Home ನಂಬಿಕೆ ಸುತ್ತಮುತ್ತ ಪಿಂಗಳಾ ಎಂಬ ವೇಶ್ಯೆಯಿಂದ ಅವಧೂತ ದತ್ತಾತ್ರೆಯರು ಕಲಿತದ್ದು ಏನು?

ಪಿಂಗಳಾ ಎಂಬ ವೇಶ್ಯೆಯಿಂದ ಅವಧೂತ ದತ್ತಾತ್ರೆಯರು ಕಲಿತದ್ದು ಏನು?

5198
0
SHARE

ಮನುಷ್ಯನಲ್ಲಿರುವ ನಿಜವಾದ ಸೌಂದರ್ಯ ಯಾವುದು? ಆತನ ದೇಹದ್ದೇ ಅಥವಾ ಮನಸ್ಸಿನದ್ದೇ ಎಂದು ಕೇಳಿದರೆ ಸರ್ವಸಮ್ಮತವಾಗಿ ಬರುವ ಉತ್ತರ ಮನಸ್ಸಿನ ಸೌಂದರ್ಯವೇ ಎಂಬುದಾಗಿದ್ದರೂ ನಾವು ಬೇಗನೆ ಆಕರ್ಷಿತರಾಗುವುದು ದೇಹ ಸೌಂದರ್ಯಕ್ಕೇ. ಆದರೆ ಒಳ್ಳೆಯ ಮನಸ್ಸಿದ್ದಾಗ ಮಾತ್ರ ದೇಹ ಹೇಗಿದ್ದರೂ ಅದು ಬಳಕೆಯಾಗುವುದು ಒಳ್ಳೆಯ ಕೆಲಸಗಳಿಗೆ ಮಾತ್ರ. ಮನಸ್ಸು ಕೆಟ್ಟದಾಗಿದ್ದರೆ ಎಂಥ ದೇಹವಿದ್ದರೂ ಅದಕ್ಕೆ ಸೌಂದರ್ಯವಿಲ್ಲ. ಅದರಿಂದ ನೆಮ್ಮದಿಯೂ ಸಿಗದು. ಇದಕ್ಕೆ ಉದಾಹರಣೆಯಾಗಿ ಶ್ರೀಮದ್ಭಾಗವತದಲ್ಲಿ ವೇಶ್ಯೆಯ ಪ್ರಕರಣವನ್ನು ಹೇಳಲಾಗಿದೆ. ಅವಧೂತ ದತ್ತಾತ್ರೆಯರು ಪಿಂಗಳಾ ಎಂಬ ವೇಶ್ಯೆಯನ್ನು ವಿದೇಹನಗರದ ಮಿಥಿಲೆಯಲ್ಲಿ ಕಂಡುದಾಗಿಯೂ ಅವಳಿಂದಳೂ ಜೀವನದ ಪಾಠವನ್ನು ಕಲಿತುದಾಗಿಯೂ ಹೇಳುತ್ತಾರೆ.

ಈ ಪಿಂಗಳಾ ಎನ್ನುವ ವೇಶ್ಯೆ ಧನದ ಆಸೆಗಾಗಿ ತನ್ನತ್ತ ಬರುವ ವಿಟಪುರುಷರಿಗಾಗಿ ಕಾಯುತ್ತಲೇ ಇರುತ್ತಾಳೆ. ಅವರನ್ನು ಸೆಳೆಯಲೆಂದೇ ದೇಹವನ್ನು ಅಲಂಕರಿಸಿಕೊಂಡು ನಿಲ್ಲುತ್ತಾಳೆ. ಯಾರೂ ಅವಳತ್ತ ಬರದೇ ಇದ್ದಾಗ ದುಃಖಿತಳಾಗಿ, ನಿದ್ರೆಯೂ ಇಲ್ಲದೆ ಕೊರಗುತ್ತಾಳೆ. ಶ್ರೀಮಂತರಿಗಾಗಿ ಕಾದುಕಾದು ಒಂದುದಿನ ತನ್ನ ವೃತ್ತಿಯಲ್ಲಿ ವೈರಾಗ್ಯವನ್ನು ತಾಳಿ, ವೈರಾಗ್ಯವಿಲ್ಲದೆ ದುಃಖದ ನಿವೃತ್ತಿಯಾಗದು ಎಂಬ ನಿರ್ಧಾರಕ್ಕೆ ಬರುತ್ತಾಳೆ. ಅವಳಿಗೆ ತನ್ನ ಬಗ್ಗೆ ತನಗೇ ಅಸಹ್ಯವಾಗುತ್ತದೆ. ಕೇವಲ ಧನ-ಸಂಪತ್ತಿಗಾಗಿ ನನ್ನ ಶರೀರವನ್ನೂ ಮನವನ್ನೂ ಮಾರಿಬಿಟ್ಟೆನಲ್ಲ; ಲಂಪಟರೂ ಲೊಭಿಗಳೂ ನಿಂದನೀಯರೂ ಆದ ಜನರು ನನ್ನನ್ನು ಕೊಂಡುಕೊಂಡರಲ್ಲ ಎಂದು ತನ್ನ ಬದುಕಿಗೇ ಧಿಕ್ಕಾರವನ್ನುಹಾಕಿಕೊಳ್ಳುತ್ತಾಳೆ.

