Home ಧಾರ್ಮಿಕ ಕ್ಷೇತ್ರಗಳು ನೀರಿನ ಆರಾಧನೆ…ನಿಸರ್ಗ ಪೂಜೆಯ ವಿಶಿಷ್ಟ “ಬಾವಿ ಹಬ್ಬ”

ನೀರಿನ ಆರಾಧನೆ…ನಿಸರ್ಗ ಪೂಜೆಯ ವಿಶಿಷ್ಟ “ಬಾವಿ ಹಬ್ಬ”

2627
0
SHARE

ವರ್ಷಪೂರ್ತಿ ಫಲವತ್ತಾದ ಬೆಳೆ ಬೆಳೆಯಲು ನೀರು ಒದಗಿಸಿಕೊಟ್ಟ ಜಲ ದೇವತೆಯನ್ನು ಸ್ಮರಿಸಿಕೊಂಡು ಬಾವಿಗೆ ಹಬ್ಬಆಚರಿಸುವ ಅಪರೂಪದ ಸಂಪ್ರದಾಯವಿದು.
ಪ್ರತೀವರ್ಷ ಬೇಸಗೆಯ ನಾಲ್ಕು ತಿಂಗಳ ಕಾಲ ಇಂಗ್ಲೆಂಡಿನ ಎರಡು ಗ್ರಾಮಗಳಿಗೆ ಭೇಟಿ ನೀಡಿದವರಿಗೆ ಕಣ್ಮನ ಸೆಳೆಯುವ ದೃಶ್ಯಾವಳಿಗಳು ಕಾಣಸಿಗುತ್ತವೆ. ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಆಸರೆಯಾಗಿ ಬಾವಿಗಳು, ಕೆರೆಗಳು, ಇನ್ನಿತರ ಎಲ್ಲ ಜಲಾಶಯಗಳ ಮುಂದೆಯೂ ಕಲಾತ್ಮಕವಾದ ಫಲಕಗಳು ಚಿತ್ರಮಯ ರೂಪಕಗಳಾಗಿ ಎದ್ದು ಕಾಣುತ್ತವೆ.

ಸುರ್ದೀರ್ಘವಾದ ಈ ಅವಧಿಯಲ್ಲಿ ಅಲ್ಲಿ ನಡೆಯುವುದು ಬಾವಿಗಳ ಹಬ್ಬ. ಇದನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆಯೂ ಸಣ್ಣದಲ್ಲ. 35 ಸಾವಿರಕ್ಕೂ ಅಧಿಕ ಮಂದಿ ಈ ಚಿತ್ರಕಲೆಯನ್ನು ನೋಡಿ ಮನ ತಣಿಸಿಕೊಳ್ಳಲೆಂದು ಪ್ರತಿವರ್ಷ ಆಗಮಿಸುತ್ತಾರೆ.

ಬಾವಿ-ಕೆರೆಗಳ ಸಿಂಗಾರ
ಎಪ್ರಿಲ್ ತಿಂಗಳ ಕೊನೆಯ ಹೊತ್ತಿಗೆ ಇಂಗ್ಲೆಂಡ್ ನ ಡರ್ಬಿಶೈರ್ ಮತ್ತು ಸ್ಟಾಫರ್ಢೆನ್ ಗ್ರಾಮಗಳ ನಿವಾಸಿಗಳಲ್ಲಿ ಹಬ್ಬದ ಸಂಭ್ರಮ ಚಿಗುರೊಡೆಯುತ್ತದೆ. ಎಲ್ಲ ಬಾವಿ, ಕೆರೆಗಳನ್ನು ಸಿಂಗಾರಗೊಳಿಸಲು ಸಿದ್ಧತೆಗಳು ಆರಂಭವಾಗುತ್ತವೆ. ಮರದ ಹಲಗೆಗಳನ್ನು ಒಂದು ವಾರ ಕಾಲ ನೀರಿನಲ್ಲಿ ನೆನೆಸುತ್ತಾರೆ. ಜೇಡಿಮಣ್ಣಿಗೆ ನೀರು ಮತ್ತು ಉಪ್ಪು ಕಲಸಿ ಇದರ ಮೇಲೆ ದಪ್ಪವಾಗಿ ಹಚ್ಚುತ್ತಾರೆ. ಸ್ಥಳೀಯ ಬಿಳಿ ಕಲ್ಲುಗಳನ್ನು ಶ್ರಮಪಟ್ಟು ಗುದ್ದಿ ಪುಡಿ ಮಾಡುತ್ತಾರೆ. ಈ ಪುಡಿಯಿಂದ ಜೇಡಿಮಣ್ಣಿನ ಪದರದ ಮೇಲೆ ಚಿತ್ರದ ರೇಖೆಗಳನ್ನು ಬರೆಯುತ್ತಾರೆ.

