ಉಡುಪಿ: ಉಡುಪಿಯ ಶ್ರೀಕೃಷ್ಣ ಚಿಣ್ಣ ಸ್ವರೂಪಿ ಅಂದರೆ ಬಾಲಕ. ಈತನಿಗೆ ಚಿನ್ನದ ಗೋಪುರ ಸಮರ್ಪಿಸುವ ಮೂಲಕ ಚಿನ್ನದ ನಾಡಾಗಲಿ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾರೈಸಿದರು.
ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿಯವರು ನಿರ್ಮಿಸಿದ ಸ್ವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಶನಿವಾರ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ, ಕಿದಿಯೂರು ವಿಷ್ಣುಮೂರ್ತಿ ಮತ್ತು ವನದುರ್ಗಾ ಸೇವಾ ಸಮಿತಿ ನೇತೃತ್ವದಲ್ಲಿ ಸುವರ್ಣ ಶಿಖರ ಮತ್ತು ರಜತ ಕಲಶದ ಅದ್ದೂರಿ ಐತಿಹಾಸಿಕ ಕ್ಷಣಗಳ ಮೆರವಣಿಗೆಯ ಭವ್ಯ ಶೋಭಾಯಾತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಇದು ಐತಿಹಾಸಿಕ, ಅಭೂತಪೂರ್ವ ಕಾರ್ಯಕ್ರಮ ಎಂದು ಬಣ್ಣಿಸಿದರು.
ಭಗವಂತನಿಗೆ ನಮ್ಮ ಹಣ, ಚಿನ್ನ, ಬೆಳ್ಳಿ ಯಾವುದೂ ಬೇಡ. ಆತನಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಆತ ನಿತ್ಯತೃಪ್ತ. ಆದರೆ ಲೋಕಕಲ್ಯಾಣಾರ್ಥವಾಗಿ ಇಂತಹ ಭಗವತ್ಪ್ರೇರಿತ ಕಾರ್ಯಕ್ರಮ ಗಳನ್ನು ಪಲಿಮಾರು ಶ್ರೀಗಳು ಆಯೋಜಿಸಿದ್ದಾರೆಂದು ಹೇಳಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ| ಜಿ. ಶಂಕರ್, ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಕೋರಿದರು.
ಶ್ರೀ ಉತ್ತರಾದಿ ಮಠದ ಯತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.