ಉಪ್ಪಿನಂಗಡಿ : ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಎರಡು ಉತ್ಸವಗಳು ನಡೆಯಲಿವೆ. 2011ರಲ್ಲಿ ದೇವಾಲಯವು ನವೀಕರಣಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದ ಬಳಿಕ ಜ. 14 ಹಾಗೂ 14ರಂದು ಬೆಳಗ್ಗೆ ದೇವರ ಬಲಿ ಉತ್ಸವ ನಡೆಯುತ್ತದೆ.
ಮಕರ ಸಂಕ್ರಾಂತಿಯಂದು ರಾತ್ರಿ ದೇವರು ಬಲಿ ಹೊರಟು ದೇವಾಲಯದ ಹೊರಾಂಗಣದಲ್ಲಿ ಸರ್ವಾಲಂಕೃತ ಪುಷ್ಪಕನ್ನಡಿಯಲ್ಲಿ ದೇವರ ಉತ್ಸವ ಮೂರ್ತಿಯೊಂದಿಗೆ ಉತ್ಸವ ಬಲಿ ನಡೆಯುತ್ತದೆ. ವಸಂತ ಕಟ್ಟೆಯಲ್ಲಿ ದೇವರಿಗೆ ಕಟ್ಟೆ ಪೂಜೆ ನಡೆಯುತ್ತದೆ. ವಾರ್ಷಿಕ ಜಾತ್ರೆ ಮತ್ತು ಮಖೆ ಜಾತ್ರೆಯನ್ನು ಹೊರತು ಪಡಿಸಿ ಮಕರ ಸಂಕ್ರಾಂತಿಯ ಉತ್ಸವದಲ್ಲಿ ಮಾತ್ರ ವಸಂತೆ ಕಟ್ಟೆ ಪೂಜೆಯನ್ನು ನೆರವೇರಿಸಲಾಗುತ್ತದೆ.
ಬಟ್ಟಲು ಕಾಣಿಕೆ
ಉಪ್ಪಿನಂಗಡಿ ಸೀಮೆಯ ಸಂಪ್ರದಾಯ ದಂತೆ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ವರ್ಷದಲ್ಲಿ ನಾಲ್ಕು ಬಾರಿ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ. ಮಕರ ಸಂಕ್ರಾಂತಿಯ ಮರುದಿನ (ಜ. 15) ಬೆಳಗ್ಗೆ ಶ್ರೀ ದೇವರ ಉತ್ಸವ, ದರ್ಶನ ಬಲಿ ಸೇವೆ ಬಳಿಕ ಭಕ್ತರಿಂದ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ. ಉಳಿದಂತೆ ಒಂದನೇ ಮಖೆಕೂಟ, ಎರಡನೇ ಮಖೆಕೂಟ, ಮೂರನೇ ಮಖೆಕೂಟದ ಸಂದರ್ಭ ತೀರ್ಥಸ್ಥಾನದ ಬಳಿಕ ದೇವಾಲಯದ ಹೊರಾಂಗಣದಲ್ಲಿ ನಡೆಯುವ ಉತ್ಸವದ ಸಂದರ್ಭ ದರ್ಶನ ಬಲಿ ಸೇವೆಯ ಬಳಿಕ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ.
ಧನುಪೂಜೆ ಸಮಾಪನ
ಧನುರ್ಮಾಸದ ಪ್ರಾತಃಕಾಲದಲ್ಲಿ ಶ್ರೀ ಸಹಸ್ರ ಲಿಂಗೇಶ್ವರ ದೇವರಿಗೆ ಒಂದು ತಿಂಗಳ ಕಾಲ ನಡೆಯುವ ಧನುಪೂಜೆಯ ಸಮಾಪನ ಮಕರ ಸಂಕ್ರಾಂತಿಯಂದು ಪ್ರಾತಃಕಾಲ ನಡೆಯುತ್ತದೆ. ಈ ಬಾರಿ ಧನುಪೂಜೆ ಸೋಮವಾರ ಆರಂಭಗೊಂಡು ಸೋಮವಾರವೇ ಸಮಾಪನವಾಗುತ್ತಿರುವುದು ವಿಶೇಷ.
ವಾರ್ಷಿಕ ಜಾತ್ರಾ ಸಿದ್ಧತೆ
ದೇವಾಲಯದಲ್ಲಿ ಫೆಬ್ರವರಿ ತಿಂಗಳಲ್ಲಿ ಮಖೆಜಾತ್ರೆ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಮಘಾ ಮಾಸದ ಸಂದರ್ಭ ಮೂರು ಬಾರಿ ಇಲ್ಲಿ ಮಖೆಜಾತ್ರೆ ನಡೆಯುತ್ತದೆ. ಅಷ್ಟಮಿ ಮಖೆಕೂಟ, ಹುಣ್ಣಿಮೆ ಮಖೆಕೂಟ ಮತ್ತು ಮಹಾಶಿವರಾತ್ರಿಯ ಮಖೆಕೂಟಗಳು ನಡೆಯುತ್ತವೆ. ಶ್ರೀ ದೇವಾಲಯದಲ್ಲಿ ಮೂರು ಬಾರಿ ಶ್ರೀ ದೇವರ ಬ್ರಹ್ಮ ರಥೋತ್ಸವ ನಡೆಯುವುದು ವಾಡಿಕೆ. ಮಹಾಶಿವರಾತ್ರಿಯ ಮರುದಿನ ಹಗಲು ರಥೋತ್ಸವ ನಡೆಯುತ್ತದೆ. ಉಳಿದಂತೆ ಅಷ್ಟಮಿ ಮತ್ತು ಹುಣ್ಣಿಮೆ ಮಖೆಕೂಟಗಳಲ್ಲಿ ರಾತ್ರಿ ಬ್ರಹ್ಮರಥೋತ್ಸವ ನಡೆಯುತ್ತದೆ.