Home ನಂಬಿಕೆ ಸುತ್ತಮುತ್ತ ವಿಜಯದಶಮಿ; ಸುಜ್ಞಾನದ ದಶಮಿ

ವಿಜಯದಶಮಿ; ಸುಜ್ಞಾನದ ದಶಮಿ

1606
0
SHARE

ನವರಾತ್ರಿಗಳು ಕಳೆದು ಹತ್ತನೆಯ ದಿನವೇ ವಿಜಯದಶಮಿಯ ದಿನ. ಆಶ್ವಯುಜ ಶುಕ್ಲ ಪ್ರತಿಪದದಿಂದ ನವಮಿ ತನಕದ ರಾತ್ರಿ ಶಕ್ತಿಸ್ವರೂಪೀ ದೇವಿಯನ್ನು ಬೇರೆಬೇರೆ ರೂಪಗಳಲ್ಲಿ ಪೂಜಿಸಿ, ಆರಾಧಿಸಿ ದಶಮಿಯ ದಿನದಂದು ಶಕ್ತಿ ಅಥವಾ ದೇವಿಯು ದುಷ್ಟರನ್ನು ಯಮಪುರಕ್ಕೆ ಅಟ್ಟಿ ಜಯದ ಮಾಲೆಯನ್ನು ತೊಟ್ಟ ದಿನವೇ ಈ ವಿಜಯದಶಮಿ. ರಾವಣನನ್ನು ರಾಮ ಸಂಹಾರ ಮಾಡಿದ ದಿನವೂ ಇದೇ ದಿನ. ಪಾಂಡರು ಅಜ್ಞಾತವಾಸವನ್ನು ಕಳೆದು ಸತ್ಯದಪರ ಹೋರಾಡುವುದಕ್ಕಾಗಿ ಶಮೀವೃಕ್ಷಕ್ಕೆ ಪೂಜಿಸಿ ಶಸ್ತ್ರಾಸ್ತ್ರಗಳನ್ನು ತೊಟ್ಟದಿನವನ್ನೂ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಅಂದರೆ ಒಟ್ಟಾರೆಯಾಗಿ ಸತ್ಯ-ಧರ್ಮದ ಜಯದ ಸಂಕೇತವೇ ಈ ವಿಜಯದಶಮಿ.

ಒಂಬತ್ತು ರಾತ್ರಿಯಲ್ಲಿ ಒಂಬತ್ತು ರೂಪವೂ ಬದುಕಿನ ಆನಂದವೆಲ್ಲಿದೆ? ಎಂಬುದನ್ನು ತೋರಿಸಿಕೊಟ್ಟಿವೆ. ಆನಂದದ ಜೀವನಕ್ಕಾಗಿ ಏನು ಮಾಡಬೇಕೆಂಬುದನ್ನೂ ನಮಗೆ ತಿಳಿಸಿಕೊಟ್ಟಿವೆ. ಆ ಒಂಬತ್ತು ರಾತ್ರಿಗಳಲ್ಲಿ ಮಾಡಿದ ಸತ್ಪ್ರತಿಜ್ಞೆಗಳು ದಶಮಿಯ ದಿನದಿಂದ ಜಾರಿಯಲ್ಲಿಡಬೇಕು. ಸತ್ಯ-ಸುಳ್ಳು, ಧರ್ಮ-ಅಧರ್ಮದ ನಡುವೆ ಅನಾದಿಕಾಲದಿಂದಲೂ ಯುದ್ಧ ನಡೆಯುತ್ತಲೇ ಬಂದಿದೆ. ಕೊನೆಯಲ್ಲಿ ಜಯದೊರಕುವುದು ಮಾತ್ರ ಸತ್ಯಕ್ಕೆ ಮತ್ತು ಧರ್ಮಕ್ಕೆ. ವಿಜಯದಶಮಿಗೆ ವಿದ್ಯಾದಶಮಿ ಎಂತಲೂ ಹೇಳಲಾಗುತ್ತದೆ. ಈ ದಿನ ವಿದ್ಯಾದೇವತೆಯಾದ ಶಾರದೆಯನ್ನು ಪೂಜಿಸಲಾಗುತ್ತದೆ. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ವಿದ್ಯಾರಂಭವನ್ನೂ ಮಾಡಲಾಗುತ್ತದೆ. ಅಂದರೆ ದೇವಿ ಎಂದರೆ ಜ್ಞಾನದ ಸ್ವರೂಪವೂ ಹೌದು. ಅಜ್ಞಾನದ ಅಂದಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ತಾಯಿಯೂ ಇವಳೇ.

