Home Uncategorized ದ್ವಾರಪಾಲಕರಾದ ಜಯ-ವಿಜಯರ ಮೂರು ಜನ್ಮಗಳ ಹಿಂದಿನ ರಹಸ್ಯ ಏನು?

ದ್ವಾರಪಾಲಕರಾದ ಜಯ-ವಿಜಯರ ಮೂರು ಜನ್ಮಗಳ ಹಿಂದಿನ ರಹಸ್ಯ ಏನು?

5295
0
SHARE

ಹಿಂದೊಮ್ಮೆ ಬ್ರಹ್ಮದೇವರಿಂದ ಮೊದಲು ಸೃಷ್ಟಿಯಾದ ಸನಕ, ಸನಂದನ, ಸನಾತನ, ಸನತ್ಸುಜಾತ ರೆಂಬ ನಾಲ್ಕು ಋಷಿಕುಮಾರರಿದ್ದರು, ಅವರು ಅಸಮಾನ ಭಗವದ್ಭಕ್ತರಾಗಿದ್ದರು. ಅವರು ತಮ್ಮ ತಪಃ ಶಕ್ತಿಯಿಂದ ಸದಾ ಐದು ವರುಷದ ಬಾಲಕರಾಗಿಯೇ ಇರುತ್ತಿದ್ದರು.

ಒಮ್ಮೆ ವಿಶ್ವಸಂಚಾರ ಮಾಡುವಾಗ ಇಡೀ ಬ್ರಹ್ಮಾಂಡವನ್ನೇ ಸುತ್ತಿ ಕೊನೆಗೆ ವೈಕುಂಠಕ್ಕೆ ಶ್ರೀಮನ್ನಾರಾಯಣನ ದರ್ಶನಕ್ಕೆ ಬಂದರು. ಅವರು ತಮ್ಮ ಯೋಗ ಬಲದಿಂದ ಸಪ್ತದ್ವಾರಗಳುಳ್ಳ ವೈಕುಂಠವನ್ನು ಪ್ರವೇಶಿಸುತ್ತಾ ಕೊನೆಯ ಬಾಗಿಲಿಗೆ ಬಂದರು. ಅಲ್ಲಿ ಜಯ ಮತ್ತು ವಿಜಯ ಎಂಬ ಇಬ್ಬರು ದ್ವಾರಪಾಲಕರು ನಿಂತಿದ್ದರು, ಅವರು ದೇವತೆಗಳಂತೆ ತೇಜಸ್ವಿಗಳಾಗಿದ್ದು ಚತುರ್ಭುಜರಾಗಿ ಗದಾ ಪಾಣಿ ಹಾಗೂ ಸುವರ್ಣ ಕಿರೀಟ ಧರಿಸಿದ್ದರು. ಅವರ ಕೊರಳಲ್ಲಿದ್ದ ಮಾಲೆಯು ಸುಗಂಧ ಬೀರುತ್ತಿತ್ತು . ಬಂದಂತ ತಪಸ್ವಿಗಳೂ ಬಹಳ ತೇಜಸ್ಸಿನಿಂದ ಕಾಣುತ್ತಿದ್ದರೂ, ಆದರೆ ಅವರು ಬಾಲಕರಾಗಿದ್ದರು. ಆದ್ದರಿಂದ ಜಯ ವಿಜಯರು ಅವರನ್ನು ಒಳಗೆ ಬಿಡಲಿಲ್ಲ.