ಈ ರೇಖೆಗಳ ಮೇಲೆ ವಿವಿಧ ಮರಗಳ ತೊಗಟೆ, ಎಲೆಗಳು,ಹೂಗಳು,ಹಣ್ಣುಗಳು, ಕಾಫಿಯಂಥ ಬೀಜಗಳು, ಕುರಿಯ ಉಣ್ಣೆ ಮುಂತಾದ ನಿಸರ್ಗದತ್ತ ಪರಿಕರಗಳನ್ನು ಅಂಟಿಸಿ ಸುಂದರವಾದ ಚಿತ್ರವನ್ನು ಸೃಷ್ಟಿಸುತ್ತಾರೆ. ಪರಿಸರದ ಕುಶಲ ಜನರ ತಂಡಕ್ಕೆ ಈ ಚಿತ್ರಮಯ ಫಲಕಗಳನ್ನು ರೂಪಿಸಲು ಒಂದು ವಾರದ ಕೆಲಸವಾಗುತ್ತದೆ. ಬಾವಿಗಳ ಸುತ್ತಲೂ ಫಲಕಗಳನ್ನಿಡಲಾಗುತ್ತದೆ.

ಹೀಗೆ ತಯಾರಿಸುವ ಚಿತ್ರಗಳಲ್ಲಿ ವೈವಿಧ್ಯಮಯವಾದ ರೂಪಕಗಳಿರುತ್ತವೆ. ಸಂತರು, ಬೈಬಲ್ ಕತೆಗಳ ಸನ್ನಿವೇಶಗಳು, ನಿಸರ್ಗ ನೋಟಗಳು ಎಲ್ಲವೂ ಇರುತ್ತವೆ. ಇದು ಬೇಕಾದಷ್ಟು ನೀರನ್ನು ಕರುಣಿಸುವ ದೇವರಿಗೆ ಸಮರ್ಪಿಸುವ ಧನ್ಯವಾದದ ಪ್ರತೀಕ ಎನ್ನುವ ಅವರು ಮೇ ತಿಂಗಳ ಆರಂಭದಿಂದ ಸೆಪ್ಟಂಬರ್ ತಿಂಗಳವರೆಗೂ ಈ ಬಾವಿ ಅಲಂಕಾರದ ಹಬ್ಬ ಆಚರಿಸುವುದನ್ನು ತಪ್ಪಿಸುವುದಿಲ್ಲ.

