ಉಡುಪಿ: ಶ್ರೀಕೃಷ್ಣ ಮಠದಲ್ಲಿ ರವಿವಾರ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು 28 ವಲಯಗಳ ಬ್ರಾಹ್ಮಣ ಸಂಘಗಳ ಸದಸ್ಯರ ಸಹಭಾಗಿತ್ವದಲ್ಲಿ ಕೋಟಿಗೂ ಅಧಿಕ ತುಳಸಿ ಅರ್ಚನೆ ನಡೆಯಿತು.
ಶ್ರೀಕೃಷ್ಣ ಮಠದ ಪೌಳಿ ಮತ್ತು ರಾಜಾಂಗಣದಲ್ಲಿ ಸುಮಾರು 2,800 ವೈದಿಕರು ವಿಷ್ಣು ಸಹಸ್ರನಾಮಾವಳಿಯನ್ನು ನಾಲ್ಕು ಬಾರಿ ಪಾರಾಯಣ ಮಾಡಿದರೆ, ಮಹಿಳೆಯರು ಲಕ್ಷ್ಮೀಶೋಭಾನೆ ಹಾಡಿದರು. ಶ್ರೀ ಪೇಜಾವರ ಹಿರಿಯ, ಕಿರಿಯ, ಶ್ರೀ ಕೃಷ್ಣಾಪುರ, ಶ್ರೀ ಅದಮಾರು, ಶ್ರೀ ಸೋದೆ, ಶ್ರೀ ಪಲಿಮಾರು ಕಿರಿಯ ಶ್ರೀಪಾದರು ಎರಡೂ ಕಡೆ ಅರ್ಚನೆ ನಡೆಸಿದರು.
ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನಡೆಸಿದರು. ಬೆಂಗಳೂರು, ಮೈಸೂರು, ಪಂಢರ ಪುರ ಮೊದಲಾದೆಡೆಗಳಿಂದ ಭಕ್ತರು ತುಳಸಿ ದಲಗಳನ್ನು ಪೂರೈಸಿದ್ದರು.