ವಿಜಯದಶಮಿಯನ್ನು ಹಬ್ಬವಾಗಿ ಆಚರಿಸಿ, ಆನಂದವನ್ನು ಅನುಭವಿಸಿದ ಬಳಿಕ ವಿಜಯದಶಮಿಯ ತತ್ತ್ವವನ್ನು ಅರಿತು ಅಳವಡಿಸಿಕೊಳ್ಳುವ ಸಂಭ್ರಮ ನಮ್ಮದಾಗಬೇಕು. ಪ್ರತಿಯೊಬ್ಬರ ಮನದೊಳಗೂ ಸತ್ಯ-ಅಸತ್ಯದ, ಧರ್ಮ-ಅಧರ್ಮದ ದ್ವಂದ್ವಗಳು ಆಗಾಗ ತಲೆಯೆತ್ತುತ್ತಲೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಯಾವುದು ಧರ್ಮ? ಯಾವುದು ಅಧರ್ಮ? ಎಂಬ ಪ್ರಶ್ನೆ ಬಹುವಾಗಿ ಕಾಡುತ್ತದೆ. ಆಗ ಏನು ಮಾಡಬೇಕೆಂಬುದು ತೋಚದೆಯೂ ಇರಬಹುದು. ಇದಕ್ಕೆ ಕಾರಣವನ್ನು ಹುಡುಕುತ್ತ ಹೋದಾಗ ಸಿಗುವುದು ನಾವು ಮಾಡುವ ತಪ್ಪುಗಳು. ಈಗೀಗ ಹಬ್ಬಗಳು ಕೇವಲ ಮೋಜಿನ ಸಂಗತಿಯಾಗಿ, ಆಡಂಭರದ ಆಚರಣೆಯಾಗಿ ಮಾರ್ಪಾಡುಗೊಳ್ಳುತ್ತಿರುವುದಕ್ಕೆ ನಾವೇ ಕಾರಣ.

ವಿಜಯದಶಮಿ ಎಂಬುದು ವಿದ್ಯೆಯ ದಶಮಿ. ಅಂದರೆ ಜ್ಞಾನದ ಕಣ್ಣನ್ನು ತೆರೆದುಕೊಂಡು ಬದುಕುವ ದಿನ. ರಾವಣನೋ, ರಾಕ್ಷಸರೋ, ಧರ್ಮಭ್ರಷ್ಟರೋ ಪ್ರತಿನಿಧಿಸುವುದು ನಮ್ಮೊಳಗಿನ ದುಷ್ಟತನವನ್ನು. ರಾವಣನ ಪ್ರತಿಕೃತಿಯನ್ನು ದಹನ ಮಾಡಿ ಈ ಹಬ್ಬವನ್ನು ಆಚರಿಸುವ ಕ್ರಮ ಹಲವು ಕಡೆ ಇದೆ. ಇದರರ್ಥ ಕೇವಲ ರಾವಣವಧೆಯನ್ನು ನೆನಪಿಸಿಕೊಂಡು ಹರ್ಷಪಡುವುದಷ್ಟೇ ಅಲ್ಲ. ನಮ್ಮೊಳಗೂ ಒಬ್ಬ ರಾವಣನಿದ್ದಾನೆ. ಅಂದರೆ ದುಷ್ಟತನವಿದೆ. ಅಧರ್ಮದ ಯೋಚನೆಗಳಿವೆ. ಅವನ್ನೆಲ್ಲ ಈದಿನ ಸುಟ್ಟುಬಿಡಬೇಕು. ಸತ್ಯ-ಧರ್ಮಗಳು ಅವುಗಳ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಡಬೇಕು. ಇದು ಪ್ರತಿಯೊಬ್ಬನಲ್ಲೂ ಆಗಲೇ ಬೇಕಾದ ಬದಲಾವಣೆ. ಸುಸಂಸ್ಕಾರ ಎಂಬುದು ಜಾಗತಿಕವಾಗಬೇಕು.

ಶಕ್ತಿಯ ಸ್ವರೂಪವೇ ದೇವಿ. ದೇವಿ ಎಂದರೆ ಜಗಜ್ಜನನಿ. ಈ ಪ್ರಕೃತಿಯೇ ಅವಳ ರೂಪ. ಅವಳನ್ನು ಅನುಸರಿಸಿ ಇರಬೇಕಾದುದು ನಮ್ಮೆಲ್ಲರ ಕರ್ತವ್ಯ. ಅರಿವಿಲ್ಲದ ಅಜ್ಞಾನಕ್ಕಿಂತ ಅರಿವಿದ್ದು ಬರುವ ಅಜ್ಞಾನ ಯಾವತ್ತಿಗೂ ಅಪಾಯಕಾರಿಯೇ. ಉರಿಯುವ ದೀಪ ಸುಡುತ್ತದೆ ಎಂಬುದು ಗೊತ್ತಿದ್ದೂ ಅದರಲ್ಲಿ ಕೈಯನ್ನಿಟ್ಟು ನೋಡುತ್ತೇನೆಂಬುದು ಪ್ರಜ್ಞಾವಂತನ ಅಜ್ಞಾನವಲ್ಲದೇ ಮತ್ತಿನ್ನೇನು? ಇಂತಹ ನಡವಳಿಕೆಗಳು ಹೆಚ್ಚುತ್ತಿವೆ. ವಿತ್ತಂಡವಾದಗಳು, ಅಪನಂಬಿಕೆಗಳು ಮೊದಲಾದುವೆಲ್ಲವನ್ನೂ ಬದಿಗಿಟ್ಟು ಆತ್ಮದ ಹೊರತಾಗಿ ಆತ್ಮವನ್ನು ನಿರ್ದೇಶಿಸುವ ಶಕ್ತಿಯನ್ನು ಅರಿತು, ಅದರ ನಿರ್ದೇಶನದಂತೆ ಬದುಕಬೇಕಾದ ಅಗತ್ಯವಿದೆ. ಆ ಅರಿವನ್ನು ಶ್ರೀದೇವಿಯು ಸರ್ವರಿಗೂ ಕೊಡಲಿ ಎಂಬುದು ಸದಾಶಯ.

ಯಾದೇವಿ ಸರ್ವ ಭೂತೇಷು ಶಕ್ತಿರೂಪೇಣ ಸಂಸ್ಥಿತಾ |
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ ||

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here