ಉಪ್ಪಿನಂಗಡಿ: ಗ್ರಾಮದಲ್ಲಿ ಕಾಣಿಸಿದ ಅಸಹಜ ಸಾವುಗಳ ಹಿನ್ನೆಲೆಯಲ್ಲಿ ಅಷ್ಟಮಂಗಳ ಪ್ರಶ್ನೆಯನ್ನಿರಿಸಿ ಕಾರಣವನ್ನು ಶೋಧಿಸಿದಾಗ 500 ವರ್ಷಗಳ ಇತಿಹಾಸ ಹೊಂದಿರುವ, ಉತ್ಸವಾದಿಗಳು ನಡೆಯುತ್ತಿದ್ದ ದೈವಸ್ಥಾನವೊಂದು ಕಾಡಿನೊಳಗೆ ಪತ್ತೆಯಾಗಿದೆ.
ದೈವಸ್ಥಾನದ ಭಂಡಾರದ ಮನೆಯ ಮೂರ್ತಿಗಳು ಪ್ರಶ್ನಾನೆಲೆಯಲ್ಲಿ ಗೋಚರಿಸಿದಂತೆ ಬಂಟ್ವಾಳ ತಾಲೂಕು ಪರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಎನ್ನುವಲ್ಲಿ ನೆಲಸಮವಾದ ಮನೆಯೊಂದರ ಅವಶೇಷದಡಿ ದೈವಸ್ಥಾನದ ಕುರುಹುಗಳು ಪತ್ತೆಯಾಗಿದೆ.
ಪ್ರಶ್ನೆಯ ಮೊರೆ
ಗ್ರಾಮದಲ್ಲಿ ಸಂಭವಿಸುತ್ತಿದ್ದ ಅಸಹಜ ಸಾವುಗಳು, ಕಾಣಿಸಿಕೊಳ್ಳುತ್ತಿದ್ದ ಮೃತ ನಾಗರ ಹಾವುಗಳ ಪ್ರಕರಣಗಳಿಂದಾಗಿ ಕಳವಳಕ್ಕೀಡಾದ ಗ್ರಾಮಸ್ಥರು ಒಗ್ಗೂಡಿ ಅಷ್ಟಮಂಗಲ ಪ್ರಶ್ನೆಯ ಮೊರೆಹೋಗಿದ್ದರು. ಅಷ್ಟಮಂಗಳ ಪ್ರಶ್ನೆಯನ್ನಿರಿಸಿದ ಖ್ಯಾತ ಜೋತಿಷಿ ಕೆ.ವಿ. ಗಣೇಶ್ ಭಟ್ ಮುಳಿಯ ಅವರು, ಗ್ರಾಮದಲ್ಲಿ ಅದ್ದೂರಿಯಾಗಿ ಉತ್ಸವಾದಿಗಳು ನಡೆಯುತ್ತಿದ್ದ 500 ವರ್ಷಗಳ ಇತಿಹಾಸವಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ. ಅದಕ್ಕೆ ಸಂಬಂಧಿಸಿದ ಭಂಡಾರದ ಮನೆಯೂ ನೆಲಸಮವಾಗಿ ಅದರಲ್ಲಿದ್ದ ದೈವದ ಮೂರ್ತಿಗಳೂ ಮಣ್ಣಿನಡಿ ಸೇರಿಕೊಂಡಿದೆ. ಈ ದೈವಸ್ಥಾನದ ಪುನರುತ್ಥಾನವೇ ಗ್ರಾಮದ ಅಭಿವೃದ್ಧಿಗೆ ಕಾರಣವಾಗಬಲ್ಲದು ಎಂದು ತಿಳಿಸಿದ್ದರು.
ಭೂಮಾಲಕರ ಒಪ್ಪಿಗೆ
ಈ ಸ್ಥಳದಲ್ಲಿ ಮೂರೂ ದೈವಗಳ ಗುಡಿಯನ್ನು ಗತ ಕಾಲದ ವಿಧಿವಿಧಾನದಂತೆಯೇ ಪುನರುಜ್ಜೀವನಗೊಳಿಸುವ ಸಂಕಲ್ಪವನ್ನು ತಾಳಿ ಅನುಜ್ಞಾ ಕಲಶ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ದೈವದ ಗುಡಿಗಳಿದ್ದ ಭೂಮಿಯನ್ನು ದೈವಸ್ಥಾನಕ್ಕೆ ಬಿಟ್ಟುಕೊಡುವ ಬಗ್ಗೆ ಪ್ರಸಕ್ತ ಭೂಮಾಲಕರು ಒಪ್ಪಿಗೆ ನೀಡಿದ್ದಾರೆ.
ಕರಾಳ ಇತಿಹಾಸಕ್ಕೆ ಸಿಲುಕಿ ವಿನಾಶ!
