇಳುತ್ತದೆ. ಅಂದರೆ ಸಂಸ್ಕಾರಯುತವಾಗಿ ಜೀವಿಸಿದರೆ ಬದುಕು ಸುಂದರ ಎಂಬುದನ್ನು ಇದು ಸಾರುತ್ತದೆ. ಲೌಕಿಕ ಬದುಕಿನಲ್ಲಿ ಅಲೌಕಿಕವಾದ ಸುಖವನ್ನು ಹೊಂದುವ ಮಾರ್ಗಗಳನ್ನು ತೋರುವ ತೆರೆದಿಟ್ಟ ಪುಸ್ತಕವೇ ಈ ಧರ್ಮ.

ನಾವು ಧರ್ಮಯುತವಾಗಿ ಬದುಕುತ್ತೇವೆ ಎಂದು ನಿರ್ಧರಿಸಿದರೆ ನಮ್ಮಲ್ಲಿ ಸಂಸ್ಕಾರ ಇರಲೇಬೇಕು. ಸಂಸ್ಕಾರ ಎಂಬುದು ಬದುಕಿನ ಪ್ರತಿ ಕ್ಷಣವನ್ನೂ ಸನ್ಮಾರ್ಗವನ್ನು ಬಿಡದೆ ನಿರ್ವಹಿಸುವುದು. ಅಂದರೆ ಬದುಕುವುದೂ ಕೂಡ ಒಂದು ಕಲೆಯೇ. ಮನಸ್ಸು ದೇಹವನ್ನು ನಿರ್ದೇಶಿಸುತ್ತದೆ. ಅದೇ ಸಮಯಕ್ಕೆ ಧರ್ಮ ನಮ್ಮ ಮನಸ್ಸನ್ನು ನಿರ್ದೇಶಿಸುತ್ತದೆ. ಇದಕ್ಕೆ ಸಂಸ್ಕಾರ ಬೇಕು. ಪ್ರಕೃತಿ ಸಹಜವಾಗಿ ಗಿಡವೊಂದು ಸದ್ದಿಲ್ಲದೆ ಹೂಬಿಟ್ಟು ಕಾಯಿಯಾಗಿ ಹಣ್ಣನ್ನು ಕೊಡುವಂತೆ ಈ ಸಂಸ್ಕಾರವೆಂದು ಸಹಜವಾಗಿಯೇ ನಮ್ಮನ್ನಾವರಿಸಿಬೇಕು. ಅದೆಷ್ಟೋ ಒಳ್ಳೆಯ ಸಂಗತಿಗಳನ್ನು ಕೇಳುತ್ತೇವೆ, ನೋಡುತ್ತೇವೆ ಮತ್ತು ಓದುತ್ತೇವೆ. ಆದರೆ ಪಾಲಿಸುವುದಕ್ಕೆ ಧರ್ಮವರಿತಿರಬೇಕು. ಧರ್ಮ ನಮ್ಮ ಪ್ರತಿಯೊಂದು ಕ್ರಿಯೆಯನ್ನು ನಿಯಂತ್ರಿಸುತ್ತಲೇ ಇರುತ್ತದೆ. ಅದೊಂದು ಸೂತ್ರ; ಬದುಕಿನ ಪರಿಧಿ. ಅದನ್ನು ಮೀರಿ ಹೊರಹೋಗಿದ್ದೇವೆಂದರೆ ಸಂಸ್ಕಾರಹೀನರಾಗಿದ್ದೇವೆ ಎಂತಲೇ ಅರ್ಥ.

ಅಧರ್ಮದ ದಾರಿ ಸರಳ ಮತ್ತು ಸುಲಭ. ಆದರೆ ಇದರ ಕಠೋರತೆ ಎಷ್ಟಿದೆಯೆಂದರೆ ಧರ್ಮಯುತವಾಗಿ ಬದುಕುವವರ ಬಾಳಿನಲ್ಲೂ ಅನಾಚಾರವನ್ನು ಉಂಟುಮಾಡುತ್ತದೆ. ಶುದ್ಧವಾದ ಪರಿಸರದಲ್ಲಿ ಹೇಗೆ ಶುದ್ಧವಾದ ಗಾಳಿ  ಶುದ್ಧವಾದ ನೀರು ದೊರೆಯುವುದೋ ರೋಗಗಳಿಂದ ದೂರವಿರುವೆವೋ ಹಾಗೇ ಎಲ್ಲರೂ ಧರ್ಮರೀತ್ಯಾ ಬದುಕಿದರೆ ಕೊನೆಯ ತನಕವೂ ಆನಂದದಿಂದ ಇರಲು ಸಾಧ್ಯ.

ಇಂದು ನಮಗೆ ಸಂತಸ ಜೀವನಬೇಕು. ಆದರೆ ಅದಕ್ಕಾಗಿ ನಾವು ಧರ್ಮವನ್ನು ಅನುಸರಿಸಲು ಮುಂದಾಗುವುದಿಲ್ಲ. ಧರ್ಮದಿಂದ ಏನಾಗಲಿಕ್ಕುಂಟು? ಎಂಬ ಒರಟು ಭಾವನೆ ನಿಧಾನವಾಗಿ ನೆಲೆಯೂರುತ್ತಿದೆ. ಇದು ಯಾವೊತ್ತಿಗೂ ತೊಂದರೆದಾಯಕವೇ ಸರಿ. ಬ್ರಹ್ಮಕಪಾಲ ಎಂಬ ಪುರಾಣ ಕತೆ ಇದಕ್ಕಿರುವ ಸಣ್ಣ ಉದಾಹರಣೆ. ಬ್ರಹ್ಮ ಮತ್ತು ಶಿವ ಅಹಂಕಾರದಿಂದ ವರ್ತಿಸಿ ಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಅನುಭವಿಸಿದ ತೊಂದರೆಯನ್ನು ಈ ಕತೆಯಲ್ಲಿ ನಾವು ಕಾಣುತ್ತೇವೆ. ಆದ್ದರಿಂದ ಧರ್ಮದ ದಾರಿಯಲ್ಲಿ ಎಲ್ಲರೂ ಸಾಗಿದರೆ ಬದುಕು ಸರಳ ಸುಂದರ ಸುಮಧುರ.

ಧರ್ಮದ ಮರ್ಮ: ಹೆಜ್ಜೆಯನ್ನಿಡುವಾಗ ಧರ್ಮದ ದಾರಿ ಕಣ್ಣೆದುರಿರಲಿ. ಹೆಜ್ಜೆಯನ್ನು ಹೂವಿನ ಮೇಲಿಟ್ಟರೆ ಸುಂದರವಾದ ಹೂ ಹಾಳಾದೀತು, ಅದೇ ಮುಳ್ಳಿನ ಮೇಲಿಟ್ಟರೆ ಕಾಲಿಗೆ ಚುಚ್ಚಿ ಗಾಯವಾದೀತು!

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here