ಕಟಪಾಡಿ: ಉಡುಪಿ, ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ವತಿಯಿಂದ ವಿಶ್ವಕರ್ಮ ಸಮಾಜದವರಿಗಾಗಿ ಜರಗಿದ ಸಾಂಪ್ರದಾಯಿಕ ಭಜನ ಸ್ಪರ್ಧೆಗೆ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಜೂ.30ರಂದು ಚಾಲನೆಯನ್ನು ನೀಡ ಲಾಯಿತು.
ದೀಪ ಬೆಳಗಿಸಿ ಉದ್ಘಾಟಿಸಿದ ವೇಣುಗಿರಿ ಕಟಪಾಡಿ-ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ ತಮ್ಮ ಆಶೀರ್ವಚನದಲ್ಲಿ, ಭಕ್ತರ ಐಕ್ಯತೆಗೆ ಮತ್ತು ಮನುಷ್ಯರ ಕಲ್ಯಾಣಕ್ಕಾಗಿ ಭಜನೆ ಆವಶ್ಯಕ. ಹಾಗಾಗಿ ಎಲ್ಲರ ಮನೆ-ಮನಗಳಲ್ಲಿ ಭಜನೆ ಹೆಚ್ಚು ನಡೆಯಬೇಕಿದೆ. ಭಗವಂತನ ಪ್ರೀತಿಗಾಗಿ ಶ್ರದ್ಧಾ ಭಕ್ತಿಯ ಮನೋಭಾವದಿಂದ ಸ್ಪರ್ಧಾಳುಗಳು ಭಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಅನಂತರ ಆಶೀರ್ವಚನ ನೀಡಿದ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ, ವಿಶ್ವಕರ್ಮ ಜಗದ್ಗುರು ಪೀಠಾಧೀಶ್ವರ ಪರಮಪೂಜ್ಯ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಜಿ ಅವರು, ಭಕ್ತಿ-ಶ್ರದ್ಧೆಯ ಮೂಲಕ ನಿರಂತರ ಭಗವಂತನ ಸ್ಮರಣೆಯಿಂದ ಪಾಪಕರ್ಮಗಳು ದೂರವಾಗುತ್ತದೆ. ಆಧ್ಯಾತ್ಮದ ಚಿಂತನೆಗಳನ್ನು ನಡೆಸಲು ಯೋಗ್ಯನಾಗುತ್ತಾನೆ. ಆ ನಿಟ್ಟಿನಲ್ಲಿ ಭಗವಂತನ್ನು ಸಾಕ್ಷಾತ್ಕಾರಿಸಲು ಭಜನೆ ಶ್ರೇಷ್ಠ ಮಾಧ್ಯಮ ಎಂದರು.
ಮುಖ್ಯ ಅತಿಥಿಯಾಗಿದ್ದ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಆಚಾರ್ಯ ಪಡುಬಿದ್ರಿ ಮಾತನಾಡಿ, ಭಜನೆಯು ದೇವರ ಸ್ಮರಣೆಯೊಂದಿಗೆ ಜೀವನದ ಪದ್ಧತಿಯನ್ನು ತಿಳಿಸುವ ಆಡುಭಾಷೆಯಾಗಿದೆ. ಭಜನೆಯು ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೀವನ ಮೌಲ್ಯವನ್ನು ಅರ್ಥೈಸಿಕೊಳ್ಳಲು ಭಜನೆ, ಕೀರ್ತನೆಗಳು ಸಹಕಾರಿ ಎಂದರು.
ಉಡುಪಿ, ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್. ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಮಧು ಆಚಾರ್ಯ ಮುಲ್ಕಿ ವೇದಿಕೆಯಲ್ಲಿದ್ದರು. ತೀರ್ಪುಗಾರರಾಗಿ ಅಶೋಕ್ ಕಾಂಚನ್, ಸುರೇಖಾ, ಮಾಯಾ ಕಾಮತ್ ಸಹಕರಿಸಿದರು. ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಆಚಾರ್ಯ ಚೇಂಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಪ್ಪಳ, ಕಾರ್ಕಳ, ಪಡುಬಿದ್ರಿ, ಬಂಟ್ವಾಳ, ಮೂಡಬಿದ್ರಿ, ಕಿನ್ನಿಗೋಳಿ, ಎಡ್ಮೇರ್, ನಿಟ್ಟೆ, ಮಂಜರಪಲ್ಕೆ, ಉಡುಪಿ, ಬಾರ್ಕೂರು, ಬ್ರಹ್ಮಾವರ, ಹಳೆಯಂಗಡಿ, ಕೋಟೇಶ್ವರ, ಪುತ್ತೂರು, ಬಂಗ್ರಮಂಜೇಶ್ವರದ ಸಹಿತ ಒಟ್ಟು ವಿವಿಧ ಕಡೆಗಳ 18 ಭಜನಾ ಮಂಡಳಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು.