Home ನಂಬಿಕೆ ಸುತ್ತಮುತ್ತ ಜಗತ್ತನ್ನು ಗೆಲ್ಲಲು ನಮ್ಮೊಳಗಿರಬೇಕಾದ ಶಕ್ತಿ ಯಾವುದು?

ಜಗತ್ತನ್ನು ಗೆಲ್ಲಲು ನಮ್ಮೊಳಗಿರಬೇಕಾದ ಶಕ್ತಿ ಯಾವುದು?

5646
0
SHARE

ಒಂದು ಸಣ್ಣ ಕೇರಿಯಿಂದ ಹಿಡಿದು ಇಡೀ ಜಗತ್ತೇ ಉನ್ನತಿಯನ್ನು ಹೊಂದಬೇಕೆಂದಾದರೆ ಅಲ್ಲಿನ ಜನರ ಶಕ್ತಿ-ಯುಕ್ತಿಗಳೇ ಕಾರಣ. ಪ್ರತಿಯೊಬ್ಬನೂ ಪ್ರತಿಕ್ಷಣವನ್ನು ಗೆಲ್ಲುವ ತವಕದಲ್ಲಿಯೇ ಬದುಕುತ್ತಿರುತ್ತಾನೆ. ಗೆಲುವಿನ ಬೆನ್ನು ಹತ್ತುವುದೆಂದರೆ ಸುಲಭದ ಮಾತೇನು ಅಲ್ಲ. ಆದರೆ ಗೆಲುವಿನ ಬೆನ್ನು ಹತ್ತಿ ಪ್ರಯತ್ನ ಬಿಡದೆ ಚಲಿಸುತ್ತಿದ್ದರೆ ಮಾತ್ರ ಬದುಕಿಗೊಂದು ಚೆಲುವು.

ಗೆಲುವನ್ನು ಪಡೆಯುವುದೂ ಒಂದು ಬಗೆಯ ಆನಂದವಾದರೆ, ಆ ಗೆಲುವಿಗಾಗಿ ಹೋರಾಡುವ ರೀತಿ ಪರಮಾನಂದ. ಈ ಆನಂದವನ್ನು ಅನುಭವಿಸಲು ಒಂದಿಷ್ಟು ಪೂರ್ವತಯಾರಿ ಬೇಕೇಬೇಕು. ಅದಕ್ಕೆ ಜ್ಞಾನ ಸಂಪಾದನೆಯೂ ಅಗತ್ಯ. ಅಂತಹ ಜ್ಞಾನ ಸಂಪಾದನೆಗೆ ಹಲವು ದಾರಿಗಳಿವೆ. ಓದು, ನೋಡು, ಕೇಳು ಈ ಮೂರೂ ಕೂಡ ಮುಖ್ಯ ಸಹಾಯಕಸಾಧನಗಳು. ಇವನ್ನು ಹೊಂದುವುದಕ್ಕೂ ನಮಗೆ ಕೆಲವು ಪ್ರೇರಕಶಕ್ತಿಯ ಅಗತ್ಯವಿದೆ. ಒಂದು ಸಣ್ಣದಾದರೂ ಪ್ರೇರಣೆ ಇಲ್ಲದೆ ಹೆಚ್ಚಿನ ಸಲ ನಮ್ಮ ಮನಸ್ಸು ಯಾವುದೇ ಕಾರ್ಯಕ್ಕೆ ಮುಂದಾಗುವುದಿಲ್ಲ. ಕಾರಣ ಮನಸ್ಸಿನ ಚಂಚಲತೆ ಮತ್ತು ಆಲಸ್ಯ. ಈ ಮನಸ್ಸಿನ ಆಲಸ್ಯವನ್ನು ಕಳೆದುಕೊಳ್ಳಲು ಒಂದು ಹೊಸ ಉತ್ಸಾಹ ಬೇಕೇಬೇಕು. ಅದೆಷ್ಟೋ ಲೋಕಜ್ಞಾನದ ಭಂಡಾರವನ್ನು ತನ್ನೊಳಗೆ ಹುದುಗಿಟ್ಟುಕೊಂಡಿರುವ ಸುಭಾಷಿತಗಳು ನಮಗೆ ಪ್ರೇರಕಶಕ್ತಿಯಾಗಿ, ಉತ್ಸಾಹದ ಬೆಳಕಾಗಿ ದಾರಿತೋರುತ್ತಿರುವುದು ಸತ್ಯ.

