Home ಧಾರ್ಮಿಕ ಸುದ್ದಿ ಗ್ರಾಮೋತ್ಸವದ ಉದ್ದೇಶ ಸಮಾಜದ ಹಿತ: ಒಡಿಯೂರು ಶ್ರೀ

ಗ್ರಾಮೋತ್ಸವದ ಉದ್ದೇಶ ಸಮಾಜದ ಹಿತ: ಒಡಿಯೂರು ಶ್ರೀ

ಜು. 29: ಒಡಿಯೂರು ಶ್ರೀ ಜನ್ಮದಿನೋತ್ಸವ, ಗುರುವಂದನ, ಗ್ರಾಮೋತ್ಸವ

733
0
SHARE

ವಿಟ್ಲ: ಸಮಾಜದ ಹಿತವನ್ನು ಕಾಪಾಡುವ ಜವಾಬ್ದಾರಿ ಸಂತನಿಗಿದೆ. ಸಮಾಜದಿಂದ ಸಮಾಜಕ್ಕಾಗಿ ಗ್ರಾಮೋತ್ಸವ ನಡೆಯುತ್ತದೆ. ಸಮಾಜೋನ್ನತಿಗೆ ಸೇವಾ ಮನೋಭಾವ ಅಗತ್ಯ. ತ್ಯಾಗದಿಂದ ಕೂಡಿದ ಸೇವೆ ನೈಜ ಸೇವೆಯಾಗಿದೆ. ಗ್ರಾಮೋತ್ಸವದ ಉದ್ದೇಶ ಸಮಾಜದ ಹಿತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಜು. 29ರಂದು ನಡೆಯುವ ಶ್ರೀ ಒಡಿಯೂರು ಗ್ರಾಮೋತ್ಸವ-2019ರ ಅಂಗವಾಗಿ ಗುರುವಾರ ಒಡಿಯೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂತನ ಜನ್ಮದಿನ ಆಚರಿಸುವುದಕ್ಕಿಂತ ಗ್ರಾಮದ ಉತ್ಸವ, ಆ ಮೂಲಕ ಸೇವಾ ಕೈಂಕರ್ಯ ಸಲ್ಲುವುದು ಶ್ರೇಷ್ಠ. ಅದೇ ವೈಭವವಾಗುತ್ತದೆ. ಅರ್ಹರನ್ನು ಗುರುತಿಸಿ ಅವರ ಸೇವೆಯನ್ನು ಮಾಡಬೇಕಾಗಿದೆ. ಮನೆ ಇಲ್ಲದ 20 ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಇನ್ನಷ್ಟು ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಭಾಷೆಯ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಎಚ್ಚರಿಸಿ, ದುಶ್ಚಟಮುಕ್ತ ಸಮಾಜವನ್ನು ಕಟ್ಟಬೇಕಾಗಿದೆ. ಅದಕ್ಕಾಗಿ ಆಂದೋಲನ ಮಾಡಬೇಕಾದ ಅಗತ್ಯವಿದೆ ಎಂದರು.

ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಜಿ. ತಾಳಿಪ್ಪಾಡಿಗುತ್ತು ಮಾತನಾಡಿ, ಗ್ರಾಮೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹಾಕಿಕೊಳ್ಳಲಾಗಿದೆ. ಜು. 29ರಂದು ಬೆಳಗ್ಗೆ ಗಣಪತಿ ಹವನ, ಆರಾಧ್ಯ ದೇವರಿಗೆ ಮಹಾ ಪೂಜೆ ನಡೆದು, ಸಾಧ್ವೀ ಮಾತಾನಂದಮಯೀ ಅವರ ಉಪಸ್ಥಿತಿಯಲ್ಲಿ ಶ್ರೀ ಗುರುಪಾದುಕಾರಾಧನೆ – ಪಾದಪೂಜೆ, ಲಡ್ಡುಗಳಿಂದ ಶ್ರೀಗಳ ತುಲಾಭಾರ, ಉಯ್ನಾಲೆ ಸೇವೆ, ಗುರುವಂದನೆ ನಡೆಯಲಿದೆ. ಸಸಿವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವೈದ್ಯಕೀಯ ಶುಶ್ರೂಷೆಗೆ ಸಹಾಯ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಕೋಶಾಧಿಕಾರಿ ಎ. ಅಶೋಕ್‌ ಕುಮಾರ್‌ ಬಿಜೈ, ಜತೆ ಕೋಶಾಧಿಕಾರಿಗಳಾದ ಎ. ಸುರೇಶ ರೈ ಮಂಗಳೂರು, ಲಿಂಗಪ್ಪ ಗೌಡ ಪನೆಯಡ್ಕ, ಪ್ರಧಾನ ಕಾರ್ಯದರ್ಶಿ ಸದಾಶಿವ ಅಳಿಕೆ, ಸ್ವಾಗತ ಸಮಿತಿಯ ವೇಣುಗೋಪಾಲ ಮಾರ್ಲ, ಯಶವಂತ ವಿಟ್ಲ, ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಒಡಿಯೂರು ಗ್ರಾಮವಿಕಾಸ ಯೋಜನೆಯ ನಿರ್ದೇಶಕ ಕಿರಣ್‌ ಉರ್ವ ಉಪಸ್ಥಿತರಿದ್ದರು.

ಲಕ್ಷ ಭಗವದ್ಗೀತೆ ಪುಸ್ತಕ ವಿತರಣೆ
ವಿಶ್ವಕ್ಕೇ ಮಾನ್ಯವಾಗುವ ಸಂಗತಿ ಭಗವದ್ಗೀತೆಯಲ್ಲಿ ಅಡಕವಾಗಿರುವ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಭಗವದ್ಗೀತೆ ಪುಸ್ತಗಳನ್ನು ವಿತರಿಸಲಾಗಿದೆ. ಸಂಸ್ಕಾರ ಸಂಜೀವಿನಿ ಕೈಪಿಡಿ ಮೂಲಕ ಜನರಿಗೆ ಬದುಕು ರೂಪಿಸುವ ವಿಚಾರ ಒದಗಿಸಲಾಗಿದೆ. ಗ್ರಾಮ ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ನಾಗರಿಕರನ್ನು ಎಚ್ಚರಿಸುವ ಕಾರ್ಯ 2001ರಿಂದ ನಡೆಸಿಕೊಂಡು ಬರಲಾಗುತ್ತಿದೆ. ವೈಭವಕ್ಕೆ ಕಡಿವಾಣ ಹಾಕಿ, ಗ್ರಾಮೋತ್ಸವ ಶಿಸ್ತಿನ ಕಾರ್ಯಕ್ರಮ ಆಗಬೇಕೆಂಬ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here