Home ನಂಬಿಕೆ ಸುತ್ತಮುತ್ತ ಯುಗಾದಿ ಎಂಬ ಹೊಸ ವರ್ಷದ ಪರ್ವಕಾಲ..

ಯುಗಾದಿ ಎಂಬ ಹೊಸ ವರ್ಷದ ಪರ್ವಕಾಲ..

2658
0
SHARE
ಈ ಜಗತ್ತಿನಲ್ಲಿ ಯಾವುದೇ ಸಂಗತಿಗಳು ಬದಲಾಗದೇ ಸ್ಥಿರವಾಗಿಯೇ ಉಳಿದರೂ ಕಾಲ ಮಾತ್ರ ನಿಲ್ಲುವುದಿಲ್ಲ. ಅದು ನಿಲ್ಲುವ ಕುದುರೆಯೂ ಅಲ್ಲ; ನಿಲ್ಲುವ ನಿಯಮಕ್ಕೆ ಅಂಟಿಕೊಂಡಿಯೂ ಇಲ್ಲ. ಪ್ರತಿ ನಿಮಿಷವೂ ನಮ್ಮ ಲೆಕ್ಕಕ್ಕೆ ಸಿಗದೆ ಕಳೆದುಹೋಗುತ್ತಲೇ ಇರುತ್ತದೆ. ಸೂರ್ಯೋದಯ ಮುಂಜಾನೆ ಮಧ್ಯಾಹ್ನ ಸಂಜೆ ಸೂರ್ಯಾಸ್ತ ರಾತ್ರಿ ಮತ್ತೆ ಸೂರ್ಯೋದಯ  ಇವುಗಳು ನಿರಂತರವಾಗಿವೆ. ನಮಗೆ ಕಾಲಗಣನೆಯ ಅನುಕೂಲತೆಗಾಗಿ ದಿನ ವಾರ ತಿಂಗಳು ವರ್ಷ ಅಥವಾ ಸಂವತ್ಸರವೆಂದು ಹೆಸರಿಸಿ, ಹನ್ನೆರಡು ತಿಂಗಳಿಗೊಂದರಂತೆ ಅರವತ್ತು ಸಂವತ್ಸರಗಳನ್ನು ಪೂರ್ವಜರು ಲೆಕ್ಕಹಾಕಿ ವಿಭಾಗಿಸಿಟ್ಟಿದ್ದಾರೆ. ಪ್ರಭವದಿಂದ ತೊಡಗಿ ೬೦ನೆಯ ಸಂವತ್ಸರವಾದ ಕ್ಷಯ ಸಂವತ್ಸರದ ವರೆಗೆ ನಾವು ಕಾಲಿರಿಸುತ್ತ ಹೋಗುವ ಘಳಿಗೆಯೇ ಯುಗಾದಿ. ಅಂದರೆ ಹೊಸವರ್ಷದ ಆದಿ ಅಥವಾ ಆರಂಭ.
ಚಾಂದ್ರಮಾನ ಹಾಗೂ ಸೌರಮಾನ ಎಂಬೆರಡು ವಿಧಗಳಿಂದ ಗುರುತಿಸಲ್ಪಟ್ಟ ಯುಗಾದಿ ಹಬ್ಬವು ಎರಡು ಕಾಲಮಾನಗಳಲ್ಲಿ ಆಚರಿಸಲ್ಪಡುತ್ತದೆ. ಚೈತ್ರಾದಿಯಾಗಿ ಫಾಲ್ಗುಣಮಾಸಾಂತ್ಯಕ್ಕೆ ಕೊನೆಗೊಂಡು ಮತ್ತೆ ಚೈತ್ರ ಮಾಸದ ಆರಂಭ ಚಾಂದ್ರಮಾನ ಯುಗಾದಿ. ಮೇಷ ತಿಂಗಳಿನಿಂದ ಮೊದಲ್ಗೊಂಡು ಮೀನ ತಿಂಗಳಿನಲ್ಲಿ ಅಂತ್ಯವಾಗಿ ಮತ್ತೆ ಮೇಷ ತಿಂಗಳಿನ ಆರಂಭವೇ ಸೌರಮಾನ. ಹೊಸ ಶಕವರ್ಷದ ಆರಂಭ. ಹಿಂದುಗಳಿಗೆ ವರ್ಷಾರಂಭವೇ ಹಬ್ಬ. ಯುಗಾದಿ ಎಂಬುದು ಎಲ್ಲದಿನದಂತಲ್ಲ. ಅದೊಂದು ಸಂಭ್ರಮದ ಕ್ಷಣವೂ ಹೌದು; ಪ್ರಕೃತಿಯ ಹೊಸ ಹುಟ್ಟೂ ಹೌದು. ವಸಂತ ಮಾಸದ ಆದಿಯಲ್ಲಿ ಹಸಿರುಗಳು ಚಿಗುರಲಾರಂಭಿಸುತ್ತವೆ. ಪಕ್ಷಿ ಪ್ರಾಣಿಗಳೂ ಇದರ ಆನಂದವನ್ನನುಭವಿಸುತ್ತವೆ. ಮನುಜನಿಗೆ ಹೊಸ ಯುಗವೊಂದರಲ್ಲಿ ಬದುಕಲು ದೇವರು ಅವಕಾಶ ಮಾಡಿಕೊಡುವ ಕಾಲದ ಮೊತ್ತಮೊದಲ ದಿನವೇ ಈ ಯುಗಾದಿ.
