ಉಡುಪಿ: ದೇವಸ್ಥಾನಗಳನ್ನು ತೆರೆಯಲು ಸರಕಾರ ಅವಕಾಶ ಕಲ್ಪಿಸಿದ್ದರೂ ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಾತ್ರ ಕಾದು ನೋಡಿ, ಇನ್ನೂ 20-30 ದಿನ ಬಿಟ್ಟು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುವ ಚಿಂತನೆ ನಡೆಸಲಾಗಿದೆ.
ಒಂದು ಬಾರಿ ಪ್ರವೇಶ ಕೊಟ್ಟರೆ ದೂರದೂರುಗಳಿಂದ ಭಕ್ತರು ಬರಲಾರಂಭಿಸುತ್ತಾರೆ. ಅವರ ಆರೋಗ್ಯ ನಮಗೆ ಮುಖ್ಯ, ಇನ್ನೊಂದೆಡೆ ಸಿಬಂದಿಯ ಆರೋಗ್ಯವೂ ಮುಖ್ಯ. ಇಲ್ಲಿ ಅಷ್ಟ ಮಠಗಳ ಯತಿಗಳೇ ಪೂಜೆ ಸಲ್ಲಿಸಿಕೊಂಡು ಬಂದಿರುವುದರಿಂದ ಸಂಪ್ರದಾಯಗಳು ಅನೂಚಾನವಾಗಿ ನಡೆಯುವುದು ಮುಖ್ಯ. ಅವುಗಳಿಗೆ ಯಾವುದೇ ಚ್ಯುತಿ ಬಾರದಂತೆ ನೋಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶತಮಾನಗಳಿಂದ 24 ತಾಸಿನ ದರ್ಶನ
ಸ್ಥಳೀಯ ಭಕ್ತರು ರಥಬೀದಿಗೆ ಹೋದರೆ ಕನಕನ ಕಿಂಡಿ ಮೂಲಕವೇ ದರ್ಶನ ಪಡೆಯುತ್ತಿದ್ದಾರೆ. ಎಲ್ಲಿ ಏನೇ ಆಗಲಿ ಇಲ್ಲಿ ಮಾತ್ರ ದಿನದ 24 ತಾಸು ದರ್ಶನಾವಕಾಶವನ್ನು ಕನಕದಾಸರು ನಾಲ್ಕೈದು ಶತಮಾನಗಳ ಹಿಂದೆಯೇ ಕಲ್ಪಿಸಿದ್ದಾರೆ.