Home ಧಾರ್ಮಿಕ ಸುದ್ದಿ ‘ಪುರಾತನ ದೇವಾಲಯಗಳ ಜೀರ್ಣೋದ್ಧಾರದಿಂದ ಸಮಾಜದ ನವೀಕರಣ’

‘ಪುರಾತನ ದೇವಾಲಯಗಳ ಜೀರ್ಣೋದ್ಧಾರದಿಂದ ಸಮಾಜದ ನವೀಕರಣ’

1991
0
SHARE

ಕಾಪು: ಪುರಾತನ ದೇವಾಲಯದ ಜೀರ್ಣೋದ್ಧಾರವೆಂದರೆ ಅದು ಸಮಾಜದ ನವೀಕರಣ ಎಂಬ ಅರ್ಥವಿದೆ. ಶಿಲಾಮಯ ಮತ್ತು ಕಲಾಮಯವಾಗಿ ದೇವಾಲಯವನ್ನು ನಿರ್ಮಿಸಿ ಬಿಂಬದಲ್ಲಿ ಚೈತನ್ಯ ತುಂಬುವುದರಿಂದ ಸಮಾಜದಲ್ಲೂ ಚೈತನ್ಯ ತುಂಬಿದಂತಾಗುತ್ತದೆ. ಆ ಮೂಲಕ ಇಡೀ ಗ್ರಾಮವೇ ಚೈತನ್ಯಮಯಗೊಳ್ಳುತ್ತದೆ ಎಂದು ಉಡುಪಿ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಉಂಡಾರು ಶ್ರೀ ವಿಷ್ಣುಮೂರ್ತಿ ದೇಗುಲದ ನವೀಕೃತ ದೇವಾಲಯ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆ, ಅಷ್ಟಬಂಧ-ಬ್ರಹ್ಮಕಲಶ ಮಹೋತ್ಸವದ ಪ್ರಯುಕ್ತ ಸೋಮವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸೋದೆ ಶ್ರೀಗಳ ಮೂಲಕ ಮಹಾಕಾರ್ಯ
ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ, ಅಷ್ಟಮಠದ ಯಾವ ಯತಿಗಳೂ ಕೂಡಾ ಸಾಧಿಸದೇ ಇರುವ ಮಹತ್ಸಾಧನೆಯನ್ನು ಸೋದೆ ಶ್ರೀಗಳು ನಡೆಸುತ್ತಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಕೆಲಸಗಳು ಶ್ಲಾಘನೀಯವಾಗಿವೆ. ಸುಬ್ರಹ್ಮಣ್ಯ ಮಠದ ಜೊತೆಗೆ ಕಡಿದು ಹೋಗಿದ್ದ ಸಂಬಂಧವನ್ನು ಸೋದೆ ಶ್ರೀಗಳು ಮರು ಜೋಡಿಸಿಕೊಳ್ಳುವ ಮೂಲಕ ಮಠಗಳ ನಡುವಿನ ಸಂಬಂಧ ವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

