ಮೂಡುಬಿದಿರೆ: ವಿದ್ಯಾಗಿರಿ ಯಲ್ಲಿರುವ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ ಧನ್ವಂತರಿ ಪೂಜೆ ಮತ್ತು ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ ಜರಗಿತು. ಬೆಳಗ್ಗೆ ಗಂ. 7ರಿಂದ ಅಲಂಗಾರು ಈಶ್ವರ ಭಟ್ ಮತ್ತು ವೈದಿಕ ಬಳಗದವರು ಧನ್ವಂತರಿ ಹೋಮ, ಪೂಜೆ ನೆರವೇರಿಸಿದರು. ದೂರದರ್ಶನ ಕಲಾವಿದ ಎಂ. ಎಸ್. ಗಿರಿಧರ್ ನಿರ್ದೇಶನದಲ್ಲಿ ಆಳ್ವಾಸ್ ಆಯುರ್ವೇದ ವಿದ್ಯಾರ್ಥಿಗಳು ಭಕ್ತಿಗಾನ ಸುಧಾ ಕಾರ್ಯಕ್ರಮ ನೀಡಿದರು.
ಆಯುರ್ವೇದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ “ಶಿಷ್ಯೋಪನಯ ಸಂಸ್ಕಾರ’ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಪ್ರಾಚಾರ್ಯ ಡಾ| ಬಿ. ವಿನಯಚಂದ್ರ ಶೆಟ್ಟಿ ಹಾಗೂ ಹಿರಿಯ ಪ್ರಾಧ್ಯಾಪಕರು ನೆರವೇರಿಸಿದರು. ಟ್ರಸ್ಟಿಗಳಾದ ವಿವೇಕ ಆಳ್ವ, ಡಾ| ವಿನಯ ಆಳ್ವ, ಡಾ| ಹನಾ ವಿ. ಆಳ್ವ , ಬೋಧಕ-ಬೋಧಕೇತರ ಸಿಬಂದಿ ಹಾಗೂ ಆಹ್ವಾನಿತರು ಪಾಲ್ಗೊಂಡಿದ್ದರು.