ವಿಟ್ಲ: ಮಕ್ಕಳ ಭಾವ ಪರಿಶುದ್ಧವಾಗಬೇಕು. ವ್ಯಕ್ತಿ ಪರಿವರ್ತನೆಯೇ ವಿಶ್ವಪರಿವರ್ತನೆಗೆ ಮೂಲವಾಗಿದೆ. ಮಕ್ಕಳಿಗೆ ದುಶ್ಚಟಗಳು ಅಂಟಿಕೊಳ್ಳದಂತೆ ಸದ್ಭಾವ, ಸಚ್ಚಿಂತನೆ ಮನದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಬೇಕು. ಬಾಲಭೋಜನ ಮೂಲಕ ಸಹಭೋಜನ, ಸಹಬಾಳ್ವೆಯ ಪರಿಕಲ್ಪನೆ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ಬಾಲಭೋಜನ ನಡೆಯುತ್ತಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ರವಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ, ಒಳ್ಳೆಯ ಮನಸ್ಸು ಇದ್ದಾಗ ಮಾತ್ರ ಸತ್ಕಾರ್ಯಗಳು ಘಟಿಸುತ್ತವೆ. ಮಕ್ಕಳು ಸನ್ನಡತೆ ಹೊಂದಿದಾಗ ಆ ಕುಟುಂಬ, ಮನೆ ಉದ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಮಾತೆಯರು ಮಕ್ಕಳಿಗೆ ಸದ್ವಿಚಾರಗಳನ್ನು ಬೋಧಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಂಚಿ ಧರ್ಮ ಜಾಗರಣ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಅಶೋಕ್ ಶೆಟ್ಟಿ ಬಿರ್ಕಾಪು ಮುರುವ, ಆನಂದ ಶೆಟ್ಟಿ ತಾಳಿಪಡ್ಪು, ಪುರುಷೋತ್ತಮ ಶೆಟ್ಟಿ ಕೆಳಗಿನಮನೆ ಪೆರುವಾಯಿ ಭಾಗವಹಿಸಿದ್ದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಸ್ವಾಗತಿಸಿ, ಕಾರ್ಯದರ್ಶಿ ಗೀತಾ ಪುರುಷೋತ್ತಮ ನಿರೂಪಿಸಿದರು.
ಶ್ರೀಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರುಪೂಜೆ, ಬಾಲಭೋಜನ, ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಶ್ರೀ ವಿಠೊಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಶ್ರೀ ಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.