ಉಪ್ಪಿನಂಗಡಿ : ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ 5 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದು ಅ. 8ರಂದು ರಾತ್ರಿ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.
ಸಮಾಪನ ದಿನ ಬೆಳಗ್ಗೆ ಶ್ರೀದೇವಿಯ ಮುಂದೆ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರಥಮ ಅಕ್ಷರ ಅಭ್ಯಾಸ ಕಲಿಕೆ, ಮಧ್ಯಾಹ್ನ ಪೂಜೆ, ದೇಗುಲದ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, ಈ ಮಧ್ಯೆ ವಿವಿಧ ಭಜನ ತಂಡದಿಂದ ಭಜನೆ ನಡೆಯಿತು.
ಸಂಜೆಯ ಬಳಿಕ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಿತು. ರಾಮನಗರದಿಂದ ಹೊರಟ ಮೆರವಣಿಗೆ ಗಾಂಧಿ ಪಾರ್ಕ್, ಬ್ಯಾಂಕ್ ರಸ್ತೆಗಾಗಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ವೃತ್ತ, ರಥಬೀದಿಯಾಗಿ ಸಾಗಿ ಸಂಗಮ ಕ್ಷೇತ್ರದಲ್ಲಿ ಶ್ರೀ ಶಾರದಾ ದೇವಿಯ ವಿಗ್ರಹ ಜಲಸ್ತಂಭನ ಮಾಡಲಾಯಿತು. ಅರ್ಚಕ ಸುಬ್ರಹ್ಮಣ್ಯ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಮೆರವಣಿಗೆಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಪದಾಧಿಕಾರಿಗಳಾದ ಎನ್. ಉಮೇಶ್ ಶೆಣೈ, ಅಶೋಕ್ ರೈ ನೆಕ್ಕರೆ, ರಾಜಗೋಪಾಲ ಹೆಗ್ಡೆ, ಪುಷ್ಪರಾಜ್ ಶೆಟ್ಟಿ, ಯೋಗೀಶ್ ಶೆಣೈ, ಹರಿಶ್ಚಂದ್ರ ಆಚಾರ್ಯ, ಕಂಗ್ವೆ ವಿಶ್ವನಾಥ ಶೆಟ್ಟಿ, ಸಂದೇಶ್ ಶೆಣೈ, ಗಣೇಶ್ ಭಂಡಾರಿ, ದೀಪಕ್ ಪೈ, ರಘುರಾಮ, ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಕೃಷ್ಣ, ಸ್ಥಳೀಯ ಪ್ರಮುಖರಾದ ಯು. ರಾಮ, ಜಯಂತ ಪೊರೋಳಿ, ಉಷಾ ಮುಳಿಯ, ಹರೀಶ್ ಭಂಡಾರಿ ಉಪಸ್ಥಿತರಿದ್ದರು.