ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಮೇ 18ರಂದು ವೈಶಾಖ ಹುಣ್ಣಿಮೆಯ ಉತ್ಸವ ನಡೆದು ಈ ಸಾಲಿನ ಉತ್ಸವಗಳಿಗೆ ಮಂಗಳ ನಡೆಯಲಿದೆ.
ದೇವಸ್ಥಾನದಲ್ಲಿ ಪ್ರತೀ ವರ್ಷ ಉತ್ಥಾನ ದ್ವಾದಶಿ (ತುಳಸಿ ಪೂಜೆ) ಯಂದು ಶ್ರೀ ದೇವರ ಉತ್ಸವ ಆರಂಭವಾಗಿ ವೈಶಾಖ ಹುಣ್ಣಿಮೆಯಂದು ಕೊನೆಗೊಳ್ಳುತ್ತದೆ.
ದೇವರು ಒಳಗಾಗುವುದು
ತುಳು ಪಂಚಾಂಗದ ಪ್ರಕಾರ ಇತರ ದೇವಾಲಯಗಳಲ್ಲಿ ಪತ್ತನಾಜೆಯಂದು ಎಲ್ಲ ಉತ್ಸವಗಳು ಮುಗಿದು ಶ್ರೀ ದೇವರು ಒಳಗಾದ ಮಾದರಿಯಲ್ಲಿಯೇ ವೈಶಾಖ ಹುಣ್ಣಿಮೆಯಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ವರ್ಷದ ಕೊನೆಯ ಉತ್ಸವ ನಡೆದು ಶ್ರೀ ದೇವರು ಒಳಗಾಗುತ್ತಾರೆ. ಮುಂದಿನ ಉತ್ಥಾನ ದ್ವಾದಶಿಯವರೆಗೆ ಶ್ರೀ ದೇವಾಲಯಗಳಲ್ಲಿ ಯಾವುದೇ ಉತ್ಸವಾದಿಗಳು ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯುವುದಿಲ್ಲ. ಗೋವಾದಿಂದ ತೊಡಗಿ ಕೇರಳದ ಕೊಚ್ಚಿನ್ವರೆಗೆ ಇರುವ ಎಲ್ಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯಗಳಲ್ಲಿ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ಜಿಎಸ್ಬಿ ಸಮಾಜ ಬಾಂಧವರ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯಗಳಲ್ಲಿ ಭಕ್ತರು ವರ್ಷಕ್ಕೆ ಎರಡು ಬಾರಿ ದೇವರಿಗೆ ಪಟ್ಟ ಕಾಣಿಕೆ ಸಮರ್ಪಣೆ ಮಾಡುತ್ತಾರೆ. ಉತ್ಥಾನ ದ್ವಾದಶಿಯಂದು ಶ್ರೀ ದೇವರ ಉತ್ಸವ ಮೂರ್ತಿಯನ್ನು ತುಳಸಿ ಕಟ್ಟೆಯಲ್ಲಿ ಕುಳ್ಳಿರಿಸಿದಾಗ ಮತ್ತು ವೈಶಾಖ ಹುಣ್ಣಿಮೆಯಂದು ಶ್ರೀ ದೇವರ ಉತ್ಸವ ಮೂರ್ತಿಯನ್ನು ಶ್ರೀ ದೇವರ ಗರ್ಭಗುಡಿಯಲ್ಲಿ ಕುಳ್ಳಿರಿಸಿದಾಗ ಭಕ್ತರಿಂದ ದೇವರಿಗೆ ಪಟ್ಟಕಾಣಿಕೆ ಸಮರ್ಪಣೆ ನಡೆಯುತ್ತದೆ.
ವೈಶಾಖ ಹುಣ್ಣಿಮೆಯಂದು ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯಗಳಲ್ಲಿ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ದೀಪನಮಸ್ಕಾರ, ಬೆಳ್ಳಿ ಪಲ್ಲಕಿ ಪೇಟೆ ಸವಾರಿ ಉತ್ಸವ, ಫಲವಸ್ತುಗಳ ಸಹಿತ ನೈವೇದ್ಯ ಸಮರ್ಪಣೆಯೊಂದಿಗೆ ವಸಂತ ಪೂಜೆ, ಬಳಿಕ ಶ್ರೀ ದೇವರ ಉತ್ಸವ ಮುಗಿದು ಪಟ್ಟ ಕಾಣಿಕೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯುತ್ತವೆ ಎಂದು ದೇವಾಲಯದ ಆಡಳಿತ ಮೊಕ್ತೇಸರ ಬಿ. ಗಣೇಶ ಶೆಣೈ ತಿಳಿಸಿದ್ದಾರೆ.