Home ನಂಬಿಕೆ ಸುತ್ತಮುತ್ತ ಪುರುಷಸೂಕ್ತ ಏನನ್ನು ಹೇಳುತ್ತದೆ?

ಪುರುಷಸೂಕ್ತ ಏನನ್ನು ಹೇಳುತ್ತದೆ?

5227
0
SHARE

‘ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್…’ ಎಂದು ಆರಂಭವಾಗುವ ಪುರುಷಸೂಕ್ತ ಸೂಕ್ತಗಳಲ್ಲಿ ವಿಶೇಷವಾದ ಸೂಕ್ತವಾಗಿದೆ. ಪುರುಷಸೂಕ್ತವು ವೇದಮಂತ್ರಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಮಂತ್ರವಾಗಿದೆ. ಹೆಚ್ಚಿನ ಪೂಜಾವಿಧಿಗಳಲ್ಲಿ ಪುರುಷಸೂಕ್ತವನ್ನು ಬಳಸಲಾಗುತ್ತದೆ. ಹೆಚ್ಚಾಗಿ ದೇವರಿಗೆ ಅಭಿಷೇಕ ಮಾಡುವಾಗ ಪುರುಷಸೂಕ್ತವನ್ನು ಪಠಿಸಲಾಗುತ್ತದೆ. ಸ್ವರಬದ್ಧವಾಗಿ ಮಂತ್ರವನ್ನು ಉಚ್ಚರಿಸಿದರೆ ಅದರ ಅಂದಕ್ಕೆ ನಾವು ನಮ್ಮ ಚಿತ್ತವನ್ನು ಕೇಂದ್ರೀಕರಿಸಬಹುದು.

ಪುರುಷಸೂಕ್ತವು ಋಗ್ವೇದದಲ್ಲಿ ಹತ್ತನೆಯ ಮಂಡಲದ ತೊಂಬತ್ತನೆಯ ಸೂಕ್ತ ಇದಾಗಿದೆ. ವಿಷ್ಣುವೇ ಇಲ್ಲಿ ಪುರುಷ. ವಿಷ್ಣುವಿನ ಪೂರ್ಣರೂಪವೇ ಪುರುಷ. ವಿರಾಟರೂಪವೇ ಪುರುಷ. ಈ ಪುರುಷನಿಲ್ಲದೆ ಪ್ರಕೃತಿ ಮುಂದುವರಿಯುವುದಿಲ್ಲ. ಸೃಷ್ಟಿ, ಸ್ಥಿತಿ ಮತ್ತು ಲಯವು ಈ ಪುರುಷನಿಂದಲೇ ಆಗುವ ಕ್ರಿಯೆ. ಸಮಸ್ತಜೀವಿಗಳ ಸೃಷ್ಟಿಯನ್ನು ಈತನೇ ಮಾಡುತ್ತಾನೆ. ದೇವತೆಗಳೂ, ಋಷಿಗಳೂ, ಮಾನವರೂ, ಮೃಗಗಳೂ ಇವನಿಂದಲೇ ಸೃಷ್ಟಿಯಾಗಿವೆ. ಪ್ರಕೃತಿಯು ಚೈತನ್ಯಕ್ಕಾಗಿ ಈ ಪುರುಷನನ್ನೇ ಅವಲಂಬಿಸಿದೆ. ಪುರುಷಸೂಕ್ತವನ್ನು ರಚಿಸಿದವನು ನಾರಾಯಣ ಋಷಿ. ಈತನೂ ವಿಷ್ಣುವಿನ ಸ್ವರೂಪವೇ ಆಗಿದ್ದಾನೆ. ಪುರುಷನ ವಿರಾಟ್ ರೂಪ ದರ್ಶನ ಅದರ ವಿಸ್ತಾರವನ್ನು ಮತ್ತು ಸೃಷ್ಟಿಯೆಂಬ ಯಜ್ಞವನ್ನು ಪುರುಷಸೂಕ್ತದಲ್ಲಿ ಹೇಳಲಾಗಿದೆ.