ಇದರಿಂದ ಸನಕಾದಿಗಳು ಬಹಳ ಸಿಟ್ಟಿಗೆದ್ದು . ” ಏನು…. ಶ್ರೀಮನ್ನಾರಾಯಣನ ದರ್ಶನಕ್ಕೆ ಹೊರಟ ನಮಗೆ ನೀವು ಅಡ್ಡಬರುವಿರಾ ? ಈ ವೈಕುಂಠಲೋಕದಲ್ಲಿ ನನ್ನವರು ತನ್ನವರು ಎಂಬ ಭೇದಭಾವವಿಲ್ಲ. ಕೇವಲ ಸಾತ್ವಿಕತೆವೊಂದೇ ಪ್ರಚುರವಾಗಿರುವ ಈ ಸ್ಥಾನದಲ್ಲಿ ತಾಮಸರಂತೆ ವರ್ತಿಸುವಿರಾದುದರಿಂದ ನೀವು ಈಗಿಂದೀಗಲೇ ಭೂಲೋಕಕ್ಕಿಳಿದು ದೈತ್ಯರಾಗಿ ಜನಿಸಿರಿ” ಎಂದು ಶಪಿಸಿಬಿಟ್ಟರು.

ಆಗ ಜಯ ವಿಜಯರು ಬಹಳ ಪಶ್ಚಾತ್ತಾಪದಿಂದ ಕ್ಷಮೆಯಾಚಿಸಿದರು… ಅದೇ ವೇಳೆಗೆ ಶ್ರೀಮನ್ನಾರಾಯಣನು ಬಂದು ಆ ಮುನಿಗಳಲ್ಲಿ ಕ್ಷಮೆಯಾಚಿಸಿದನು, “ಮುನಿಗಳೇ ಅವರಿಬ್ಬರೂ ನನ್ನ ಮನೆಯ ದ್ವಾರಪಾಲಕರು. ಜಯ ಮತ್ತು ವಿಜಯರೆಂದು ಇವರ ಹೆಸರು. ಇವರು ನಿಮ್ಮನ್ನು ತಡೆದದ್ದು ತಪ್ಪು. ಇದಕ್ಕಾಗಿ ನೀವು ಇವರನ್ನು ಶಿಕ್ಷಿಸಿದ್ದು ಯೋಗ್ಯವೇ ಸರಿ. ಸೇವಕರು ಮಾಡಿದ ತಪ್ಪಿಗೆ ಯಜಮಾನನು ಹೊಣೆಗಾರನಾಗುವುದರಿಂದ ನಾನೆ ಅಪರಾಧಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಎಂದು ಹೇಳಲು, ಆ ಮುನಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ನಮಸ್ಕರಿಸಿ ತೆರಳಿದರು.

ಜಯ ವಿಜಯರು ಶ್ರೀಹರಿಯಲ್ಲಿ , ಮುನಿವರ್ಯರ ಶಾಪದಿಂದ ನಮ್ಮನ್ನು ಮುಕ್ತಿಗೊಳಿಸು ಸ್ವಾಮಿ, ನಿನ್ನನ್ನು ಅಗಲಿ ನಾವು ಇರುವುದಿಲ್ಲಾ, ಇದು ನಮ್ಮಿಂದ ಸಾಧ್ಯವಿಲ್ಲ ಪ್ರಭು ಇದಕ್ಕೆ ನೀನೇ ಪರಿಹಾರ ನೀಡು ಎಂದು ಬೇಡಿದರು…. ಅದಕ್ಕೆ ಶ್ರೀಹರಿಯು ಅದು ಸಾಧ್ಯವಿಲ್ಲ ಮಹಾ ತಪ್ಪಸ್ವಿಗಳು ನೀಡಿದ ಶಾಪ ಎಂದು ಸುಳ್ಳಾಗಲಾರದು. ಆದರೆ ನಾನು ನಿಮಗೆ ಒಂದು ವರವನ್ನು ನೀಡುತ್ತೇನೆ, “ ನೀವು ನನ್ನ ಭಕ್ತರಾಗಿ ಏಳು ಜನ್ಮವೆತ್ತುತ್ತೀರಿ ಅಥವಾ ನನ್ನ ಶತ್ರುಗಳಾಗಿ ಮೂರು ಜನ್ಮವೋ ಎಂದು ಆಲೋಚಿಸಿ ಆದರೆ
ನೀವು ಭೂಲೋಕದಲ್ಲಿ ದೈತ್ಯರಾಗಿ ಜನಿಸಲೇಬೇಕು ಎಂದು ಹೇಳಲು. ಜಯ ವಿಜಯರು ನಿನ್ನ ಶತ್ರುಗಳಾದರು ಸರಿ ಮೂರು ಜನ್ಮವೇ ಸಾಕು ಪ್ರಭು, ನಿನ್ನನ್ನು ಅಗಲಿ ಹೆಚ್ಚು ಸಮಯ ನಮ್ಮಿಂದ ದೂರ ಇರಲು ಸಾಧ್ಯವಿಲ್ಲ ಆದರೆ ನಮ್ಮ ಅಂತ್ಯ ಮಾತ್ರ ನಿನ್ನಿಂದಲೇ ಆಗಬೇಕು ಎಂದು ಶ್ರೀಹರಿಯಲ್ಲಿ ಕೇಳಿಕೊಂಡರು. ಅದಕ್ಕೆ ಶ್ರೀಹರಿಯು ಹಾಗೆ ಆಗಲಿ ಎಂದು ಆಶೀರ್ವದಿಸಿ ಕಳುಹಿಸಿದನು.