ಯುಗಾದಿಯಂದು ಪಂಚಾಗಪೂಜೆ, ಪಂಚಾಂಗಪಠಣ, ವರ್ಷಭವಿಷ್ಯ, ರಾಶಿಭವಿಷ್ಯಗಳನ್ನು ಓದಿ ದೇವಸನ್ನಿಧಿಯಲ್ಲಿ ಈ ಸವಂತ್ಸರವು ಸುಖಕರವಾಗಿರಲೆಂದು ಕೇಳಿಕೊಳ್ಳುವುದು ಹಬ್ಬವನ್ನಾಚರಿಸುವ ಬಗೆಗಳಲ್ಲೊಂದು. ಅಲ್ಲದೆ ಸುಖ ದುಖ ಮಿಶ್ರಿತವಾದ ಜೀವನದಲ್ಲಿ ಈ ಎರಡೂ ಸಮಾನ ರೀತಿಯಲ್ಲಿರಲಿ ಎಂಬ ಆಕಾಂಕ್ಷೆಯಿಂದ ಬೇವು ಬೆಲ್ಲವನ್ನು ಹಂಚಿಕೊಂಡು ಸಂಭ್ರಮವನ್ನಾಚರಿಸುತ್ತೇವೆ. ಬೇವು ಬೆಲ್ಲಗಳಲ್ಲಿರುವ ಔಷಧೀಯಗುಣಗಳಿಂದ ನಮ್ಮ ಆರೋಗ್ಯವೂ ವೃದ್ದಿಸಲಿ ಎಂಬುದು ಒಳಾರ್ಥ.
೩೧ನೆಯ ಸಂವತ್ಸರ ಹೇಮಲಂಬಿ ಕಳೆದು ವಿಲಂಬಿಗೆ ಪಾದಾರ್ಪಣೆ ಮಾಡುವ ಶುಭಸಮಯ. ಶಕವರ್ಷ ೧೯೪೧ ವಿಲಂಬಿನಾಮ ಸಂವತ್ಸರವು ಸನಿಹದಲ್ಲಿದೆ. ಚಾಂದ್ರಮಾನ ಯುಗಾದಿ ನಾಳೆ (ಮಾರ್ಚ್ ೧೮ರಂದು) ಆಚರಿಸಲ್ಪಟ್ಟರೆ ಎಪ್ರಿಲ್ ೧೪ರಂದು ಸೌರಮಾನ ಯುಗಾದಿಯ ಆಚರಣೆ. ಕಾಲಪುರುಷ ತಿರುಗುತ್ತಲೇ ಇರುತ್ತಾನೆ. ಹೊಸದಿನವ ತರುತ್ತಲೇ ಇರುತ್ತಾನೆ. ಪ್ರತಿದಿನವನ್ನೂ ಆನಂದವಾಗಿಸಿಕೊಳ್ಳುವ ಶಕ್ತಿಯನ್ನು ಪ್ರತಿಯೊಬ್ಬನಿಗೂ ಒಂದೊಂದು ರೀತಿಯಲ್ಲಿ ದೇವರು ಕರುಣಿಸಿದ್ದಾನೆ. ‘ಎಲ್ಲಾದಿನಗಳಂತೆ ಯುಗಾದಿಯೂ ಒಂದು, ಅದರಲ್ಲಿ ಹಬ್ಬವೆಂದು ಆಚರಿಸುವುದರಲ್ಲೇನಿದೆ?’ ಎಂಬ ಪ್ರಶ್ನೆ ಇದಿರಾಗದಿರದು.
