Home ಧಾರ್ಮಿಕ ಕಾರ್ಯಕ್ರಮ ಉಂಡಾರು : ಶ್ರೀ ವಿಷ್ಣುಮೂರ್ತಿ ದೇವರಿಗೆ ಮಹಾಮಜ್ಜನ, ಬ್ರಹ್ಮಕಲಶೋತ್ಸವ

ಉಂಡಾರು : ಶ್ರೀ ವಿಷ್ಣುಮೂರ್ತಿ ದೇವರಿಗೆ ಮಹಾಮಜ್ಜನ, ಬ್ರಹ್ಮಕಲಶೋತ್ಸವ

2149
0
SHARE

ಕಾಪು:ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸುಮಾರು 6 ಕೋ. ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್‌ ನಿರ್ಮಾಣಗೊಂಡಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.

ಉಂಡಾರು ದೇಗುಲದ ಆಡಳಿತದಾರ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇ| ಮೂ| ಪುತ್ತೂರು ಮಧುಸೂದನ ತಂತ್ರಿ, ಅವಧಾನಿ ಸುಬ್ರಹ್ಮಣ್ಯ ಭಟ್‌ ಅವರ ನೇತೃತ್ವದಲ್ಲಿ, ಸೋದೆ ಮಠದ ದಿವಾನ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಗಣಯಾಗ, ಬೃಹತೀ ಸಹಸ್ರನಾಮ ಹೋಮ, ವಿಶೇಷ ಶಾಂತಿ ಹೋಮ, ಶ್ರೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಕಲಶಾಭಿಷೇಕ ಪ್ರಾರಂಭಗೊಂಡು ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ನ್ಯಾಸಪೂಜೆ, ಮಹಾಪೂಜೆ ನಡೆಯಿತು. ಎ. 18ರಿಂದ ಪ್ರಾರಂಭಗೊಂಡಿರುವ ಶಿಲಾಮಯ ದೇಗುಲ ಸಮರ್ಪಣೆ, ಬಿಂಬ ಪ್ರತಿಷ್ಟಾಪನೆ, ಬ್ರಹ್ಮಕಲಶ ಮಹೋತ್ಸವ ನಡೆಯಿತು. ಭಕ್ತರಿಗೆ ಯಾವುದೇ ರೀತಿ ಅನನುಕೂಲಗಳಾಗದಂತೆ ಸ್ವಯಂ ಸೇವಕರ ಮೂಲಕವಾಗಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದ್ದು, ಸ್ವಯಂ ಸೇವಕರ ಕಾರ್ಯ ನಿರ್ವಹಣೆ ಎಲ್ಲರ ಗಮನ ಸೆಳೆದಿದೆ.

ವಿಷ್ಣು ದೇವರ ವಾಹನ ಗರುಡ. ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಧ್ವಜಾರೋಹಣ, ರಥೋತ್ಸವದ ಸಂದರ್ಭ ಗರುಡಾಗಮನ ವಿಶೇಷ ವಾಗಿದೆ. ಬ್ರಹ್ಮ ಕಲಶೋತ್ಸವದ ಸಂದರ್ಭ ಆಕಾಶ ದೆತ್ತರದಲ್ಲಿ ಗರುಡ ಪ್ರದಕ್ಷಿಣೆ ಹಾಕಿರುವುದು ಭಕ್ತರಲ್ಲಿ ನವೋಲ್ಲಾಸ ಮೂಡಿಸಿದೆ. ಉಂಡಾರು ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಎ.24ರಂದು ಬೆಳಗ್ಗೆ 11.30ಕ್ಕೆ ಮನ್ಮಹಾರಥೋತ್ಸವ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ವಿಷ್ಣುಂ ವಂದೇ ಜಗತ್ಸರ್ವಂ ಹರಿಕಥಾ ಸತ್ಸಂಗ ಗೋಷ್ಟಿ, ರಾತ್ರಿ ಮಹಾರಥೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here