Home ಧಾರ್ಮಿಕ ಸುದ್ದಿ ವಿವಿಧೆಡೆ ಸಾಂಕೇತಿಕ ತಪ್ತಮುದ್ರಾಧಾರಣೆ

ವಿವಿಧೆಡೆ ಸಾಂಕೇತಿಕ ತಪ್ತಮುದ್ರಾಧಾರಣೆ

3061
0
SHARE

ಉಡುಪಿ: ಇಷ್ಟು ವರ್ಷಗಳಲ್ಲಿ ಪ್ರಥಮನ ಏಕಾದಶಿಯಂದು ಶ್ರೀಕೃಷ್ಣಮಠ ಸಹಿತ ನಾಡಿನ ವಿವಿಧೆಡೆ ಮಠಾಧೀಶರಿಂದ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳಲು ಭಕ್ತರು ಸರತಿ ಸಾಲು ನಿಲ್ಲುತ್ತಿದ್ದರೆ, ಈ ಬಾರಿ ಬುಧವಾರ ಕೇವಲ ಸ್ವಾಮೀಜಿಯವರು ಮಾತ್ರ ಮುದ್ರಾಧಾರಣೆ ಮಾಡಿಸಿಕೊಂಡರು.

ವೈದಿಕರು ಸುದರ್ಶನ ಹೋಮ ನಡೆಸಿದ ಬಳಿಕ ಆ ಹೋಮ ಕುಂಡದಲ್ಲಿ ಪಂಚಲೋಹದಿಂದ ಮಾಡಿದ ಶಂಖ ಮತ್ತು ಚಕ್ರದ ಮುದ್ರೆಗಳನ್ನು ಬಿಸಿ ಮಾಡಿ ತೋಳುಗಳಲ್ಲಿ ಮುದ್ರಿಸಿಕೊಳ್ಳುವುದು ಸಂಪ್ರದಾಯ. ಬುಧವಾರ ಕೋವಿಡ್ ಕಾರಣದಿಂದ ಶ್ರೀಕೃಷ್ಣಮಠದಲ್ಲಿ ಭಕ್ತರಿಗೆ ಪ್ರವೇಶವಿಲ್ಲದ್ದರಿಂದ ಕೇವಲ ಸ್ವಾಮೀಜಿಯವರು ಮಾತ್ರ ಮುದ್ರಾಧಾರಣೆ ಮಾಡಿಸಿಕೊಂಡರು. ಇತರೆಡೆಗಳಲ್ಲಿಯೂ ಇದೇ ರೀತಿ ನಡೆಯಿತು.

ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಾವು ಸ್ವತಃ ಮುದ್ರಾಧಾರಣೆ ಮಾಡಿಕೊಂಡ ಬಳಿಕ, ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.

ಕೃಷ್ಣಾಪುರ ಮಠದಲ್ಲಿ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮೂಲ ಮಠದಲ್ಲಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶಿರಸಿ ಸಮೀಪದ ಸೋಂದೆಯಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ನೀಲಾವರ ಗೋಶಾಲೆ ಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬೆಂಗಳೂರು ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮೂಲಮಠದಲ್ಲಿ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಬೆಂಗಳೂರು ಭಂಡಾರಕೇರಿ ಮಠದಲ್ಲಿ ಶ್ರೀ ವಿದ್ಯೆàಶತೀರ್ಥ ಶ್ರೀಪಾದರು, ಸುಬ್ರಹ್ಮಣ್ಯದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಗೃಹಸ್ಥರು ನಡೆಸುವ ಏಕೈಕ ತಾಣವಾದ ಕಡಬ ತಾಲೂಕು ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ವೇ| ಮೂ| ನರಹರಿ ಉಪಾಧ್ಯಾಯ ಅವರು ಮುದ್ರಾಧಾರಣೆ ಮಾಡಿಕೊಂಡರು.

ಮುಂದೆ ಸಾರ್ವಜನಿಕರಿಗೆ ಮುದ್ರಾಧಾರಣೆ
ಈಗ ಕೋವಿಡ್-19 ಕಾರಣದಿಂದ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡಲಾಗುತ್ತಿದೆ. ಕೋವಿಡ್ ಮೂಲಕ ಪ್ರಕೃತಿ ನಮಗೆ ಎಷ್ಟೋ ಹೊಸ ವಿಷಯಗಳ ಅನುಭವವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾಧಾರಣೆ ನಡೆಸಲಾಗುವುದು ಎಂದು ಪರ್ಯಾಯ ಅದಮಾರುಶ್ರೀ ಹೇಳಿದರು.

 

LEAVE A REPLY

Please enter your comment!
Please enter your name here