Home ಧಾರ್ಮಿಕ ಸುದ್ದಿ ಶ್ರದ್ಧೆ, ಭಕ್ತಿ-ನಂಬಿಕೆಯಿಂದ ಜೀವನದಲ್ಲಿ ಶ್ರೇಯಸ್ಸು

ಶ್ರದ್ಧೆ, ಭಕ್ತಿ-ನಂಬಿಕೆಯಿಂದ ಜೀವನದಲ್ಲಿ ಶ್ರೇಯಸ್ಸು

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾನ್ಯಾಸ

1347
0
SHARE
ಶೃಂಗೇರಿ ಶ್ರೀಗಳು ಆಶೀರ್ವಚನ ನೀಡಿದರು

ವೇಣೂರು: ಭಗವಂತನಲ್ಲಿನ ಶ್ರದ್ಧೆ, ಭಕ್ತಿ ಮತ್ತು ನಂಬಿಕೆ ನಮ್ಮೆಲ್ಲ ಶ್ರೇಯಸ್ಸಿಗೆ ಕಾರಣವಾಗುತ್ತದೆ. ನಿಮ್ಮೆಲ್ಲರ ಸಂಕಲ್ಪದಂತೆ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಗುರುಗಳ ಪರಮಾನುಗ್ರಹ ದಿಂದ ಡಾ| ಹೆಗ್ಗಡೆಯವರು ಹಾಗೂ ಸೀಮೆಯ ಅರಸರ ಉಪಸ್ಥಿತಿಯಲ್ಲಿ ನಾವಿಂದು ದೇಗುಲಕ್ಕೆ ಶಿಲಾನ್ಯಾಸ ನೆರವೇರಿಸಿದ್ದೇವೆ. 32 ಗ್ರಾಮದ ಜನತೆಗೆ ಶಿವನು ಅನುಗ್ರಹಿಸುವುದರ ಜತೆಗೆ ಶೀಘ್ರ ವೈಭವದಲ್ಲಿ ಬ್ರಹ್ಮಕಲಶ ನೆರವೇರಲಿದೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ನುಡಿದರು.

ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣ ಆಗಲಿರುವ ವೇಣೂರು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಪ್ರಪಂಚದಲ್ಲೇ ಅತ್ಯಂತ ಗೌರವಿಸಲ್ಪಡುವ ವಿಶಿಷ್ಟ ದೇಶ ನಮ್ಮದು. ಅನಾದಿ ಕಾಲದಿಂದ ಶಾಶ್ವತವಾಗಿರುವುದೇ ಹಿಂದೂ ಧರ್ಮ. ನಾವೆಲ್ಲ ಕ್ಷೇಮವಾಗಿರಬೇಕಾದರೆ ದೇವಸ್ಥಾನಗಳ ಜೀರ್ಣೋದ್ಧಾರ ಅಗತ್ಯ ಎಂದು ಶ್ರೀಗಳು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶಿಲಾನ್ಯಾಸ ಫಲಕ ಅನಾವರಣಗೊಳಿಸಿ ಮಾತನಾಡಿ, ಇಂದು ಜನರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಆದರೆ ಹೃದಯ ಶ್ರೀಮಂತಿಕೆಯ ಕೊರತೆ ಇದೆ. ಬಡತನದಲ್ಲಿರುವವರನ್ನೂ ಪ್ರೀತಿಯಿಂದ ಕಾಣಬೇಕಾದರೆ ಹೃದಯ ಶ್ರೀಮಂತಿಕೆ ಬೇಕು ಎಂದರು.

ಶಾಸಕ ಹರೀಶ್‌ ಪೂಂಜ, ಮಾಜಿ ಮುಖ್ಯ ಸಚೇತಕ ಕೆ. ವಸಂತ ಬಂಗೇರ, ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಕಾಪುವಿನ ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಧರ್ಮದರ್ಶಿ ಬಿ. ರಘುನಾಥ ಸೋಮಯಾಜಿ, ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡೈ, ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ಸೋಮಯ್ಯ ಹನೈನಡೆ, ಪಿ.ಎನ್‌. ಪುರುಷೋತ್ತಮ ರಾವ್‌, ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ ಉಪಸ್ಥಿತ ರಿದ್ದರು.

ಸೀಮೆಯ ತಿಮ್ಮಣ್ಣರಸ, ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರಹೆಗ್ಡೆ ಬಿಇ ಮತ್ತು ಕಿಶೋರ್‌ ಭಂಡಾರಿ ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿ, ಕಾರ್ಯಾಧ್ಯಕ್ಷ ಪಿ. ಧರಣೇಂದ್ರ ಕುಮಾರ್‌ ವಂದಿಸಿದರು.

LEAVE A REPLY

Please enter your comment!
Please enter your name here