Home ಧಾರ್ಮಿಕ ಸುದ್ದಿ ಕರಾವಳಿಯ ದೇಗುಲಗಳು ಆದಿಮ, ವೈದಿಕ ಸಂಸ್ಕೃತಿಗಳ ಸಮಾಗಮದ ಕ್ಷೇತ್ರ

ಕರಾವಳಿಯ ದೇಗುಲಗಳು ಆದಿಮ, ವೈದಿಕ ಸಂಸ್ಕೃತಿಗಳ ಸಮಾಗಮದ ಕ್ಷೇತ್ರ

1256
0
SHARE

ಕಟಪಾಡಿ: ದೇವಾಲಯವು ಸೌಹಾರ್ದದ ಸಂಕೇತವಾಗಿದೆ. ಕರಾವಳಿಯ ದೇವಾಲಯಗಳು ಆದಿಮ ಮತ್ತು ವೈದಿಕ ಸಂಸ್ಕೃತಿಗಳ ಸುಗಮ ಸಮಾಗಮದ ಕ್ಷೇತ್ರಗಳಾಗಿವೆ. ಮೂಲತಃ ಇದ್ದ ಆಚಾರ-ವಿಚಾರ-ನಂಬಿಕೆಗಳನ್ನು ಸ್ವೀಕರಿಸಿ ವೈದಿಕವು ಇಲ್ಲಿ ನೆಲೆಯಾಗುತ್ತದೆ. ಇದಕ್ಕೆ ಕೇದಾರ್‌ ಹರಿಹರ ಕ್ಷೇತ್ರ ಉದಾಹರಣೆಯಾಗಿದೆ ಎಂದು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಹೇಳಿದರು.

ಅವರು ಬುಧವಾರ ಉದ್ಯಾವರ ಕೇದಾರ್‌ ಶ್ರೀ ಬ್ರಹ್ಮೇಶ್ವರಮಹಾಲಿಂಗೇಶ್ವರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪಾನ್ಯಾಸ ನೀಡುತ್ತಾ ಮಾತನಾಡಿದರು.

ಆದಿಮದ ಬೆರ್ಮೆರ್‌ ಪ್ರಧಾನ ವಾದ ಪೂಜಾಸ್ಥಳದಲ್ಲಿ ವೈದಿಕದ ಮಹಾಲಿಂಗೇಶ್ವರ ಸ್ಥಾಪನೆಯಾದಾಗ ಬೆರ್ಮೆರ್‌ ಬ್ರಹ್ಮೇಶ್ವರನಾಗಿ ಮುಂದೆ ಮಹಾಲಿಂಗೇಶ್ವರನಲ್ಲಿ ಸನ್ನಿಹಿತವಾಗುವ ಸಹಜ ಪ್ರಕ್ರಿಯೆಗೆ ಕೇದಾರ್‌ ಕ್ಷೇತ್ರ ಸಾಕ್ಷಿ. ಇಂತಹ ಸ್ಥಿತ್ಯಂತರಗಳನ್ನು ಜಿಲ್ಲೆಗಳಲ್ಲಿ ಕಾಣಬಹುದು. ತುಳುನಾಡಿನ ಸ್ಥಳನಾಮಗಳು ತುಳುವಿನಲ್ಲೇ ಅರ್ಥೈಸಿಕೊಳ್ಳಬೇಕು. ಹಾಗೆ ಕೇದಾರ್‌ ಎಂದರೆ ಜಲಸಂಬಂಧಿಯಾದ ಜವುಗು ಪ್ರದೇಶವೇ ಆಗಿದೆ ಎಂದು ಸ್ಥಳ ಪುರಾಣದ ಬಗ್ಗೆ ವಿವರಣೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌ ಮಾತನಾಡಿ, ಸಂಘಟಿತ ಪ್ರಯತ್ನದಿಂದ ಕೇದಾರ್‌ ಕ್ಷೇತ್ರದಲ್ಲಿ ದೇಗುಲಗಳು ಸಾಕಾರಗೊಂಡಿವೆ. ಶಾಸಕನಾಗಿ ಇತಿಮಿತಿಯೊಳಗೆ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ಭರವಸೆಯನ್ನು ನೀಡಿದರು.

ಆಶೀರ್ವಚನ ನೀಡಿದ ಜ್ಯೋತಿರ್ವಿದ್ವಾನ್‌ ಕುಮಾರ ಗುರುತಂತ್ರಿ, ಶಾಸ್ತ್ರದ ತಳಹದಿಯಲ್ಲಿ ದೇವರನ್ನು ನಂಬಿದಾಗ ಶ್ರೇಯಸ್ಸು ಲಭಿಸುತ್ತದೆ. ಯೋಗ-ಯೋಗ್ಯತೆಗಳು ಬದುಕಿಗೆ ಬರಲು ದೇವರ ಅನುಗ್ರಹ ಬೇಕಿದೆ. ಸತ್ಯ-ನಂಬಿಕೆ ಪಾಲಿಸಿದಲ್ಲಿ ದೇವರ ಅನುಗ್ರಹದೊಂದಿಗೆ ಬದುಕು ಸುಂದರವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಧರ್ಮಗುರು ರೆ|ಫಾ|ವಿಲಿಯಂ ಮಾರ್ಟಿಸ್‌, ದ.ಕ.ಜಿಲ್ಲಾ ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ಬೆಂಗಳೂರು ರಘುರಾಮ ಕಾಮತ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಮಾತನಾಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ ಶೆಟ್ಟಿ ಕೊರಂಗ್ರಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದೇಗುಲದ ಪ್ರಧಾನ ಅರ್ಚಕ ನರಸಿಂಹ ಉಪಾಧ್ಯ ದಂಪತಿ, ಅರ್ಚಕ ಸುಧೀಂದ್ರ ಉಪಾಧ್ಯ ಅವರನ್ನು ಸಮ್ಮಾನಿಸಲಾಯಿತು.

ಬಡಗುಬೆಟ್ಟು ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಾವರ ಗ್ರಾ.ಪಂ.ಸದಸ್ಯ ಲೋರೆನ್ಸ್‌ ಡೇಸ, ಜೀರ್ಣೋದ್ಧಾರ ಸಮಿತಿಯ ಗೌ|ಸಲಹೆಗಾರ ಉದ್ಯಾವರ ನಾಗೇಶ ಕುಮಾರ್‌, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ ಕೆ. ಕೋಟ್ಯಾನ್‌ ವೇದಿಕೆಯಲ್ಲಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್‌ ಸಿ. ಸಾಲ್ಯಾನ್‌ ಸ್ವಾಗತಿಸಿದರು. ಅನುಪ್‌ ಕುಮಾರ್‌ ಸಮ್ಮಾನಿತರನ್ನು ಪರಿಚಯಿಸಿದರು. ಉದ್ಯಾವರ ಸುದೇಶ್‌ ಕುಮಾರ್‌, ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here