Home ನಂಬಿಕೆ ಸುತ್ತಮುತ್ತ ಧರ್ಮ ಹೇಳುವ ಶಾಂತಿಯ ಮೂಲ ಯಾವುದು?

ಧರ್ಮ ಹೇಳುವ ಶಾಂತಿಯ ಮೂಲ ಯಾವುದು?

2478
0
SHARE

ಜಗತ್ತು ಕಾಲಚಕ್ರದಲ್ಲಿ ಸುತ್ತುತ್ತಲೇ ಇರುತ್ತದೆ. ಅದು ನಿಲ್ಲುವುದನ್ನು ಊಹಿಸುವುದೂ ಭಯಾನಕವೇ. ಯಾಕೆಂದರೆ ಹುಟ್ಟು ಸಾವಿಗೆ ಕಾರಣವಾಗುವ ಮೂಲಗಳಲ್ಲೊಂದು ಈ ಜಗತ್ತಿನ ಸುತ್ತುವಿಕೆ. ಭೂಮಿ ತಿರುಗುತ್ತಿದ್ದಂತೆ ಮನುಷ್ಯನಿಗೆ ಕಾಲ ಬದಲಾಗುತ್ತ ಹೋಗುತ್ತದೆ. ಮುಂಜಾನೆ ಮಧ್ಯಾಹ್ನ ರಾತ್ರಿ ಮತ್ತೆ ಮುಂಜಾನೆ. ಅಲ್ಲದೆ ಪ್ರತಿಕ್ಷಣದಲ್ಲಿಯೂ ಹೊಸ ಅನುಭವಗಳು ಮಾನವನಿಗೆ ದೊರಕುತ್ತಲೇ ಹೋಗುತ್ತವೆ. ಅವುಗಳು ಮನಸ್ಸಿಗೆ ಆನಂದವನ್ನುಂಟು ಮಾಡಬಹುದು ಅಥವಾ ದುಃಖವನ್ನುಂಟು ಮಾಡಬಹುದು. ಆಕ್ಷಣ ಒಬ್ಬ ಮನುಷ್ಯನ ತೀವ್ರವಾದ ಸಮಸ್ಯೆಯಿಂದ ಹೊರದಬ್ಬಿಬಿಡಬಹುದು ಅಥವಾ ನೋವಿನ ಕೂಪಕ್ಕೆ ತಳ್ಳಬಹುದು. ಹಾಗಾಗಿ ಮನುಷ್ಯ ಇವತ್ತೆಂದು ಕೊಂಡಂತೆ ನಾಳೆ ಇರುತ್ತಾನೆಂದು ಹೇಳಲಾಗದು. ಇದೇ ಬದುಕು ಎಂದುಕೊಂಡು ತಟಸ್ಥವಾಗಿದ್ದರೂ ಯಾರೂ ನೋವಿನಿಂದ ತಪ್ಪಿಸಿಕೊಂಡವರಿಲ್ಲ. ಅಶಾಂತಿಯಿಂದ ಮರುಗಿದವರು ಜಗತ್ತಿನ ಮೂಲೆಮೂಲೆಯಲ್ಲಿಯೂ ಇದ್ದಾರೆ. ಶಾಂತಿಯಿಲ್ಲದ ಬದುಕು ಎಂಬ ಕೊರಗಿನಲ್ಲಿಯೇ ಜೀವಿಸುತ್ತಿದ್ದಾರೆ.

