Home ಧಾರ್ಮಿಕ ಸುದ್ದಿ ಅಂಬಾದೇವಿಗೆ ಉಘೇ..ಉಘೇ

ಅಂಬಾದೇವಿಗೆ ಉಘೇ..ಉಘೇ

1723
0
SHARE

ಗೊರೇಬಾಳ: ಹೈದರಾಬಾದ್‌ ಕರ್ನಾಟಕ ಭಾಗದ ಸುಪ್ರಸಿದ್ದ ಯಾತ್ರಾ ಸ್ಥಳ, ಸಿದ್ದ ಪರ್ವತ, ತಾಲೂಕಿನ ಸೋಮಲಾಪುರ ಗ್ರಾಮದ ಅಂಬಾಮಠದ ಅಂಬಾದೇವಿ ಜಾತ್ರೆ ಸೋಮವಾರ ಸಂಜೆ ಲಕ್ಷಾಂತರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಂದಿಕೋಲು ಕುಣಿತ, ಡೊಳ್ಳು ಕುಣಿತ, ಭಜನಾ, ಪುರೋಹಿತರ ಮಂತ್ರ ಘೋಷಗಳೊಂದಿಗೆ ಲಕ್ಷಾಂತರ ಭಕ್ತರ ಮಧ್ಯೆ ರಥೋತ್ಸವ ನಡೆಯಿತು. ತನ್ನಿಮಿತ್ತ ಬೆಳಗ್ಗೆ ಅಂಬಾದೇವಿಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆದವು.

ಕಳಸಕ್ಕೆ ಹಾಗೂ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು. ಸಹಾಯಕ ಆಯುಕ್ತ ಎಂ.ಪಿ.ಮಾರುತಿ, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ತಹಶೀಲ್ದಾರ್‌ ಶಿವಾನಂದ ಸಾಗರ, ತಾಪಂ ಸದಸ್ಯರಾದ ಗೋವಿಂದರಾಜ ಸೋಮಲಾಪುರ, ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಗೊಬ್ಬರಕಲ್‌ ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

ಕಾಡದ ಟ್ರಾಫಿಕ್‌ ಸಮಸ್ಯೆ: ಪ್ರತಿ ವರ್ಷ ಜಾತ್ರಾ ಸಂದರ್ಭದಲ್ಲಿ ಟ್ರಾಫಿಕ್‌ ಜಾಮ್‌ ತೊಂದರೆ ಅನುಭವಿಸುತ್ತಿದ್ದ ಭಕ್ತರಿಗೆ ಈ ಬಾರಿ ಮಾತ್ರ ಟ್ರಾಫಿಕ್‌ ಸಮಸ್ಯೆ ಕಾಡಲಿಲ್ಲ. ಎಲ್ಲ ವಾಹನಗಳನ್ನು ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಟ್ರಾಫಿಕ್‌ ಜಾಮ್‌ ಆಗದಂತೆ ಪೊಲೀಸರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಕ್ಕೆ ಭಕ್ತರಿಗೆ ಮೆಚ್ಚುಗೆ ವ್ಯಕ್ತವಾಯಿತು.

ವಿಶೇಷ ವ್ಯವಸ್ಥೆ: ಜಾತ್ರೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸಿಂಧನೂರು, ಸಿರಗುಪ್ಪಾ, ಗಂಗಾವತಿ ಘಟಕಗಳಿಂದ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದರು.

LEAVE A REPLY

Please enter your comment!
Please enter your name here