ಉಡುಪಿ/ಮಂಗಳೂರು:ಉಡುಪಿ ಶ್ರೀಕೃಷ್ಣ ಮಠವೂ ಸೇರಿದಂತೆ ನಾಡಿನ ವಿವಿಧೆಡೆಗಳಲ್ಲಿ ವಿವಿಧ ಮಠಾಧೀಶರು ಶುಕ್ರವಾರ ಪ್ರಥಮನ ಏಕಾದಶಿಯಂದು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಬೇಗ ಮಹಾಪೂಜೆಯನ್ನು ಪೂರೈಸಿದ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅಪರಾಹ್ನದವರೆಗೆ ಸಾವಿರಾರು ಭಕ್ತರಿಗೆ ನಿರಂತರ ಮುದ್ರಾಧಾರಣೆ ನಡೆಸಿದರು. ಮಧ್ಯಾಹ್ನದ ಅನಂತರ ಜನಸಂದಣಿ ಕಡಿಮೆಯಾಯಿತಾದರೂ ಸಂಜೆವರೆಗೂ ಮತ್ತು ರಾತ್ರಿ ಪೂಜೆ ಸಮಯದಲ್ಲಿ ಮತ್ತೆ ತಪ್ತ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗಾಗಿ ಬಂದವರ ಸರತಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಥಬೀದಿಯಲ್ಲಿ ಕಾಣಿಯೂರು ಮಠದವರೆಗೂ ಇತ್ತು.
ಮುದ್ರಾಧಾರಣೆ ಮಾಡುವ ಮುನ್ನವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು.
ಶ್ರೀ ಅದಮಾರು ಮಠಾಧೀಶರು ಪೆರ್ಡೂರು ದೇವಸ್ಥಾನ, ಉಡುಪಿ ಅದಮಾರು ಮಠದಲ್ಲಿ, ಶ್ರೀ ಸುಬ್ರಹ್ಮಣ್ಯ ಮಠಾಧೀಶರು ಉಜಿರೆ ಜನಾರ್ದನ ದೇವಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಪುತ್ತೂರು ಕೆಮ್ಮಿಂಜೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಮಠದಲ್ಲಿ, ಬಾಳೆಗಾರು ಶ್ರೀಗಳು ಕ್ರಮವಾಗಿ ಕೊಡವೂರು ಕಂಗೂರು ಮಠ, ಪಡುಬಿದ್ರಿ, ಪಾವಂಜೆಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠ, ಬನ್ನಡ್ಕ ರಾಘವೇಂದ್ರ ಮಠ, ಅಜೆಕಾರು, ಪಲಿಮಾರು ಮಠದಲ್ಲಿ ಮುದ್ರಾಧಾರಣೆ ನಡೆಸಿದರು. ಸುರತ್ಕಲ್ ಸಮೀಪದ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಿತ್ರಾಪುರ ಮಠಾಧೀಶರು ಮುದ್ರಾಧಾರಣೆ ನಡೆಸಿದರು.
ಪುತ್ತೂರು ತಾಲೂಕು ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕವೇ|ಮೂ| ನರಹರಿ ಉಪಾಧ್ಯಾಯ ಅವರು ತಂದೆ ವೆಂಕಟರಮಣ ಉಪಾಧ್ಯಾಯರ ನಿಧನಾನಂತರ ಮೊದಲ ಬಾರಿಗೆ ಮುದ್ರಾಧಾರಣೆ ನಡೆಸಿದರು. ಗೃಹಸ್ಥರು ಮುದ್ರಾಧಾರಣೆ ನಡೆಸುವ ಸ್ಥಳ ಇದು ಮಾತ್ರ ಆಗಿರುವ ಕಾರಣ ಬೆಂಗಳೂರಿನಿಂದಲೂ ಕೆಲವು ಭಕ್ತರು ಆಗಮಿಸಿದ್ದರು.
ಬೆಂಗಳೂರು, ಮೈಸೂರು ಮೊದಲಾದೆಡೆ ಮಠಾಧೀಶರು ವಿವಿಧೆಡೆ ಮುದ್ರಾಧಾರಣೆ ನಡೆಸಿದರು. ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು.
ಸರ್ವಜ್ಞ ಪೀಠದಲ್ಲಿ ಮೊದಲ ಬಾರಿ ಮುದ್ರಾಧಾರಣೆ
ಇದೇ ಮೊದಲ ಬಾರಿಗೆ ಶ್ರೀ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಸರ್ವಜ್ಞ ಸಿಂಹಾಸನದಲ್ಲಿದ್ದು ಮುದ್ರಾಧಾರಣೆ ನಡೆಸಿದರು. ಗರ್ಭಗುಡಿ ಆವರಣದಲ್ಲಿ ಅದಮಾರು ಮತ್ತು ಪಲಿಮಾರು ಕಿರಿಯ ಶ್ರೀಗಳು ಮುದ್ರಾಧಾರಣೆ ನಡೆಸಿದರು.
ಪಲಿಮಾರು ಮತ್ತು ಪುತ್ತಿಗೆ ಕಿರಿಯ ಶ್ರೀಗಳು ಸನ್ಯಾಸಾಶ್ರಮದ ಬಳಿಕ ಇದೇ ಮೊದಲ ಬಾರಿ ಗುರುಗಳಿಂದ ತಪ್ತಮುದ್ರಾಧಾರಣೆ ಮಾಡಿಸಿಕೊಂಡರು.