ಶಾಂತಿ ಎಂದರೇನು? ಶಾಂತಿ ಎಂದರೆ ಮನಸ್ಸಿನ ನೆಮ್ಮದಿಯೇ? ಸಂತೋಷವೇ? ಬದುಕಿಗೆ ಬೇಕಾಗುವ ಅಗತ್ಯತೆಗಳ ಪೂರೈಕೆಯೇ? ಆದರೆ ಇವ್ಯಾವುವೂ ಶಾಂತಿಯ ರೂಪವಲ್ಲ. ಶಾಂತಿ ಎಂಬುದು ಮನಸ್ಸಿನ ಸಮಸ್ಥಿತಿ. ಯಾವುದನ್ನೂ ಬಯಸದ ಸ್ಥಿತಿ. ಇದ್ದುದ್ದರಲ್ಲಿಯೇ ಸಂತೃಪ್ತಿ ಹೊಂದುವ ಸ್ಥಿತಿ. ನಾಳೆಗಾಗಿ ಇಂದಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದ ಸ್ಥಿತಿ. ಈ ಸ್ಥಿತಿಯನ್ನು ಹೊಂದುವುದು ಸರಳವೆನಿಸಿದರೂ ಪ್ರಸ್ತುತ ಜಗತ್ತಿನಲ್ಲಿ ಅಸಾಧ್ಯದ ಮಾತೇ! ಪ್ರಸ್ತುತ ಜಗತ್ತಿನಲ್ಲಿ ಒಬ್ಬನ ಬೇಕುಬೇಡಗಳು ಇನ್ನೊಬ್ಬನ ಬೇಕುಬೇಡಗಳನ್ನು ಅವಲಂಬಿಸಿಕೊಂಡಿರುವುದರಿಂದ ಶಾಂತಿಯನ್ನು ಹೇಗೆ ಕಂಡುಕೊಳ್ಳಬೇಕೆಂಬುದನ್ನು ತಿಳಿಯದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಭಗವದ್ಗೀತೆಯಲ್ಲಿ ಕೃಷ್ಣ ಶಾಂತಿಯನ್ನು ಯಾರು ಪಡೆಯಬಲ್ಲರು ಎಂಬುದನ್ನು ಸರಳವಾಗಿ ಹೇಳಿದ್ದಾನೆ. ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ ಣ ನಿರ್ಮಮೋ ನಿರಹಂಕಾರಃ ಶಾಂತಿಮಧಿಗಚ್ಛತಿ ಣಣ (ಭಗವದ್ಗೀತೆ ಸಾಂಖ್ಯಯೋಗ  ಶ್ಲೋಕ ೭೧)