ಜಯ ವಿಜಯರು ಭೂಮಿಯಲ್ಲಿ ಮೊದಲು ದಿತಿದೇವಿ ಹಾಗೂ ಕಶ್ಯಪ ಋಷಿಗಳ ಮಕ್ಕಳಾಗಿ ಹಿರಣ್ಯಾಕ್ಷ ಹಾಗೂ ಹಿರಣ್ಯಕಶ್ಯಪು ಎಂಬ ಹೆಸರಿನಿಂದ ಮಹಾದೈತ್ಯರಾಗಿ ಜನಿಸಿದರು, ಶ್ರೀಹರಿಯು ವರಾಹ ಅವತಾರದಿಂದ ಹಿರಣ್ಯಾಕ್ಷನನ್ನು ನರಸಿಂಹಾವತಾರದಿಂದ ಹಿರಣ್ಯಕಶ್ಯಪುವನ್ನು ಸಂಹರಿಸಿದನು.

ಅನಂತರ ಜಯ ವಿಜಯರು ತ್ರೇತಾಯುಗ ಋಷಿ ವಿಶ್ರವಸು ಹಾಗೂ ಕೈಕಸಾದೇವಿಯಾರಲ್ಲಿ ರಾವಣ ಕುಂಭಕರ್ಣರಾಗಿ ಜನಿಸಿದರು. ಶ್ರೀಹರಿಯು ರಾಮಾವತಾರವೆತ್ತಿ ರಾವಣ ಕುಂಭಕರ್ಣರನ್ನು ಸಂಹರಿಸಿದನು.

ಮೂರನೇ ಸಲ ದ್ವಾಪರಯುಗದಲ್ಲಿ ಶಿಶುಪಾಲ ಮತ್ತು ದಂತವಕ್ರರಾಗಿ ಜನಿಸಿ ಶ್ರೀಹರಿಯ ಕೃಷ್ಣಾವತಾರದಲ್ಲಿ, ಶ್ರೀಕೃಷ್ಣನಿಂದಲೇ ಹತರಾಗುತ್ತಾರೆ.

ಹೀಗೆ ಜಯ ವಿಜಯರು ಋಷಿಗಳ ಶಾಪದಿಂದ ದೈತ್ಯರಾಗಿ ಮೂರೂ ಜನ್ಮಗಳಲ್ಲೂ ಶ್ರೀಹರಿಯ ವೈರಿಗಳಾಗಿ ಜನಿಸಿ ಶ್ರೀಹರಿಯಿಂದಲೇ ಅಂತ್ಯವನ್ನು ಕಂಡು, ವೈಕುಂಠಕ್ಕೆ ದ್ವಾರಪಾಲಕರಾಗಿ ಹಿಂತಿರುಗುತ್ತಾರೆ.

ಪಲ್ಲವಿ

LEAVE A REPLY

Please enter your comment!
Please enter your name here