ದೈವದ ಭಂಡಾರದ ಮನೆ ಗೋಚರಿಸಿದ ಸ್ಥಳದಲ್ಲಿ ನಿರ್ನಾಮಗೊಂಡ ಮನೆಯ ಇತಿಹಾಸವನ್ನು ಕೆದಕಿದಾಗ ಅದೊಂದು ಕರಾಳ ಇತಿಹಾಸಕ್ಕೆ ಸಿಲುಕಿ ಅಳಿದುಳಿದ ಒಬ್ಬ ವ್ಯಕ್ತಿ ಮನೆಯನ್ನು ತೊರೆದು ಹೋದ ವಿದ್ಯಮಾನ ಬೆಳಕಿಗೆ ಬಂದಿದೆ. ಮನೆಯ ಬೆಳಕಾಗಿದ್ದ ಮೂವರು ಮಕ್ಕಳು ಅಪಮೃತ್ಯುವಿಗೆ ಸಿಲುಕಿ ಮನೆ ಮಾತೆ ಮತಿವಿಲಕತೆಗೆ ತುತ್ತಾಗಿ ಮನೆಯಲ್ಲಿ ನೆಮ್ಮದಿಯೇ ಕಾಣದಿದ್ದಾಗ ಕಂಗೆಟ್ಟ ಆನಂದ ಶೆಟ್ಟಿ ಮನೆ, ಆಸ್ತಿ-ಪಾಸ್ತಿ ತೊರೆದು ದೂರದ ಕೆದಿಲಕ್ಕೆ ವಲಸೆ ಹೋಗಿದ್ದರು. ಅವರಿಗೆ ತನ್ನ ಗತಕಾಲದ ಚೌಕಿ ಮನೆಯಲ್ಲಿ ಭಂಡಾರದ ಮನೆಯೊಂದು ಇರುವುದು ತಿಳಿದಿತ್ತಾದರೂ ಅದು ಎಲ್ಲಿಯ ದೈವಸ್ಥಾನಕ್ಕೆ ಸೇರಿದೆ ಎನ್ನುವುದು ತಿಳಿದಿರಲಿಲ್ಲ. ಅದೇ ಭಂಡಾರದ ಮನೆಯಲ್ಲಿ ಇನ್ನೊಂದು ತೂಗು ಮಂಚವನ್ನು ಮಾಡಿಕೊಂಡು ತನ್ನ ಮನೆ ದೈವದ ಭಂಡಾರವನ್ನಿರಿಸಿ ಪೂಜಾ ಕಾರ್ಯವನ್ನೂ ಮಾಡುತ್ತಿದ್ದರು. ಯಾವಾಗ ಮನೆಯಲ್ಲಿ ಅಪಮೃತ್ಯುಗಳು ಸಂಭವಿಸತೊಡಗಿದವೋ ಅಲ್ಲಿಂದ ಅವರಿಗೆ ಮನೆಯ ಮೇಲೆಯೇ ನಿರಾಸಕ್ತಿ ಮೂಡಿ ಅಲ್ಲಿಂದ ನಿರ್ಗಮಿಸಿದ್ದರು. ಬಳಿಕದ ದಿನಗಳಲ್ಲಿ ಮನೆ ಪತನವನ್ನು ಕಂಡಿತ್ತು.
ಮತ್ತೆ ಬರಲೊಪ್ಪಿದವರು
ಇದೀಗ ಇಡೀ ಗ್ರಾಮದ ಹಿತಕ್ಕಾಗಿ ದೈವಸ್ಥಾನದ ಜೀಣೊìೕದ್ಧಾರ ನಡೆಸಲು ಊರಿನವರು ಸಮಿತಿಯೊಂದನ್ನು ರಚಿಸಿದ್ದಾರೆ. ದೈವಸ್ಥಾನ ಹಾಗೂ ಭಂಡಾರದ ಮನೆಯನ್ನೂ ಪುನರ್ನಿರ್ಮಿಸಲು ಸಂಕಲ್ಪಿಸಿದ್ದಾರೆ. ಇದೇ ವೇಳೆ ಭಂಡಾರದ ಮನೆಯ ನಿರ್ವಹಣೆಗಾಗಿ ಜನ ವಾಸ್ತವ್ಯದ ಮನೆಯನ್ನೂ ನಿರ್ಮಿಸಲು ತೀರ್ಮಾನಿಸಲಾಗಿದೆ. ಮನೆ ತೊರೆದಿದ್ದ ಆನಂದ ಶೆಟ್ಟಿಯವರು ಪುನರ್ನಿರ್ಮಿತ ಮನೆಗೆ ಹಿಂತಿರುಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರು ದೈವ
ಪ್ರಶ್ನಾರೂಪದಲ್ಲಿ ತಿಳಿಸಿದಂತೆ ನಿರ್ದಿಷ್ಟ ಪ್ರದೇಶದ ಕಾಡಿನಲ್ಲಿ ಶೋಧನೆ ನಡೆಸಿದಾಗ ಮರ ಗಿಡಗಳು ಬೆಳೆದಿರುವ ಸ್ಥಿತಿಯಲ್ಲಿ ದೈವಸ್ಥಾನದ ಕುರುಹುಗಳು ಕಂಡುಬಂದಿದ್ದವು. ಪಿಲಿಚಾಮುಂಡಿ, ಕೊರತ್ತಿ ಹಾಗೂ ಉಳ್ಳಾಕ್ಲು ದೈವದ ಮೂರೂ ಗುಡಿಗಳು ಕಾಲಾಂತರದಲ್ಲಿ ಶಿಥಿಲಗೊಂಡು ಗುಡಿಯ ಪಂಚಾಂಗ ಮಾತ್ರ ಮರಗಿಡಗಳ ಮಧ್ಯೆ ಗೋಚರಿಸುತ್ತಿತ್ತು.
ಮೂರ್ತಿಗಳು ಪತ್ತೆ
ಸ್ಥಳಪ್ರಶ್ನೆಯಲ್ಲಿ ಗೋಚರಿಸಿದಂತೆಯೇ ಪೆರ್ನೆ ಗ್ರಾಮದ ಅತ್ತಜಾಲುವಿನಲ್ಲಿ ನಾಮಾವಶೇಷಗೊಂಡಿದ್ದ ಮನೆಯೊಂದರ ಪ್ರದೇಶದಲ್ಲಿ ಉತ್ಖನನ ಮಾಡಿದಾಗ ಮೂರು ದೈವಗಳ ಮೊಗ (ಮೂರ್ತಿಗಳು) ದೀಪ, ಗಂಟೆ, ಇತರ ದೈವಾರಾಧನೆಯ ಪರಿಕರಗಳು ಲಭಿಸಿವೆ