ಈ ದೇಹ ಎಂಬುದು ಬೆನ್ನು ಹುರಿ, ಎಲುಬು, ಚರ್ಮ, ನಖ, ರೋಮಗಳಿಂದ ನಿರ್ಮಿತವಾಗಿ, ಒಂಭತ್ತು ಬಾಗಿಲುಗಳಲ್ಲಿ ಯಾವಗಲೂ ಮಲ-ಮೂತ್ರ ಮೊದಲಾದವುಗಳನ್ನು ಸುರಸಿತ್ತಲೇ ಇರುತ್ತದೆ. ಇಂತಹ ಅಸ್ಥಿಪಂಜರವಾದ, ನಿಂದ್ಯವಾದ ಶರೀರವನ್ನೇ ಪ್ರೀತಿಸುತ್ತಿರುವ ಮುರ್ಖಳು ನಾನು, ಎಲ್ಲರ ಪ್ರಿಯತಮ ಪರಮಾತ್ಮನನ್ನು ಬಿಟ್ಟು ಬೇರೆ ಪುರುಷರ ಅಭಿಲಾಷೆ ಮಾಡುತ್ತಿರವೆನಲ್ಲ ಎಂದು ಪಿಂಗಳೆ ತನ್ನನ್ನೇ ತಾನು ಶಪಿಸಿಕೊಳ್ಳುತ್ತಾಳೆ. ಕೊನೆಗೂ ತನ್ನ ಸಂತೋಷ ಎಲ್ಲಿದೆ ಎಂಬುದನ್ನು ಕೇಳಿಕೊಳ್ಳುತ್ತ ಶ್ರೀಮಂತರ ದುರಾಸೆಯನ್ನು, ವಿಟಪುರುಷರನ್ನು ಸೇರುವ ಲಾಲಸೆಯನ್ನು ಪರಿತ್ಯಜಿಸಿ ಶಾಂತಭಾವದಿಂದ ನಿದ್ದೆ ಮಾಡುತ್ತಾಳೆ. ಆಸೆಯೇ ಅವಳ ದುಃಖಕ್ಕೆ ಕಾರಣವಾಗಿತ್ತು, ನಿರಾಸೆಯೇ ಎಲ್ಲಕ್ಕಿಂತ ಭಾರೀ ಸುಖವಾಗಿದೆ. ಯಾಕೆಂದರೆ ಪಿಂಗಳೆಯು ಪುರುಷರ ಆಸೆಯನ್ನು ಬಿಟ್ಟ ಬಳಿಕವೇ ಸುಖವಾಗಿ ಮಲಗುವಂತಾಯಿತು ಎಂದು ಅವಧೂತರು ಹೇಳುತ್ತಾರೆ.

ಎಷ್ಟು ಚಂದದ ಪಾಠ ನೋಡಿ. ಆಸೆಯನ್ನು ಕಳೆದುಕೊಳ್ಳುತ್ತ ಹೋದಂತೆ ಮನಸ್ಸಿನ ಸೌಂದರ್ಯದ ಅರಿವಾಗುತ್ತ ಹೋಗುತ್ತದೆ. ದೇಹದ ಚಂದ ಮನಸ್ಸನ್ನು ಆನಂದದಾಯಕವಾಗಿಯೂ ಇಡದು. ದೇಹವು ಕಾಯಕಕ್ಕೆ ಇರುವ ಮಾಧ್ಯಮವಾದರೂ ಅದು ಆಸೆ ಹಿಂದೆ ಬಿದ್ದು ದುಃಖಕ್ಕೆ ಒಳಗಾಗಬಾರದು. ಇಲ್ಲಿ ವೇಶ್ಯೆ ಎಂದ ಕೂಡಲೆ ದೇಹಾಕರ್ಷಣೆ ಮತ್ತು ದೈಹಿಕ ಕಾಮನೆಗಳೇ ಮುಖ್ಯವಾಗಿ ಗೋಚರವಾಗುತ್ತದೆ. ಅಂತಹ ವೇಶ್ಯೆಯೇ ದೇಹದ ಆಕರ್ಷಣೆ, ದೈಹಿಕಸುಖ ಸುಖವಲ್ಲ, ಅದರಿಂದ ಒದಗುವ ಸಂಪತ್ತು ನಿದ್ರಿಸಲೂ ಬಿಡುವುದಿಲ್ಲ ಎಂದುಕೊಂಡು ವೈರಾಗ್ಯ ತಾಳುತ್ತಾಳೆ ಎಂದಾದ ಮೇಲೆ, ನಾವು ಸುಖ-ನೆಮ್ಮದಿಯನ್ನು ಅರಸುವವರಾಗಿ ಎಷ್ಟು ಜಾಗ್ರತೆ ಮಾಡಬೇಕು? ಯಾವುದರ ಹಿಂದೆ ಬೀಳಬಾರದು? ಎಲ್ಲಿ ವೈರಾಗ್ಯ ಹೊಂದಬೇಕು ಎಂಬುದನ್ನು ಯೋಚಿಸಲು ಇದೊಂದು ನಿದರ್ಶನ. ಆಸೆ-ನಿರಾಸೆಗಳ ಅಂತರವನ್ನು ಅರಿತು ಬಾಳಿದರೆ ದೇಹಕ್ಕೂ ಹಿತ; ಮನಸ್ಸಿಗೂ ಸುಖ.

..ಮುಂದುವರಿಯುವುದು.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here