ಆದರೆ ಯುಗಾದಿಯನ್ನು ಸಂಭ್ರಮಿಸುವುಕ್ಕೂ ಕಾರಣವಿದೆ. ಯುಗಾದಿ ಬಂತೆಂದರೆ ಆ ದೇವರ ಕೃಪೆಯಿಂದ ಸೌರಮಂಡಲ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂತಲೇ ಅರ್ಥ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ, ತನ್ನ ಸುತ್ತ ತಾನೇ ಸುತ್ತುತ್ತಿದೆ, ಎಲ್ಲ ಗ್ರಹಗಳು ಹೊಂದಿಕೊಂಡು ಅವಗಳ ಪರಿಧಿಯಲ್ಲಿಯೇ ಇವೆ. ಸೂರ್ಯೋದಯ ಸೂರ್ಯಾಸ್ತದ ಅನುಭವ ಜೀವಂತವಾಗಿದೆ. ಭೋರ್ಗರೆವ ಕಡಲು ಉಕ್ಕದೆ ಸೊಕ್ಕದೆ ಭೂಮಿಯನ್ನಾವರಿಸಿದೆ. ಹೊಳೆ ನದಿಗಳು ಹರಿಯುತ್ತಲಿವೆ. ಹಸಿರಸಿರಿ ಮೆಯ್ದೆಳೆಯುತ್ತಿದೆ. ಮಳೆ ಬೆಳೆಗಳಾಗಿವೆ. ಹಸಿವು ನೀಗಿದೆ. ಜನನ ಮರಣಗಳು ನಿರಂತರವಾಗಿವೆ. ಹೊಸಘಳಿಗೆ ಹಾದುಹೋಗುತ್ತಲೇ ಇದೆ. ಇವೆಲ್ಲವೂ ನಿತ್ಯದ ಸಂಗತಿಗಳೇ ಆದರೂ ಅದಕ್ಕೆ ಕಾರಣವಾದ ಕಾಲನನ್ನು ಸ್ಮರಿಸಲು ನಮಗೆ ಸಮಯವಿಲ್ಲ. ನಮ್ಮ ಜನ್ಮದಿನದ ಸಂಭ್ರಮವನ್ನು ನಾವು ಹುಟ್ಟಿದ ದಿನಾಂಕದಂದು ಆಚರಿಸಿದಂತೆಯೇ ಇದು ಕೂಡ. ಎಲ್ಲ ಆಗುಹೋಗುಗಳನ್ನು ಮಂಥನಮಾಡಿ ಆರಾಧಿಸಲು ಸಂಭ್ರಮಿಸಲು ಇರುವ ಸಕಾಲವೇ ಯುಗಾದಿ.
ಈ ವರುಷ ಎಲ್ಲರ ಬಾಳಲ್ಲಿ ಸುಖ ಸಂಮೃದ್ಧಿ ತುಂಬಲಿ. ವಿಲಂಬಿನಾಮ ಆನಂದದಾಯಕವಾಗಿರಲಿ. ಅಣುವಿನಿಂದ ಹಿಡಿದು ಸಕಲ ಚರಾಚರ ಜೀವಿಗಳಿಗೆ, ಊರು ಕೇರಿ ರಾಜ್ಯ ದೇಶ ವಿಶ್ವಕ್ಕೆ ಕಾಲನು ಸಂತಸವನ್ನು ಹರಸಿ ಸಂತೈಸಲಿ. ಕಾಲಾಯ ತಸ್ಮೈ ನಮಃ.
ಯುಗಾದಿಯ ಹಾರೈಕೆ:ಪ್ರಾರ್ಥನೆ ಮತ್ತೆ ಹಾರೈಕೆಗಳು ಧನಾತ್ಮಕವಾಗಿರಲಿ; ಫಲ ನೀಡಲಿ. ಬೇವು ಬೆಲ್ಲದ ನಂಟು ಭಾವ ಬಂಧವ ಬೆಸೆಯಲಿ.
               “ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ”
  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here