Home ಧಾರ್ಮಿಕ ಕಾರ್ಯಕ್ರಮ ದಕ್ಷಿಣ ಕಾಶಿ ಕೊಟ್ಟಿಯೂರಿನಲ್ಲಿ ವೈಶಾಖ ಮಹೋತ್ಸವ

ದಕ್ಷಿಣ ಕಾಶಿ ಕೊಟ್ಟಿಯೂರಿನಲ್ಲಿ ವೈಶಾಖ ಮಹೋತ್ಸವ

669
0
SHARE

ಬದಿಯಡ್ಕ: ಉತ್ತರ ಕೇರಳದ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಶ್ರೀ ಕೊಟ್ಟಿಯೂರು ಮಹಾದೇವ ಕ್ಷೇತ್ರದಲ್ಲಿ ವೈಶಾಖ ಮಹೋತ್ಸವ ಅಥವಾ ವಸಂತೋತ್ಸವವು ಮೇ 27ರಂದು ಪ್ರಾರಂಭವಾಗಿದ್ದು, ಜೂ. 22ರಂದು ಕೊನೆಗೊಳ್ಳಲಿದೆ. ವರ್ಷದಲ್ಲಿ ವೈಶಾಖ ಮಾಸದ ಒಂದು ತಿಂಗಳು ಮಾತ್ರ ತೆರೆದಿರುವ ಈ ಸ್ವಯಂಭೂ ಸಾನ್ನಿಧ್ಯವು ಕೇರಳದ ಕಣ್ಣೂರಿನ ಬಾವಾಲಿ ನದಿಯ ದಡದಲ್ಲಿ ಪ್ರಕೃತಿಯ ಮಡಿಲಲ್ಲಿ ಶೋಭಿಸುತ್ತಿದೆ. ದಕ್ಷ ಯಜ್ಞ ಮಾಡಿದ ಸ್ಥಳ ಎಂಬ ಐತಿಹ್ಯ ಇರುವುದರಿಂದ ಹುಲ್ಲು -ತೆಂಗಿನ ಗರಿಗಳಿಂದ ನಿರ್ಮಿಸಿದ ಯಾಗಶಾಲೆಗಳು ಇಲ್ಲಿನ ಆಕರ್ಷಣೆಯಾಗಿವೆ. ಉತ್ಸವ ಕಾಲಕ್ಕೆ ಮಾತ್ರ ತಾತ್ಕಾಲಿಕವಾಗಿ ಈ ಕುಟೀರಗಳನ್ನು ನಿರ್ಮಿಸಲಾಗುತ್ತದೆ.

ವೃಷಭ ಮಾಸದ ಮಘಾ ನಕ್ಷತ್ರದಂದು ದಾಕ್ಷಾಯಿಣಿಯು ಯೋಗಾಗ್ನಿಯಲ್ಲಿ ದೇಹ ತ್ಯಾಗ ಮಾಡಿದಳು ಎಂಬ ಪುರಾಣ ಕಥೆಗೆ ಪೂರಕವಾಗಿ ಅಂದಿನಿಂದ ಉತ್ಸವದ ಅಂತ್ಯದ ವರೆಗೆ ಮಹಿಳೆಯರಿಗೆ ಈ ಕ್ಷೇತ್ರಕ್ಕೆ ಪ್ರವೇಶವಿಲ್ಲ. ಕೊನೆಯ ದಿನ ಸ್ವಯಂಭೂ ಲಿಂಗಕ್ಕೆ ಅಷ್ಟಬಂಧ ದ್ರವ್ಯಗಳನ್ನು ಮತ್ತು ಚಂದನವನ್ನು ಹಾಕಿ ಕಲಶವನ್ನು ಕವುಚಿಟ್ಟು ಮಾಡುವ ನಿಗೂಢ ಪೂಜೆಯನ್ನು ಭಕ್ತರು ನೋಡಬಾರದೆಂಬ ನಿಬಂಧನೆಯಿದೆ. ಕೊನೆಯಲ್ಲಿ ಕುರಿಚ್ಚನ್‌ ಸಮುದಾಯದ ನೂರಾರು ಮಂದಿ ಈ ಯಾಗಶಾಲೆಯನ್ನು ಹಾಳುಗೆಡವುದರೊಂದಿಗೆ ಒಂದು ವರ್ಷದ ವೈಶಾಖ ಮಹೋತ್ಸವವು ಕೊನೆಯಾಗುತ್ತದೆ. ಮುಂದಿನ ವೈಶಾಖೋತ್ಸವದ ತನಕ ಈ ಪ್ರದೇಶಕ್ಕೆ ಯಾರೂ ಪ್ರವೇಶಿಸುವಂತಿಲ್ಲ. ಉತ್ಸವದ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ, ಆಂಧ್ರಪ್ರದೇಶಗಳಿಂದ ಸಾವಿರಾರು ಮಂದಿ ಪರಮಶಿವನ ದರುಶನ ಪಡೆಯಲು ಆಗಮಿಸುತ್ತಿದ್ದು, ಎಲ್ಲ ಅಗತ್ಯ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ.

LEAVE A REPLY

Please enter your comment!
Please enter your name here