ಪುರುಷನ ವಿರಾಡ್ ರೂಪವೆಂದರೆ ಇಡೀ ಸೃಷ್ಟಿಯನ್ನು ತುಂಬಿಕೊಂಡಿರುವ ರೂಪವಾಗಿದೆ. ಸಾವಿರ ತಲೆಗಳನ್ನೂ, ಸಾವಿರ ಕಣ್ಣುಗಳನ್ನೂ ಸಾವಿರ ಕೈ-ಕಾಲುಗಳನ್ನೂ ಹೊಂದಿರುವ ಈತ ಸರ್ವವ್ಯಾಪಿಯಾಗಿದ್ದಾನೆ. ಭೂತಕಾಲದಲ್ಲಿ ಇದ್ದದ್ದೂ ವರ್ತಮಾನದಲ್ಲಿ ಇರುವುದೂ ಮುಂದೆ ಬರುವುದೂ ಪುರುಷನೇ ಆಗಿದ್ದಾನೆ. ಇಡೀ ಪ್ರಪಂಚಕ್ಕೆ ಅವನೇ ಒಡೆಯ. ಆದಿಪುರುಷನಿಂದ ವಿರಾಟ್ ಪುರುಷನು ಉಂಟಾದನು. ಮತ್ತು ಈತ ಬ್ರಹ್ಮಾಂಡವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡನು. ದೇವತೆಗಳು ಪುರುಷನನ್ನೇ ಹವಿಸ್ಸಾಗಿ ಮಾಡಿ ಮಾನಸಯಜ್ಞವನ್ನು ಮಾಡಿದರು. ವಸಂತಋತುವೇ ತುಪ್ಪವಾಗಿ, ಗಿಷ್ಮ ಕಟ್ಟಿಗೆಯಾಗಿ, ಶರದೃತುವೇ ಹವಿಸ್ಸಾಯಿತು. ಮೊದಲು ಉತ್ಪನ್ನವಾದ ಯಜ್ಞಪುರುಷನ ಮೂಲಕ ದೇವತೆಗಳು, ಸಾಧ್ಯರು ಮತ್ತು ಋಷಿಗಳು ಮಾನಸಯಜ್ಞವನ್ನು ನೆರವೇರಿಸಿದರು. ಆ ಯಜ್ಞದಿಂದ ಸೃಷ್ಟಿಯ ಮೂಲದ್ರವ್ಯ ಉತ್ಪತ್ತಿಯಾಯಿತು. ಇದರಿಂದ ದೇವನು ಪಕ್ಷಿ, ಕಾಡು ಮೃಗಗಳು, ನಾಡಿನ ಪಶುಗಳನ್ನು ಸೃಷ್ಟಿಸಿದನು. ಈ ಯಜ್ಞದಿಂದಲೇ ಮಂತ್ರಗಳು, ಛಂದಸ್ಸುಗಳು ಹುಟ್ಟಿಕೊಂಡವು. ಬ್ರಾಹ್ಮಣನು ಈ ವಿರಾಟ್ ಪುರುಷನ ಮುಖವಾದ, ಬಲಯುತವಾದ ತೋಳುಗಳಾದವನು ಕ್ಷತ್ರಿಯ, ವೈಶ್ಯವರ್ಣದವನು ಈತನ ತೊಡೆಯಾದ ಮತ್ತು ಈತನ ಪಾದಗಳಾದವನೇ ಶೂದ್ರ. ವಿರಾಟ್ ಪುರುಷನ ಕಣ್ಣಿನಿಂದ ಸೂರ್ಯನೂ ಮನಸ್ಸಿನಿಂದ ಚಂದ್ರನೂ ಬಾಯಿಯಿಂದ ಇಂದ್ರ ಮತ್ತು ಅಗ್ನಿಯೂ ಪ್ರಾಣದಿಂದ ವಾಯುವೂ ಆವಿರ್ಭವಿಸಿದರು. ವಿರಾಟ್ ಪುರುಷನ ಹೊಕ್ಕುಳಿನಿಂದ ಆಕಾಶವೂ ತಲೆಯಿಂದ ದ್ಯುಲೋಕವೂ ಕಾಲುಗಳಿಂದ ಭೂಮಿಯೂ ಕಿವಿಯಿಂದ ದಿಕ್ಕುಗಳೂ ಉಂಟಾದುವು. ದೇವತೆಗಳು ಮಾನಸಯಜ್ಞದ ಮುಖೇನ ಯಜ್ಞಪುರುಷನಾದ ಭಗವಂತನನ್ನು ಪೂಜಿಸಿದರು. ಈ ಉಪಾಸನೆಗಳೇ ಧರ್ಮವೆಂದು ಹೆಸರಾದವು ಮತ್ತು ಈ ದೇವತೆಗಳು ಇದರಿಂದಾಗಿ ಸ್ವರ್ಗವನ್ನು ಸೇರಿದರು. ಇದು ಪರುಷಸೂಕ್ತದ ಅರ್ಥ.

