Home ಧಾರ್ಮಿಕ ಸುದ್ದಿ ಅ. 2: ಶ್ರೀ ಹನುಮಗಂಗಾ ಪುಷ್ಕರಿಣಿ ಲೋಕಾರ್ಪಣೆ

ಅ. 2: ಶ್ರೀ ಹನುಮಗಂಗಾ ಪುಷ್ಕರಿಣಿ ಲೋಕಾರ್ಪಣೆ

ಒಡಿಯೂರು ಸಂಸ್ಥಾನ 

1175
0
SHARE

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಶ್ರೀ ಹನುಮಗಂಗಾ ಪುಷ್ಕರಿಣಿ ಅ. 2ರ ಶ್ರೀ ಲಲಿತಾ ಪಂಚಮಿ ಮಹೋತ್ಸವದಂದು ಲೋಕಾರ್ಪಣೆಗೊಳ್ಳಲಿದೆ.

ಒಡಿಯೂರು ಶ್ರೀ ದತ್ತಾಂಜನೇಯ ದೇಗುಲದ ವಿಶೇಷ ಆಕರ್ಷಣೆಯಾಗಿರುವ ಈ ಪುಷ್ಕರಿಣಿ ಕಲಾತ್ಮಕವಾಗಿ ಮೂಡಿ ಬಂದಿದೆ. ಪುಷ್ಕರಿಣಿಯ ಉತ್ತರಭಾಗದಲ್ಲಿ ನಿರ್ಮಿಸಿದ ವಿಶಿಷ್ಟ ಶಿಲ್ಪಕೃತಿಯಲ್ಲಿ ಶ್ರೀ ದತ್ತಗುರು ಮತ್ತು ಶ್ರೀ ಆಂಜನೇಯನ ಬಿಂಬ ದಿವ್ಯ ತೇಜಸ್ಸಿನಿಂದ ಆಕರ್ಷಿಸುತ್ತಿದೆ. ಸಮೀಪದಲ್ಲಿರುವ ಕಾಮಧೇನು, ಹನುಮ, ನವಿಲು ಮೂರ್ತಿಗಳಿಗೆ ಪ್ರಾಕೃತಿಕವಾದ ಆಕರ್ಷಣೆ ಇದೆ.

ಈ ಸುಂದರ ಶಿಲ್ಪರಚನೆಯನ್ನು ಸೂಕ್ಷ್ಮ ವಾಗಿ ವೀಕ್ಷಿಸಿದಾಗ ಪೂರ್ವದಲ್ಲಿ ಹನುಮ, ಪಶ್ಚಿಮದಲ್ಲಿ ಗರುಡ ಆಕೃತಿ, ಮಧ್ಯದಲ್ಲಿ ಗಣಪತಿ ಮೂಡಿದೆ. ಸಂಸ್ಥಾನದಲ್ಲಿ ಸುಂದರವಾಗಿ ನಿರ್ಮಿಸಿ ನಿತ್ಯಾನಂದ ಗುಹೆಯಲ್ಲಿಯ ಪುಟ್ಟ ಜಲಾಶಯದಲ್ಲಿ ಆಗ್ನೇಯ ಭಾಗದಲ್ಲಿರುವ ಹನುಮಗಂಗೆ ಒರತೆ ನೇರವಾಗಿ ಶ್ರೀ ಹನುಮಗಂಗಾ ಪುಷ್ಕರಿಣಿಗೆ ಗೋಮುಖದ ಮೂಲಕ ಸೇರುತ್ತದೆ.

ಶ್ರೀ ಲಲಿತಾ ಪಂಚಮಿ -ಶ್ರೀ ಚಂಡಿಕಾ ಮಹಾಯಾಗ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ. 2ರಂದು ವಿವಿಧ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಲಲಿತಾ ಪಂಚಮಿ ಮಹೋತ್ಸವ ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಮಹಾಯಾಗವು ಜರಗಲಿದ್ದು, ಬೆಳಗ್ಗೆ ದೀಪಾರಾಧನೆ, 9.30ಕ್ಕೆ ಶ್ರೀ ಚಂಡಿಕಾ ಮಹಾಯಾಗ ಆರಂಭಗೊಳ್ಳಲಿದೆ. ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ 10ಕ್ಕೆ ನಡೆಯಲಿದ್ದು, ಸಾಧ್ವಿ ಮಾತಾನಂದಮಯೀ ಉಪಸ್ಥಿತರಿರುವರು. ಬಂಟ್ವಾಳ ಶಾಸಕ ರಾಜೇಶ್‌ ನಾ„ಕ್‌ ಉಳಿಪ್ಪಾಡಿಗುತ್ತು, ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ನಂದಿನಿ ಶೆಟ್ಟಿ, ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ವಿದುಷಿ ಸಾವಿತ್ರಿ ಈಶ್ವರ ಭಟ್‌ ಅಮೈ, ಚಿತ್ರನಟ, ರಂಗ ಭೂಮಿ ಕಲಾವಿದ ಕಾಸರಗೋಡು ಚಿನ್ನಾ, ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್‌ ಕಟೀಲು, ತುಳು ನಾಟಕ ರಚನೆಗಾರ, ನಿರ್ದೇಶಕ, ನಿರ್ಮಾಪಕ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ.ಯ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತಬೈಲ್‌ ಇವರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಮಧ್ಯಾಹ್ನ ಶ್ರೀ ಚಂಡಿಕಾ ಮಹಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದ್ದು, ಅಪರಾಹ್ನ 2ಕ್ಕೆ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ. ಸಂಜೆ 6ಕ್ಕೆ ಸಾರ್ವಜನಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಲಿದೆ .

LEAVE A REPLY

Please enter your comment!
Please enter your name here