ಇದು ಕೃಷ್ಣ ಹೇಳಿದ ಶಾಂತಿಯ ಸರಳಸೂತ್ರ. ಇಂದ್ರಿಯ ತೃಪ್ತಿಯ ಎಲ್ಲ ಬಯಕೆಗಳನ್ನು ತ್ಯಜಿಸಿ, ಬಯಕೆಗಳಿಂದ ಮುಕ್ತನಾದವನು, ದೊರೆತನ ಅಥವಾ ಒಡೆತನದ ಭಾವವನ್ನು ಬಿಟ್ಟಿರುವವನು ಹಾಗೂ ಅಹಂಕಾರವಿಲ್ಲದವನು ನಿಜವಾದ ಶಾಂತಿಯನ್ನು ಪಡೆಯಬಲ್ಲ. ಮನುಷ್ಯನ ದೌರ್ಬಲ್ಯ ಇರುವುದೇ ಈ ಇಂದ್ರಿಯ ತೃಪ್ತಿಯ ಆಸೆಗಳನ್ನು ಈಡೇರಿಸುವುದರಲ್ಲಿ. ಇಂತಹ ಆಸೆಗಳಿಂದ ಮುಕ್ತನಾಗದ ಹೊರತು ಆತ ನೆಮ್ಮದಿ ಅಥವಾ ಶಾಂತಿಯನ್ನು ಹೊಂದಲು ಸಾಧ್ಯವಿಲ್ಲ. ನಾಲಿಗೆಯ ಚಪಲಕ್ಕೆ ದೇಹದ ಆರೋಗ್ಯಕ್ಕೆ ಹಾನಿಕಾರಕವಾದ ಆಹಾರವನ್ನು ಸೇವಿಸಿ, ನಂತರ ಆ ಆಹಾರದಿಂದಲೇ ಆಸ್ಪತ್ರೆಗೆ ಅಲೆಯುವಂತಾಗಿ ತನ್ನ ಜೀವನದ ಶಾಂತಿಯನ್ನೇ ಕಳೆದುಕೊಳ್ಳಬಹುದು. ಇದಕ್ಕೆ ಕಾರಣ ಇಂದ್ರಿಯ ಆಸೆಗಳು. ಮೊದಲು ಅದನ್ನು ನಿಗ್ರಹಿಸಬೇಕು. ಮನುಷ್ಯನ ಇಂದ್ರಿಯಗಳ ಚಪಲತೆಗೆ ಕೊನೆಯೆಂಬುದಿಲ್ಲ. ಹಾಗಾಗಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಅವನ್ನು ನಿಗ್ರಹಿಸಿದಾಗಲೇ ಶಾಂತಿಯನ್ನು ಪಡೆಯಬಹುದು. ತಾನೇ ಹಿರಿಯ ಅಥವಾ ಒಡೆಯ ಎಂಬ ಭಾವವನ್ನು ಮೊದಲು ತ್ಯಜಿಸಬೇಕು. ಅಶಾಂತಿಯ ಮೂಲ ಆಗರವೇ ಈ ಮಾಲಕತ್ವದ ಗುಣ. ಎಲ್ಲವೂ ತನ್ನದು ಎಂದು ಎಲ್ಲರನ್ನೂ ಒಡೆತನದ ಭಾವದಿಂದ ಕಾಣುವವನಿಗೆ ಎಂದಿಗೂ ನೆಮ್ಮದಿಯಿರುವುದಲ್ಲಿ. ಈ ಜಗತ್ತಿನಲ್ಲಿ ತನ್ನದು ಎಂಬುದು ಯಾವುದೂ ಇಲ್ಲ ಯಾವುದಕ್ಕೂ ನಾನೂ ಒಡೆಯನಲ್ಲ ಎಂಬುದರ ಜೊತೆಗೆ ತಾನು ಸೇವಕ ಎಂಬ ಭಾವವಿದ್ದಲ್ಲಿ ಶಾಂತಿಯ ಹಾದಿ ಸುಲಭ. ಇನ್ನು ಅಹಂಕಾರವನ್ನು ತೊರೆದವನು ಶಾಂತಿಯನ್ನು ಹೊಂದಬಲ್ಲ. ಅಹಂನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಸತ್ಯವಾದ ಮಾತು. ಹಮ್ಮನ್ನು ಬಿಟ್ಟರೆ ನೆಮ್ಮದಿ ಕಣ್ಣಿಗೆ ಕಾಣುತ್ತದೆ. ಅಹಂಕಾರವೆಂಬುದು ಕಣ್ಣಿಗೆ ಕಟ್ಟಿದ ಪೊರೆಯಂತೆ. ಆತನಿಗೆ ಯಾವುದೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ, ಆದರೆ ತಾನು ನೋಡಿದ್ದೇ ಸತ್ಯ ಎಂಬ ಭ್ರಮೆಯಲ್ಲಿ ತನ್ನ ಮನಶ್ಶಾಂತಿಯ ಜೊತೆಗೆ ಇತರರ ಶಾಂತಿಯನ್ನೂ ಕೆಡಿಸಲು ಕಾರಣವಾಗುತ್ತಾನೆ. ಹಾಗಾಗಿ ಎಲ್ಲಾ ಬಯಕೆಗಳನ್ನೂ ಒಡೆತನದ ಭಾವವನ್ನೂ ದರ್ಪವನ್ನೂ ತೊರೆದಾಗ ಮಾತ್ರ ಶಾಂತಿ ಸಿಗುತ್ತದೆಂಬುದನ್ನು ಧರ್ಮ ಹೇಳುತ್ತದೆ.

ಶಾಂತಿಯ ಮೂಲ: ಧರ್ಮವನ್ನು ಧರ್ಮದ ರೀತಿಯಲ್ಲಿಯೇ ಅನುಸರಿಸಿ ಆಚರಿಸಿದರೆ ಶಾಂತಿಯನ್ನು ಅರಸಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here