ಈ ಪ್ರಕೃತಿಯಲ್ಲಿನ ಆಗು ಹೋಗುಗಳೆಲ್ಲವೂ ಯಜ್ಞ. ಈ ಯಜ್ಞದೊಡೆಯನಾದ ಪುರುಷನು ಸರ್ವವ್ಯಾಪಿಯಾದ ಕಾರಣ ಎಲ್ಲರಲ್ಲಿಯೂ ಇದ್ದಾನೆ. ಎಲ್ಲ ಕಾಲಗಳಲ್ಲಿಯೂ ಚರಾಚರ ವಸ್ತುಗಳಲ್ಲಿಯೂ ಇರುವುದಲ್ಲದೆ ಎಲ್ಲವುದಕ್ಕೆ ಕಾರಣವೂ ಆಗಿದ್ದಾನೆ. ಅಂತಹ ಮೂಲತತ್ತ್ವದ ರೂಪವಾದ ಪುರುಷಸೂಕ್ತವನ್ನು ಪಠಿಸುವುದರಿಂದ ಜೀವನವು ಸುಖಮಯವಾಗುತ್ತದೆ. ಇದರಲ್ಲಿ ಮನುಷ್ಯನ ನಾಲ್ಕು ವರ್ಣಗಳನ್ನೂ ಹೇಳಲಾಗಿದೆ. ಯಾವ ವರ್ಣವೂ ಹಿರಿಯದಲ್ಲ, ಯಾವ ವರ್ಣವೂ ಕಿರಿಯದಲ್ಲ; ಎಲ್ಲವೂ ಸಮಾನ. ಯಾಕೆಂದರೆ ಕಾಲಿಲ್ಲದೆ ನಿಲ್ಲಲಾಗದು, ನಡೆಯಲಾಗದು. ಇನ್ನು ತೊಡಗಳಿಲ್ಲದಿದ್ದರೆ ದೇಹವು ಸ್ಥಿರವಾಗಿಬಿಡುತ್ತದೆ. ಬಾಹುಗಳಲ್ಲಿದೆ ನಾವು ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಈ ಮೂರು ಭಾಗಗಳು ಇಲ್ಲದೆ ತಲೆಯಿದ್ದೂ ಇಲ್ಲದಂತೆಯೇ! ಹಾಗಾಗಿ ನಾಲ್ಕೂ ವರ್ಣಗಳು ಒಂದಾಗಿ ಸಾಗಬೇಕೆಂಬ ಭಾವಾರ್ಥ ಇದರಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ನ್ಯೂನತೆ ಇದ್ದರೂ ಆತ ಅಂಗವಿಕಲ ಎಂದೇ ಪರಿಗಣಿಸಲ್ಪಡುತ್ತಾನೆ. ಇನ್ನು ಪುರುಷನು ಎಲ್ಲಾ ಜೀವಿಗಳಲ್ಲಿಯೂ ವಾಸಿಸುವುದರಿಂದ ಎಲ್ಲವನ್ನೂ ಸಮಚಿತ್ತದಿಂದ,ಸಮಾನಭಾವದಿಂದ ಕಾಣಬೇಕೆಂದು ಪುರುಷಸೂಕ್ತ ಸೂಕ್ಷ್ಮವಾಗಿ ಹೇಳುತ್ತದೆ. ಒಟ್ಟಾರೆಯಾಗಿ ಲೋಕದ ಸಮಸ್ತಜೀವಿಗಳು ಒಂದಾಗಿ ಜೀವಿಸುವ ಯಜ್ಞವೇ ಈ ಬದುಕು ಎಂಬುದು ಪುರುಷ ಸೂಕ್ತದ ಮತಿತಾರ್ಥ.

ಶಾಂತಿ ಮಂತ್ರ:
ಓಂ ತಚ್ಚಂ ಯೋರಾವೃಣೀಮಹೇ | ಗಾತುಂ ಯಜ್ಞಾಯ |
ಗಾತುಂ ಯಜ್ಞಪತಯೇ | ದೈವೀ ಸ್ವಸ್ತಿರುಸ್ತುನಃ |
ಸ್ವಸ್ತಿರ್ಮಾನುಷೇಭ್ಯಃ | ಊರ್ದ್ವಂ ಜಿಗಾತು ಭೇಷಜಂ |
ಶಂ ನೋ ಅಸ್ತು ದ್ವಿಪದೇ | ಶಂ ಚತಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ ||

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

 ವಿಷ್ಣು ಭಟ್, ಹೊಸ್ಮನೆ.(ಭಾಸ್ವ)

LEAVE A REPLY

Please enter your comment!
Please enter your name here