ಉಪ್ಪಿನಂಗಡಿ: ನಮ್ಮ ಒಳಗೂ, ಹೊರಗೂ ದೇವರ ಚೈತನ್ಯ ಶಕ್ತಿ ಇದೆ. ಆದರೆ ಚೈತನ್ಯ ಶಕ್ತಿಯ ಕ್ರೋಡೀಕರಣ ಒಂದು ನೆಲೆಯಲ್ಲಿ ಇದ್ದಾಗ ಅದರ ಬೆಳಕು ಎಲ್ಲ ಕಡೆ ಬೀರಲು ಸಾಧ್ಯವಿದೆ. ಆದ್ದರಿಂದ ದೇವಾಲಯಗಳ ಪರಿಕಲ್ಪನೆ ಬಂದಿದೆ. ಧರ್ಮ ಸಂಸ್ಕೃತಿ ನಮ್ಮದಾದಾಗ ಮಾತ್ರ ಸಾತ್ವಿಕ ಜೀವನ ನಮ್ಮದಾಗಲು ಸಾಧ್ಯ. ಆದ್ದರಿಂದ ಧರ್ಮ ಸಂಸ್ಕೃತಿಯನ್ನು ಪೋಷಣೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಕ್ಕಳ ಮೇಲೆ ಮಾತೃತ್ವದ ದೃಷ್ಟಿ ಬಿದ್ದಾಗ ಮಾತ್ರ ಮಕ್ಕಳು ಚಾರಿತ್ರ್ಯವಂತರಾಗಲು ಸಾಧ್ಯ. ಸುಜ್ಞಾನವು ನಮ್ಮದಾದಾಗ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ. ಕಾರ್ಯ ಸಿದ್ಧಿಯ ದೃಢ ಸಂಕಲ್ಪವಿದ್ದಾಗ ಮಾತ್ರ ಎಂತಹ ಕಾರ್ಯವನ್ನಾದರೂ ಮಾಡಲು ಸಾಧ್ಯವಿದ್ದು, ನಮ್ಮೆಲ್ಲರಿಂದ ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡುವ ಕಾರ್ಯವಾಗಲಿ ಎಂದರು.
ಧರ್ಮಾಧಾರಿತ ಬದುಕು ಕಲಿಸಿ
ಧಾರ್ಮಿಕ ಉಪನ್ಯಾಸ ನೀಡಿದ ಸುಳ್ಯ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಮಾತನಾಡಿ, ದೇಶ, ದೇಹ, ದೇವನೆಂಬ ಚೌಕಟ್ಟಿನೊಳಗೆ ವಿಶೇಷ ಪರಿಕಲ್ಪನೆಯನ್ನೊಳಗೊಂಡ ಬದುಕು ಭಾರತೀಯರದ್ದು. ಪ್ರಪಂಚದ ಬೇರೆಲ್ಲೂ ಇದನ್ನು ನೋಡಲು ಸಾಧ್ಯವಿಲ್ಲ. ಹಣವೆಂಬ ಸಂಪತ್ತಿನ ಹಿಂದೆ ಸಾಗುವ ಆಧುನಿಕ ಸಮಾಜದಲ್ಲಿ ಮಾನವೀಯ ಸಂಬಂಧಗಳಿಂದು ಅನಾಥವಾಗುತ್ತಿವೆ. ಆತ್ಮ ಸಾಕ್ಷಿಗೆ ಸರಿಯಾಗಿ ಕರ್ತವ್ಯಗಳನ್ನು ಪೂರೈಸುವಲ್ಲಿ ಎಡವುತ್ತಿದ್ದೇವೆ. ಹೊರಗೆ ಪಾಲಿಸುವ ಉತ್ತಮ ಗುಣಗಳನ್ನು ನಮ್ಮ ಮನೆಯೊಳಗೆ ಅನುಷ್ಠಾನಿಸಲು ಮರೆಯುತ್ತಿದ್ದೇವೆ. ಮಾತೆಯರು ಈ ಬಗ್ಗೆ ಜಾಗೃತರಾಗಬೇಕಿದ್ದು, ಸತ್ಯನಿಷ್ಠೆ, ಧರ್ಮಾಧಾರಿತ ಬದುಕನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಮನುಷ್ಯನನ್ನು ಆತನಲ್ಲಿರುವ ಸಂಸ್ಕಾರಯುತ ಗುಣ, ಉತ್ತಮ ಮೌಲ್ಯಗಳಿಂದ ಅಳೆಯುವುದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸನಾತನ ಹಿಂದೂ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದ್ದು, ಈ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಆಗ ಶ್ರೇಷ್ಠ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಹಿರೇಬಂಡಾಡಿ ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮೀಶ, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷೆ ವಿದ್ಯಾ ನಿಡ್ಡೆಂಕಿ, ಜಾತ್ರಾ ಸಮಿತಿಯ ಅಧ್ಯಕ್ಷೆ ದೇವಮ್ಮ ಕುಬಲ, ಮಹಿಳಾ ಬೈಲುವಾರು ಸಮಿತಿಯ ಅಧ್ಯಕ್ಷೆ ಕಸ್ತೂರಿ ಹೆನ್ನಾಳ ಉಪಸ್ಥಿತರಿದ್ದರು.
ಆರತಿ ಹೆನ್ನಾಳ ಸ್ವಾಗತಿಸಿದರು. ಮಮತಾ ಹರೀಶ್ ವಂದಿಸಿದರು. ತಿಲಕ ಬಂಡಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಾಲಚಂದ್ರ ಗುಂಡ್ಯ, ಕೋಶಾಧಿಕಾರಿ ನಾರಾಯಣ ಕನ್ಯಾನ, ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಮಠಂದೂರು, ಪ್ರಧಾನ ಕಾರ್ಯದರ್ಶಿ ನವೀನ್ ಪಡು³, ಕೋಶಾಧಿಕಾರಿ ವಿಶ್ವನಾಥ್ ಕೆಮ್ಮಟೆ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿ, ಸದಸ್ಯರು ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡರು.