ವಿಟ್ಲ: ಶ್ರೀ ಶಂಕರರು ಜ್ಞಾನದ ಬಲದಿಂದ ದೇಶ ಪರಿವರ್ತನೆಮಾಡಲು ಸಾಧ್ಯವಾಗಿತ್ತು. ಅತ್ಯುತ್ತಮ ಆರ್ಷವಿದ್ಯಾ ಕೇಂದ್ರದ ಮೂಲಕ ಹೊಸಪೀಳಿಗೆಗೆ ಇಂಥ ಜ್ಞಾನಬೋಧಿಸಿ ಧರ್ಮನಿಷ್ಠೆ, ದೇಶನಿಷ್ಠೆ, ಸಂಸ್ಕೃತಿನಿಷ್ಠೆಯನ್ನು ಒಳ ಗೊಂಡ ಪರಿ ಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀ ರಾಮ ಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅವರು ಗುರುವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಜನ ಭವನದಲ್ಲಿ ಹಮ್ಮಿಕೊಂಡಿದ್ದ ವಿಷ್ಣುಗುಪ್ತವಿಶ್ವವಿದ್ಯಾಪೀಠದ ಮಾರ್ಗ ದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪರಿಪೂರ್ಣವಾದ ಭಾರತೀಯ ವಿದ್ಯೆಗಳ ಕಲಿಕಾ ಕೇಂದ್ರ ದೇಶದಲ್ಲಿ ಎಲ್ಲೂ ಇಲ್ಲ. ಅಂಥ ವಿಶಿಷ್ಟ ಕಾರ್ಯಕ್ಕೆ ಶ್ರೀಮಠ ಮುಂದಾಗಿದ್ದು, 2020ರ ಎ. 26ರ ಅಕ್ಷಯ ತೃತೀಯಾ ದಂದು ಈ ವಿಶ್ವ ವಿದ್ಯಾಪೀಠ ಲೋಕಾರ್ಪಣೆ ಯಾಗಲಿದೆ. ಇದು ಶ್ರೀಶಂಕರ ಪರಂಪರೆಯ 36ನೇ ತಲೆಮಾರಿನ ಕೊಡುಗೆಯಾಗಿದೆ ಎಂದರು.
ಡಾ| ಗಜಾನನ ಶರ್ಮ ಪ್ರಸ್ತಾವನೆ ಗೈದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವ್ಯವಸ್ಥಾ ಸಮಿತಿ ಗೌರವಾಧ್ಯಕ್ಷ ದೇವವ್ರತ ಶರ್ಮ, ಹವ್ಯಕ ಮಹಾ ಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ನಿಯೋಜಿತ ಪ್ರಧಾನ ಕಾರ್ಯದರ್ಶಿ ಪಿ. ನಾಗರಾಜ ಭಟ್ ಪೆದಮಲೆ, ಮಾಣಿಮಠ ಸೇವಾಸಮಿತಿ ಅಧ್ಯಕ್ಷ ಹಾರಕರೆ ನಾರಾಯಣಭಟ್ ಉಪಸ್ಥಿತರಿದ್ದರು.ಮಂಗಳೂರುಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ನಿರ್ವಹಿಸಿದರು.