ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆ. 23ರಂದು ಮತ್ತು ವಿಟ್ಲಪಿಂಡಿ (ಮೊಸರುಕುಡಿಕೆ) ಉತ್ಸವ ಆ. 24ರಂದು ನಡೆಯಲಿದೆ.
ರಾತ್ರಿ ಅಷ್ಟಮಿ ತಿಥಿ ಬರಬೇಕಾ ಗಿರುವುದರಿಂದ ಆ. 23ರಂದು ಜನ್ಮಾ ಷ್ಟಮಿ ಆಚರಿಸಲು ಜ್ಯೋತಿಷಿಗಳು, ವಿದ್ವಾಂಸರು ನಿರ್ಣಯ ತಾಳಿದ್ದಾರೆ. ಆ. 23ರ ಮಧ್ಯರಾತ್ರಿ 12.12 ಗಂಟೆಗೆ ಕೃಷ್ಣಾಘ್ಯರ್ ಪ್ರದಾನ ನಡೆಯಲಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಸುದ್ದಿಗಾರ ರಿಗೆ ತಿಳಿಸಿದರು.
ಈ ಬಾರಿ ಅಷ್ಟಮಿ ಆಚರಣೆಯಲ್ಲಿ ಸ್ವಲ್ಪ ಗೊಂದಲ ಕಾಣಿಸಿದೆ. ರೋಹಿಣಿ ನಕ್ಷತ್ರ ಬಾರದ ಕಾರಣ ಶ್ರೀಕೃಷ್ಣ ಜಯಂತಿ ಎಂದು ಕರೆಯದೆ ಶ್ರೀಕೃಷ್ಣಾಷ್ಟಮಿ ಎಂದು ಕರೆಯಲಾಗುವುದು. ರಾತ್ರಿ ಅಷ್ಟಮಿ ತಿಥಿ ಮಾತ್ರ ಬರುತ್ತಿದೆ. ಸಂಪ್ರದಾಯದಂತೆ ಅಷ್ಟಮಿ ತಿಥಿ ರಾತ್ರಿ ಸಿಗುವ ಆ. 23ರಂದೇ ಕೃಷ್ಣಾಷ್ಟಮಿ ಆಚರಣೆ ನಡೆಸಲಾಗುತ್ತಿದೆ ಎಂದರು.
ಕೃಷ್ಣಾಷ್ಟಮಿಯಂದು ಉಪವಾಸವಿದ್ದು ರಾತ್ರಿ ವಿಶೇಷ ಪೂಜೆ ಬಳಿಕ ಕೃಷ್ಣಾಘ್ಯರ್ ಪ್ರದಾನ ನಡೆಯಲಿದೆ. ಹಗಲಿ ನಲ್ಲಿ ಭಜನೆ ಇತ್ಯಾದಿಗಳು ನಡೆಯಲಿವೆ. ಮರುದಿನ ಭಕ್ತರಿಗೆ ಪ್ರಸಾದದ ವಿತರಣೆ, ಅಪರಾಹ್ನ 3ಕ್ಕೆ ವಿಟ್ಲಪಿಂಡಿ ಉತ್ಸವ, ಹುಲಿವೇಷ ಸಹಿತ ವಿವಿಧ ವೇಷಗಳ ಸ್ಪರ್ಧೆ ನಡೆಯಲಿದೆ. ಚಿಣ್ಣರ ಸಂತರ್ಪಣೆ ಶಾಲೆಗಳಲ್ಲಿ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಗುವುದು. ಈ ಮಕ್ಕಳಿಗೆ ಪ್ರಸಾದವನ್ನೂ ವಿತರಿಸಲಾಗುವುದು. ವಿಟ್ಲಪಿಂಡಿ ಉತ್ಸವ ದಲ್ಲಿ ಉತ್ಸವ ಮೂರ್ತಿಯನ್ನು ಚಾತುರ್ಮಾಸ್ಯದ ಅವಧಿಯಾದ ಕಾರಣ ಹೊರ ತೆಗೆಯುವುದಿಲ್ಲ. ಮಣ್ಣಿನ ವಿಗ್ರಹವನ್ನು ಉತ್ಸವದಲ್ಲಿ ಪೂಜಿಸಲಾಗುವುದು ಎಂದರು.