ಬತ್ತದ ನೀರಿನ ಆರಾಧನೆ!
ಈ ಗ್ರಾಮಗಳಲ್ಲಿ ಯಾಕೆ ಇಂಥ ಹಬ್ಬ ನಡೆಯುತ್ತಿದೆ ಎಂಬುದಕ್ಕೆ ಜನಜನಿತವಾದ ಒಂದು ಕತೆಯೂ ಇದೆ. 1348-49ರಲ್ಲಿ ಇಂಗ್ಲೆಂಡನ್ನು ಕಾಲರಾ ಮತ್ತು ಪ್ಲೇಗ್ ರೋಗಗಳು ಸಾಂಕ್ರಾಮಿಕವಾಗಿ ಕಾಡಿದವಂತೆ. ದೇಶದ ಜನಸಂಖ್ಯೆಯ ಮೂರನೆಯ ಒಂದು ಭಾಗದ ಪ್ರಜೆಗಳು ಅದಕ್ಕೆ ಆಹುತಿಯಾದರಂತೆ. ಲಕ್ಷಾಂತರ ಜನ ಹೀಗೆ ಎಲ್ಲೆಡೆ ಸತ್ತರೂ ಈಗ ಹಬ್ಬ ನಡೆಯುವ ಎರಡು ಗ್ರಾಮಗಳಿಗೆ ಮಾರಕ ಕಾಯಿಲೆಗಳು ಕಾಲಿಡಲಿಲ್ಲ. ಆಶ್ಚರ್ಯಕರವಾಗಿ ಜನ ಸುರಕ್ಷಿತವಾಗಿಯೇ ಉಳಿದರು. ಇದು ದೇವರ ಕೃಪೆಯಿಂದ ಎಂದು ಜನ ನಂಬಿದರು. ನಮ್ಮ ಗ್ರಾಮಗಳಲ್ಲಿ ಪರಿಶುದ್ಧವಾದ ಕುಡಿಯುವ ನೀರಿರುವುದರಿಂದ ಕಾಯಿಲೆ ಇಲ್ಲಿಗೆ ಬರಲಿಲ್ಲ ಎಂದು ಪರಿಗಣಿಸಿ ಕೃತಜ್ಞತೆಯ ಸಂಕೇತವಾಗಿ ಬಾವಿ ಸಿಂಗಾರವನ್ನು ಆರಂಭಿಸಿದರು ಎಂಬುದು ಒಂದು ಕತೆಯ ಸಾರ.

ಇನ್ನೊಂದು ಕತೆಯ ಪ್ರಕಾರ,1615ರಲ್ಲಿ ದೇಶವನ್ನು ಸುದೀರ್ಘ ಕಾಲ ಜಲಕ್ಷಾಮ ಬಾಧಿಸಿತಂತೆ. ಆಗಲೂ ಈ ಗ್ರಾಮಗಳಿಗೆ ನೀರನ ಕೊರತೆಯುಂಟಾಗಲಿಲ್ಲ. ಈ ಕಾರಣಕ್ಕೆ ನೀರಿನಾಸರೆಗಳಿಗೆ ಅಲಂಕಾರ ಮಾಡುವ ಕ್ರಮವನ್ನು ಆರಂಭಿಸಿದ ಇಂದಿನವರೆಗೂ ಅನೂಚಾನವಾಗಿ ನಡೆಸಿಕೊಂಡು ಬಂದರಂತೆ. ಇದನ್ನು ಕಂಡು ಈಗ ಹಲವು ಗ್ರಾಮಗಳಲ್ಲಿ ಹೀಗೆಯೇ ಬಾವಿ ಹಬ್ಬವನ್ನು ನಿಸರ್ಗ ಪೂಜೆಯಂತೆ ಆಚರಿಸುತ್ತಾರೆ. ಇಂಥ ಗ್ರಾಮಗಳಲ್ಲಿ ಕೇವಲ 110 ಜನಸಂಖ್ಯೆಯಿರುವ ಆರು ಬಾವಿಗಳಿರುವ ಟಿಸ್ಟಿಂಗ್ಟನ್ ಗ್ರಾಮವೂ ಒಂದು. ಇದು ಸಂತರಿಗೆ ಅರ್ಪಿಸುವ ಪೂಜೆ ಎಂಬ ಭಾವವೂ ಇದೆ. ಈ ಚಿತ್ರಗಳಲ್ಲಿ ಬೈಬಲ್ ನ ಒಂದು ಸೂಕ್ತಿಯೂ ಇರುವುದುಂಟು.

LEAVE A REPLY

Please enter your comment!
Please enter your name here