Home ಧಾರ್ಮಿಕ ಸುದ್ದಿ ಶುಭ ಫ‌ಲದ ವರಮಹಾಲಕ್ಷ್ಮೀ ವ್ರತಾಚರಣೆ

ಶುಭ ಫ‌ಲದ ವರಮಹಾಲಕ್ಷ್ಮೀ ವ್ರತಾಚರಣೆ

661
0
SHARE

ಉಡುಪಿ: ವರಮಹಾಲಕ್ಷ್ಮೀ ವ್ರತಾಚರಣೆ ಯನ್ನು ಭಕ್ತರು ಶ್ರಾವಣ ಮಾಸದ ಎರಡನೆಯ ಶುಕ್ರವಾರ ಆಚರಿಸುತ್ತಾರೆ.

ಸ್ಕಂದ ಪುರಾಣದಲ್ಲಿ ಈ ವ್ರತದ ಉಲ್ಲೇಖವಿದೆ. ಪಾರ್ವತಿ ದೇವಿ ಪತಿ ಶಿವನಲ್ಲಿ ವರಮಹಾಲಕ್ಷ್ಮೀವ್ರತದ ಮಹತ್ವ, ಮಹಿಮೆ, ಯಾವಾಗ ಆಚರಿಸಬೇಕೆಂದು ಕೇಳುತ್ತಾಳೆ. ಸಮುದ್ರಮಥನ ಕಾಲದಲ್ಲಿ ಕ್ಷೀರಸಾಗರ ದಿಂದ ಉದಿಸಿದ ಮಹಾಲಕ್ಷ್ಮೀಯನ್ನು ಪೂಜಿಸುವ ಕ್ರಮವನ್ನು, ಶ್ರಾವಣ ಮಾಸದ ಎರಡನೆಯ ಶುಕ್ರವಾರ ಪೂಜಿಸಬೇಕು, ಈ ಪೂಜೆಯಿಂದ ಧನಧಾನ್ಯ ಸಂಪತ್ತು, ವಿದ್ಯಾಬುದ್ಧಿಯಿಂದ ಕೂಡಿದ ಮಕ್ಕಳು ಇತ್ಯಾದಿ ಶುಭ ಕಾರ್ಯದ ಫ‌ಲವನ್ನು ಶಿವ ತಿಳಿಸುತ್ತಾನೆ.

ಕರಾವಳಿ ಪ್ರಾಂತ್ಯದಲ್ಲಿ ಇದರ ಆಚರಣೆ ಇತ್ತೀಚೆಗೆ ನಡೆಯುತ್ತಿದೆ. ಘಟ್ಟದ ಮೇಲೆ ಇದು ವಿವಿಧ ಸಮುದಾಯಗಳಲ್ಲಿ ಆಚರಣೆಯಾಗುತ್ತಿದೆ. ಕೆಲವರು ಲಕ್ಷ್ಮೀಸಹಿತನಾದ ಶ್ರೀಮನ್ನಾರಾಯಣನನ್ನು ಇನ್ನು ಕೆಲವರು ಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆ. ಇಲ್ಲಿ ವರ= ಭಗವಂತ ಎಂದರ್ಥ. ಭಗವಂತ ನಾರಾಯಣನ ಸಹಿತವಾದ ಲಕ್ಷ್ಮೀ ಪೂಜೆ ಎಂಬರ್ಥದಲ್ಲಿ ವ್ರತವನ್ನು ಆಚರಿಸಲಾಗುತ್ತಿದೆ. ಕಲಶದಲ್ಲಿ ಲಕ್ಷ್ಮೀನಾರಾಯಣರನ್ನು, ದೇವತೆಗಳನ್ನು ಆವಾಹನೆ ನಡೆಸಿ, ಕಲ್ಪೋಕ್ತವಿಧಿಯಂತೆ ಆಚರಿಸುತ್ತಾರೆ. ಸುವಾಸಿನಿಯರಿಗೆ ಬಾಗಿನವನ್ನು ಕೊಟ್ಟು ಗೌರವಿಸುತ್ತಾರೆ.

ಘಟ್ಟದ ಮೇಲೂ, ಕರಾವಳಿಯಲ್ಲಿಯೂ ವಿವಿಧ ದೇವಸ್ಥಾನಗಳಲ್ಲಿ, ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀವ್ರತದ ಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ.

ಶ್ರೀಕೃಷ್ಣಮಠದಲ್ಲಿ ಎಲ್ಲ ಶುಕ್ರವಾರ ದೇವಿ ಅಲಂಕಾರ ಮಾಡುವುದಿದ್ದರೂ, ಶ್ರಾವಣ ಮಾಸದ ಈ ಶುಕ್ರವಾರ ವಿಶೇಷವಾಗಿ ಪೂಜಿಸುವ ಕ್ರಮವಿದೆ.

ಆಚರಣೆ ಹೇಗೆ
ವರಮಹಾಲಕ್ಷ್ಮೀ ಹಬ್ಬ ಆಚರಣೆ ಸ್ಥಳದಿಂದ ಸ್ಥಳಕ್ಕೆ ವಿಭಿನ್ನವಾಗಿರುತ್ತದೆ. ಕೆಲವರು ವೀಳ್ಯದ ಎಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡುತ್ತಾರೆ. ಈ ತಟ್ಟೆಯಡಿ ಅಷ್ಟದಳ ರಂಗೋಲಿ ಹಾಕಲಾಗುತ್ತದೆ. ಕಲಶಕ್ಕೆ ಹೊಸ ರವಿಕೆ ಕಣ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ನೈವೇದ್ಯ ಅರ್ಪಿಸಿ ಭಕ್ತರಿಗೆ ವಿತರಿಸಲಾಗುತ್ತದೆ.

LEAVE A REPLY

Please enter your comment!
Please enter your name here