ದೇವಸ್ಥಾನ ಸಂಸ್ಕೃತಿಯ ಪ್ರತೀಕ
ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ದೇವಸ್ಥಾನಗಳು ಸಂಸ್ಕೃತಿಯ ಪ್ರತೀಕವಾಗಿದ್ದು, ಭಾರತೀಯ ಸಂಸ್ಕೃತಿಯ ಸಮಗ್ರ ಪರಿಚಯ ಮಾಡುವ ಕೇಂದ್ರಗಳಾಗಬೇಕು. ಅಷ್ಟಬಂಧ, ಬ್ರಹ್ಮಕಲಶ ಇತ್ಯಾದಿ ಅನುಷ್ಟಾನಗಳು ದೇಗುಲದ ಕಲಾ ಸಾನ್ನಿಧ್ಯ ವೃದ್ಧಿಗೆ ಇರುವ ಪ್ರಕ್ರಿಯೆಗಳಾಗಿದ್ದು, ಸಾತ್ವಿಕ ಶಕ್ತಿ ಜಾಗೃತವಾದಾಗ ಮಾತ್ರ ದೈವಿಕ ಶಕ್ತಿ ಜಾಗೃತಗೊಳ್ಳುತ್ತದೆ. ಉಂಡಾರು ದೇಗುಲದ ಜೀರ್ಣೋದ್ಧಾರದಿಂದ ನಮ್ಮ ಮಠಗಳ ನಡುವಿನ ಸಂಬಂಧವೂ ಬೆಳೆದಿದ್ದು, ನರಸಿಂಹ ಮತ್ತು ಹಯಗ್ರೀವ ದೇವರ ಸಂಯುಕ್ತ ಸಾನ್ನಿಧ್ಯ ಸಮ್ಮಿಳಿತವಾಗಿರುವುದೇ ಇದಕ್ಕೆ ಮುಖ್ಯ ಸಾಕ್ಷಿ ಎಂದರು.

ಧಾರ್ಮಿಕ ವಿದ್ವಾಂಸ ಪಂಜ ಭಾಸ್ಕರ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು. ಸೋದೆ ವಾದಿರಾಜ ಮಠ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿ ರತ್ನ ಕುಮಾರ್‌, ಗಣ್ಯರಾದ ರತ್ನಾಕರ ಎಂ. ಶೆಟ್ಟಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಪಾಡಿಗಾರು ಶ್ರೀನಿವಾಸ ತಂತ್ರಿ, ಸಾಯಿರಾಧಾ ಗ್ರೂಪ್ಸ್‌ನ ಮನೋಹರ ಶೆಟ್ಟಿ, ಜೀರ್ಣೋದ್ಧಾರ ಮುಂಬಯಿ ಸಮಿತಿ ಗೌರವಾಧ್ಯಕ್ಷ ಸುಂದರ ಶೆಟ್ಟಿ, ಮುಂಬಯಿ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇಗುಲ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವಧಾನಿ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು, ಎಲ್ಲೂರು ವಿಷ್ಣುಮೂರ್ತಿ ಭಟ್‌ ಅವರನ್ನು ವಿಶೇಷ ಸಮ್ಮಾನೊದೊಂದಿಗೆ ಗೌರವಿಸಲಾಯಿತು. ದಾನಿಗಳಿಗೆ ಗೌರವ ಸಲ್ಲಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಡಾ| ಐ. ರಮೇಶ್‌ ಮಿತ್ತಂತಾಯ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ನಂದನ್‌ ಕುಮಾರ್‌ ದಾನಿಗಳನ್ನು ಪರಿಚಯಿಸಿದರು. ಕೋಶಾಧಿಕಾರಿ ವಿ.ಜಿ. ಶೆಟ್ಟಿ ವಂದಿಸಿದರು. ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಚೈತನ್ಯ ಶಕ್ತಿಯ ಅರಿವಿದ್ದಾಗ ಜೀವನ ಸಾರ್ಥಕ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ದೇವಸ್ಥಾನಗಳು ಸುಂದರ ವಾಗಿದ್ದರೆ ಸಾಲದು. ನಮ್ಮ ಮನಸ್ಸುಗಳು ಸುಂದರ ವಾಗಿರಬೇಕು. ದೇವರು ಮಾತೃಸ್ವರೂಪಿ. ದೇವರು ನಮ್ಮ ಕೈ ಹಿಡಿಯಬೇಕಾದರೆ ನಾವು ದೇವರ ಪಾದ ಹಿಡಿಯಬೇಕು. ದೇವರ ಚಿಂತನೆ, ಅಧ್ಯಾತ್ಮದ ಚಿಂತನೆಯ ಜೊತೆಗೆ ಚೈತನ್ಯ ಶಕ್ತಿಯ ಅರಿವಿದ್ದಾಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.

LEAVE A REPLY

Please enter your comment!
Please enter your name here