ಉಪ್ಪಿನಂಗಡಿ : ಗಯಾಪದ ಕ್ಷೇತ್ರವಾದ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲದಲ್ಲಿ ಮಘಾ ಮಾಸದಲ್ಲಿ ಮೂರು ಬಾರಿ ಶ್ರೀ ದೇವರ ಬ್ರಹ್ಮರಥವನ್ನು ಎಳೆಯುವ ವಿಶಿಷ್ಟ ಧಾರ್ಮಿಕ ಸಂಪ್ರದಾಯವಿರುವ ವಾರ್ಷಿಕ ಮಖೆಕೂಟ ಹಾಗೂ ಶ್ರೀ ಮಹಾಕಾಳಿ ಅಮ್ಮನವರ ನೇಮ- ದೊಂಪದ ಬಲಿ ನೇಮ ಫೆ. 15ರಿಂದ ಆರಂಭಗೊಂಡು, ಮಾ. 22ರ ವರೆಗೆ ನಡೆಯಲಿದೆ.
ಫೆ. 15ರಂದು ಶ್ರೀ ಸಹಸ್ರಲಿಂಗೇಶ್ವರ ದೇವರ ಅಷ್ಟಮಿ ಮಖೆಕೂಟ, ಉತ್ಸವ ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಫೆ. 16ರಂದು ಬೆಳಗ್ಗೆ ನೇತ್ರಾವತಿ-ಕುಮಾರಾಧಾರಾ ಸಂಗಮ ಕ್ಷೇತ್ರದಲ್ಲಿ ಮಖೆಸ್ನಾನ, ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ ಸಮರ್ಪಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಫೆ. 19ರಂದು ಕಡವಿನ ಬಾಗಿಲು ಶ್ರೀ ರಾಜನ್ ದೈವ ಕಲ್ಕುಡ ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ, ಗಣಪತಿ ಹವನ, ಸಾನ್ನಿಧ್ಯ ಕಲಶ, ತಂಬಿಲ ಸೇವೆ ನಡೆಯಲಿದೆ.
ಅಮ್ಮನವರ ಮೆಚ್ಚಿ ದೈವ ದೇವ ಆರಾಧನೆಗೊಳ್ಳುತ್ತಿರುವ ಗಯಾಪದ ಕ್ಷೇತ್ರ ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿಯು ಮಾ. 17ರಂದು ರಾತ್ರಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾ. 17ರಂದು ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಶ್ರೀ ಮಹಾಕಾಳಿ ದೇವಿಗೆ ಸೀಮೆಯ ಭಕ್ತರಿಂದ ಕುಂಕುಮಾರ್ಚನೆ ಸೇವೆ ನಡೆಯಲಿದೆ. ಮೆಚ್ಚಿಯ ಅಂಗವಾಗಿ ದೇವಾಲಯದಲ್ಲಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಮಾ. 22ರಂದು ರಾತ್ರಿ ಶ್ರೀ ದೇವಾಲಯದ ಮುಂಭಾಗದಲ್ಲಿರುವ ಸತ್ಯದ ಮಜಲಿನಲ್ಲಿ ಶ್ರೀ ರಾಜನ್ ದೈವ ಕಲ್ಕುಡ ಸಹಿತ ಇತರ ಕ್ಷೇತ್ರ ದೈವಗಳ ದೊಂಪದ ಬಲಿ ನೇಮ ನಡೆಯಲಿದೆ ಎಂದು ಶ್ರೀ ದೇವಾಲಯದ ಆಡಳಿತಾಧಿಕಾರಿ ರಾಹುಲ್ ಶಿಂಧೆ ಮತ್ತು ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹುಣ್ಣಿಮೆ ಮಖೆಕೂಟ ಮಾ. 7ರಂದು ಶ್ರೀ ದೇವಾಲಯದಲ್ಲಿ ಧ್ವಜಾರೋಹಣಗೊಂಡು ಮಾ. 13ರಂದು ಅವಭೃಥದ ಅಂಗವಾಗಿ ಶ್ರೀ ದೇವರ ಆರಾಟ ಉತ್ಸವ, ಧ್ವಜಾರೋಹಣ ನಡೆಯಲಿದೆ. ಮಾ. 8ರಂದು ಹುಣ್ಣಿಮೆ ಮಖೆಕೂಟ, ಉತ್ಸವ, ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಮಾ.9ರಂದು ಬೆಳಗ್ಗೆ ಮಖೆ ತೀರ್ಥಸ್ನಾನ, ದರ್ಶನ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ, ಅನ್ನಸಂತರ್ಪಣೆ ನಡೆಯಲಿದೆ. ಈ ಮೂಲಕ ಈ ವರ್ಷದ ಮೂರೂ ಮಖೆ ಕೂಟಗಳು ಮುಕ್ತಾಯಗೊಳ್ಳಲಿವೆ.
ಶಿವರಾತ್ರಿ ಮಖೆಕೂಟ
ಫೆ. 21ರಂದು ಶಿವರಾತ್ರಿ ಮಖೆಕೂಟ ನಡೆಯಲಿದೆ. ಅಂದು ಬೆಳಗ್ಗೆ ಮತ್ತು ಸಂಜೆ ನೇತ್ರಾವತಿ ನದೀಪಾತ್ರದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವರ ಉದ್ಭವ ಲಿಂಗಕ್ಕೆ ಭಕ್ತರಿಂದ ನೇರ ಅಭಿಷೇಕ ಸೇವೆ, ಅರ್ಘ್ಯ ಸಮರ್ಪಣೆ ನಡೆಯಲಿದೆ. ಫೆ. 22ರಂದು ಬೆಳಗ್ಗೆ ಮಖೆ ತೀರ್ಥಸ್ನಾನ, ಶ್ರೀ ದೇವರ ಬ್ರಹ್ಮರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ, ಅನ್ನ ಸಂತರ್ಪಣೆ ನಡೆಯಲಿದೆ. ಫೆ. 25ರಂದು ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಗಣಪತಿ ಹವನ, ಶತರುದ್ರಾಭಿಷೇಕ, ಚಂಡಿಕಾ ಹೋಮ, ಅನ್ನಸಂತರ್ಪಣೆ ನಡೆಯಲಿದೆ.