ಅಪ್ರಾಜ್ಞೇನ ಚ ಕಾತರೇಣ ಚ ಗುಣಃ ಸ್ಯಾದ್ಭಕ್ತಿಯುಕ್ತೇನ ಕಃ
ಪ್ರಜ್ಞಾವಿಕ್ರಮಶಾಲಿನೋsಪಿ ಹಿ ಭವೇತ್ ಕಿಂ ಭಕ್ತಿಹೀನಾತ್ಫಲಂ |
ಪ್ರಜ್ಞಾವಿಕ್ರಮಭಕ್ತಯಃ ಸಮುದಿತಾಃ ಯೇಷಾಂ ಗುಣಾ ಭೂತಯೇ
ತೇ ಭೃತ್ಯಾ ನೃಪತೇ ಕಲತ್ರಮಿತತೇ ಸಂಪತ್ಸು ಚಾಪತ್ಸು ಚ || ೩೮|| ಮುದ್ರಾರಾಕ್ಷಸ, ೧-೧೫

ಹೀಗೊಂದು ಸಂಸ್ಕೃತ ಸುಭಾಷಿತವಿದೆ. ಇದರರ್ಥ ಬುದ್ಧಿಯಿಲ್ಲದವನೂ ಹೇಡಿಯೂ ಒಂದು ವೇಳೆ ಸ್ವಾಮಿ ಭಕ್ತಿಯಿಂದ ಕೂಡಿದ್ದರೂ ಏನೂ ಸಹಾಯ ಮಾಡಲಾರ. ಜಾಣತನ ಪರಾಕ್ರಮವಿದ್ದರೂ ಭಕ್ತಿಯಿಲ್ಲದವನು ಸಹ ಸಹಾಯ ಮಾಡಲಾರ. ಯಾರಲ್ಲಿ ಜಾಣತನ, ಪರಾಕ್ರಮ, ಭಕ್ತಿ ಮೂರೂ ಒಟ್ಟಿಗೆ ಇವೆಯೋ ಅವರು ನಿಜವಾಗಿಯೂ ರಾಜನ ಏಳಿಗೆಗೆ ಕಾರಣರು. ಇತರರು ಎಲ್ಲಾ ಕಾಲದಲ್ಲಿಯೂ ಬರಿಯ ಪೋಷ್ಯವರ್ಗದವರು ಎಂಬುದಾಗಿದೆ.

ಈ ಸುಭಾಷಿತ ಎಲ್ಲಾ ಕಾಲಕ್ಕೂ ಪ್ರಸ್ತುತ. ಒಬ್ಬ ವ್ಯಕ್ತಿಯ ವಯಕ್ತಿಕ ಬೆಳವಣಿಗೆಗೂ ದೇಶದ ಸಮಗ್ರ ಬೆಳವಣಿಗೆಗೂ ಪ್ರೇರಕವಾಗುವ ಈ ಮಾತು ಬದುಕಿನ ಗೆಲುವಿನ ಗುಟ್ಟನ್ನು ಹೇಳುತ್ತದೆ. ಗೆಲುವು ಎಂಬುದು ಒಂದು ಎತ್ತರದಲ್ಲಿರುವ ಗುರಿ. ಸೋಲುಗಳೇ ಅವುಗಳ ಮೆಟ್ಟಿಲು. ಸಕಾರಾತ್ಮಕ ಭಾವಗಳೇ ಮೆಟ್ಟಿಲೇರುವುದಕ್ಕೆ ಶಕ್ತಿ. ಒಂದು ಗೆಲುವಿಗೆ ಜಾಣತನ, ಪರಾಕ್ರಮವೂ ಬೇಕು, ಜೊತೆಗೆ ಭಕ್ತಿ ಇರಬೇಕು ಎನ್ನುತ್ತದೆ ಈ ಸುಭಾಷಿತ. ಜಾಣತನ ಗೆಲುವಿನ ದಾರಿಯನ್ನು ಸುಲಭಮಾಡಿಕೊಳ್ಳುವುದಕ್ಕೆ ಅನುಕೂಲವಾದರೆ, ಪರಾಕ್ರಮ ಆ ದಾರಿಯಲ್ಲಿನ ಕಷ್ಟಗಳನ್ನು ಎದುರಿಸುವ ಧೈರ್ಯವನ್ನೂ ಮತ್ತು ಭಕ್ತಿ ಎಂಬುದು ಗುರಿಯೆಡೆಗೆ ತಲ್ಲೀನಲಾಗಲು, ಮನಸ್ಸಿನ ಏಕಾಗ್ರತೆ ಸಾಧಿಸಲು ಸಹಕಾರಿಯಾಗುತ್ತವೆ. ಇವು ಮೂರು ಸಮ್ಮಿಳಿತವಾದಾಗ ಮಾತ್ರ ನಮ್ಮೊಳಗಿನ ಶಕ್ತಿ ಸಮರ್ಪಕವಾಗಿ ಬಳಸಲ್ಪಡುವುದು. ವ್ಯಕ್ತಿಯೊಬ್ಬ ಸ್ವತಃ ತನಗೂ ದೇಶಕ್ಕೂ ಸೂಕ್ತ ಶಕ್ತಿಯಾಗಿ ಬೆಳೆಯಲು ಈ ಮೂರೂ ಅವನಲ್ಲಿರಬೇಕು. ಇವು ನಮ್ಮೊಳಗೆ ಹುಟ್ಟಿ, ಬೆಳೆಯುವಂತೆ ಮಾಡಿಕೊಳ್ಳುವ ಯುಕ್ತಿ, ಶಕ್ತಿ, ಭಕ್ತಿ ಮೊದಲಾಗಬೇಕು!

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ಭಾಸ್ವ.

LEAVE A REPLY

Please enter your comment!
Please enter your name here