ವಿವಿಧ ಸ್ಪರ್ಧೆಗಳು
ಆ. 3ರ ಅಪರಾಹ್ನ 3ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಆ. 4ರ ಬೆಳಗ್ಗೆ 1ರಿಂದ 10ನೆಯ ತರಗತಿ ವರೆಗೆ ಭಕ್ತಿ ಸಂಗೀತ ಸ್ಪರ್ಧೆ, ಆ. 10ರ ಅಪರಾಹ್ನ 2ರಿಂದ 4ರ ವರೆಗೆ 3ರಿಂದ 10ನೇ ತರಗತಿ ವರೆಗಿನವರಿಗೆ ಚಿತ್ರ ಕಲಾ ಸ್ಪರ್ಧೆ, ಆ. 11ರ ಅಪರಾಹ್ನ 1.30ಕ್ಕೆ ಪ್ರಾಥಮಿಕ (1ರಿಂದ 10ನೇ ಶ್ಲೋಕ), ಪ್ರೌಢಶಾಲಾ ಮಕ್ಕಳಿಗೆ (15ನೇ ಅಧ್ಯಾಯ) ಗೀತಾ ಕಂಠಪಾಠ ಸ್ಪರ್ಧೆ, ಆ. 12ರ ಬೆಳಗ್ಗೆ 10ಕ್ಕೆ ಪಿಯುಸಿ-ಪದವಿ, ಸಾರ್ವಜನಿಕರಿಗೆ ಭಕ್ತಿ ಸಂಗೀತ, ಆ. 17ರ ಅಪರಾಹ್ನ 3.30ಕ್ಕೆ 5ರಿಂದ 10ನೇ ತರಗತಿ ವರೆಗೆ ರಸಪ್ರಶ್ನೆ, ಆ. 18ರ ಅಪರಾಹ್ನ 2.30ಕ್ಕೆ ರಂಗೋಲಿ ಸ್ಪರ್ಧೆ, ಆ. 19ರ ಬೆಳಗ್ಗೆ 9.30ಕ್ಕೆ ಮಕ್ಕಳಿಗೆ ಹುಲಿವೇಷ, ಆ. 21ರ ಅಪರಾಹ್ನ 3ಕ್ಕೆ ಶಂಖ ಊದುವ ಸ್ಪರ್ಧೆ, ಆ. 22ರ ಅಪರಾಹ್ನ 3ಕ್ಕೆ ಬತ್ತಿ ಮಾಡುವ ಸ್ಪರ್ಧೆ, ಆ. 23ರ ಬೆಳಗ್ಗೆ 10ಕ್ಕೆ 3ರಿಂದ 8 ವರ್ಷದೊಳಗೆ ಮೂರು ವಿಭಾಗದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ, ಬೆಳಗ್ಗೆ 10ಕ್ಕೆ ಮೊಸರು ಕಡೆಯುವ ಸ್ಪರ್ಧೆ, ಆ. 24ರ ಸಂಜೆ 4ಕ್ಕೆ ಹುಲಿವೇಷ ಸ್ಪರ್ಧೆ, ಜಾನಪದ ವೇಷ ಸ್ಪರ್ಧೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಆ. 18ರ ರಾತ್ರಿ ಶಮಾ ಕೃಷ್ಣ ಮತ್ತು ಶ್ರದ್ಧಾನೃತ್ಯ ತಂಡದಿಂದ ಸರ್ವಂ ಕೃಷ್ಣಮಯಂ ನೃತ್ಯರೂಪಕ, ಆ. 19ರಂದು ಫಯಾಜ್ ಖಾನ್ ಅವರಿಂದ ಭಕ್ತಿ ಸಂಗೀತ, ಆ. 20 ರಂದು ಚೆನ್ನೈ ಟಿ.ವಿ. ಶಂಕರನಾರಾಯಣ ರಿಂದ ಕರ್ಣಾಟಕ ಸಂಗೀತ, ಆ. 21ರಂದು ಚೆನ್ನೈಯ ಕೆ.ಜೆ. ದಿಲೀಪ್ ಮತ್ತು ಸಂಗೀತಾ ದಿಲೀಪ್ ಅವರಿಂದ ದ್ವಂದ್ವ ಪಿಟೀಲು ವಾದನ, ಆ. 22ರಂದು ಮುದ್ದುಮೋಹನ್ ಅವರಿಂದ ಹಿಂದೂಸ್ತಾನೀ ಭಕ್ತಿ ಸಂಗೀತ, ಆ. 23ರಂದು ರಾಜಕಮಲ್ ನಾಗರಾಜ್ ಮತ್ತು ಸಮೀರ್ ರಾವ್ ಅವರಿಂದ ಕರ್ಣಾಟಕ ಮತ್ತು ಹಿಂದೂಸ್ಥಾನಿ ಕೊಳಲು ಜುಗಲ್ಬಂದಿ, ಆ. 25ರಂದು ಎಚ್.ಎಲ್. ಶಿವಶಂಕರ ಸ್ವಾಮಿ ಅವರಿಂದ ತಾಳವಾದ್ಯ ಕಛೇರಿ ನಡೆಯಲಿದೆ.