Home ಧಾರ್ಮಿಕ ಸುದ್ದಿ ಕೊಂಡೆವೂರಿನ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ

ಕೊಂಡೆವೂರಿನ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ

1041
0
SHARE

ಕೊಂಡೆವೂರು: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆಯ ಆರಂಭಿಕ ಕಾರ್ಯಕ್ರಮವು ಗ್ರಾಮ ದೇವಸ್ಥಾನವಾದ ಮುಳಿಂಜ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯಿತು.

ಮಾತೆಯರು ಪೂರ್ಣಕುಂಭದೊಡನೆ, ಶಂಖ ಜಾಗಟೆ ವಾದನ ಸಹಿತ ಗ್ರಾಮದ ಹಿರಿಕಿರಿಯರು ರಥವನ್ನು ಸ್ವಾಗತಿಸಿ ಶ್ರೀ ಮಹಾವಿಷ್ಣುವನ್ನು ಬರಮಾಡಿಕೊಂಡರು. ಮೊದಲಿಗೆ ಭಜನಾ ಕಾರ್ಯಕ್ರಮವಾಗಿ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ನಂತರ ನಡೆದ ಸತ್ಸಂಗದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು, ಮುಂದಿನ ಫೆಬ್ರವರಿ 19 ರಿಂದ 24 ರ ವರೆಗೆ ನಡೆಯುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ವಿಶೇಷತೆಗಳನ್ನು ವಿವರಿಸಿದರಲ್ಲದೆ ಈ ಯಾಗದ ಅಗ್ನಿದರ್ಶನ, ಯಾಗ ಹೊಗೆಯನ್ನು ಆಘ್ರಾಣಿಸುವುದು ಮತ್ತು ಪೂರ್ಣಾಹುತಿಯ ಅನಂತರ ನಡೆಯುವ ಅವಭೃತ ಸ್ನಾನಗಳಿಂದ ನಮ್ಮ ಪಾಪಗಳೆಲ್ಲ ಪರಿಹಾರ ವಾಗುತ್ತದೆ ಎಂದರು. ಈ ಹಿನ್ನೆಲೆ ಯಲ್ಲಿ ರಥ ಪರ್ಯಟನೆಯ ಮೊದಲ ಕಾರ್ಯಕ್ರಮ ನಮ್ಮ ಗ್ರಾಮದೇಗುಲದಲ್ಲಿ ನಡೆದಿದ್ದು, ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಶ್ರದ್ಧಾಕೇಂದ್ರಗಳಿಗೆ ಸಂಚರಿಸಲಿದೆ ಎಂದರು. ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಸಂಜೀವ ಭಂಡಾರಿ ಮುಳಿಂಜಗುತ್ತು ಮತ್ತು ಧಾರ್ಮಿಕ, ಸಾಮಾಜಿಕ ಮುಂದಾಳು ಡಾ| ಶ್ರೀಧರ ಭಟ್‌ ಉಪ್ಪಳ ಉಪಸ್ಥಿತರಿದ್ದರು. ನಾರಾಯಣ ಹೆಗ್ಡೆ ಕೋಡಿಬೈಲು ಸ್ವಾಗತಿಸಿ, ಹರೀಶ್‌ ಮಾಡ ವಂದಿಸಿದರು.

ಈ ಯಾಗದ ಪಂಚಾಯತ್‌ ಸಮಿತಿಗಳ, ಉಪಸಮಿತಿಗಳ, ಕಾಂಞಂಗಾಡ್‌ ಮತ್ತು ಬೆಂಗಳೂರು ಸಮಿತಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಉಳಿದ ಶ್ರದ್ಧಾ ಕೇಂದ್ರಗಳಿಗೆ ರಥ ಸಂಚರಿಸುವ ವಿವರಗಳನ್ನು ತಿಳಿಸಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here