Home ಧಾರ್ಮಿಕ ಸುದ್ದಿ ಕೃಷ್ಣ ಮಠ: ಪರಿಶುದ್ಧ ಎಳ್ಳೆಣ್ಣೆ ಪ್ರಯೋಗಕ್ಕೆ ಸಿದ್ಧತೆ

ಕೃಷ್ಣ ಮಠ: ಪರಿಶುದ್ಧ ಎಳ್ಳೆಣ್ಣೆ ಪ್ರಯೋಗಕ್ಕೆ ಸಿದ್ಧತೆ

1067
0
SHARE

ಉಡುಪಿ: ಶ್ರೀಕೃಷ್ಣಮಠದಲ್ಲಿ ದೇಸೀ ಟಚ್‌ ಕೊಡುತ್ತಿರುವ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಈಗ ಮತ್ತೊಂದು ಹೆಜ್ಜೆ ಮುಂದಿರಿ ಸಿದ್ದಾರೆ. ಮಠದಲ್ಲಿ ಬಳಸುವ ಸಾಮಾನ್ಯ ಎಳ್ಳೆಣ್ಣೆಗೆ ಪರ್ಯಾಯವಾಗಿ ಸಾಂಪ್ರದಾಯಿಕವಾಗಿ ಉತ್ಪಾದಿಸಿದ ಪರಿಶುದ್ಧ ಎಳ್ಳೆಣ್ಣೆ ಬಳಸಲು ನಿರ್ಧರಿಸಿದ್ದಾರೆ.

ಎಳ್ಳೆಣ್ಣೆ ಉತ್ಪಾದನೆ: 2 ಮಾರ್ಗ
ಎಳ್ಳೆಣ್ಣೆಗೆ ಧಾರ್ಮಿಕ, ಆಯುರ್ವೇದ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯವಿದೆ. ಸಂಸ್ಕೃತದ “ತಿಲ’ ಶಬ್ದದಿಂದ ತೈಲ ಎಂಬ ಹೆಸರು ಬಂತು. ತಿಲಕ್ಕೆ ಕನ್ನಡದಲ್ಲಿ ಎಳ್ಳು ಎಂದು ಹೆಸರು. ಎಳ್ಳೆಣ್ಣೆಯನ್ನು ಎರಡು ಮಾದರಿಗಳಲ್ಲಿ ಉತ್ಪಾದಿಸಬಹುದು. ಒಂದು ಯಾಂತ್ರಿಕವಾಗಿ , ಇನ್ನೊಂದು ಸಾಂಪ್ರದಾಯಿಕವಾದ ಗಾಣದ ಪದ್ಧತಿ. ಯಾಂತ್ರಿಕವಾಗಿ ಉತ್ಪಾದಿಸುವಾಗ 200 ಡಿಗ್ರಿ ಉಷ್ಣಾಂಶದಿಂದ ಎಣ್ಣೆ ಹೊರಗೆ ಬರುತ್ತದೆ.

ಆಗ ಎಣ್ಣೆಯ ಸುವಾಸನೆ, ಗುಣಧರ್ಮ ಸಹಿತ ಬಹುತೇಕ ಮೂಲಗುಣ ನಷ್ಟವಾಗಿರುತ್ತದೆ. ಗಾಣದ ಮೂಲಕ ತೆಗೆದಾಗ ಉಷ್ಣಾಂಶ ಇರುವುದಿಲ್ಲ, ಇದ್ದರೂ ಉಗುರು ಬೆಚ್ಚಗಿನ ಉಷ್ಣಾಂಶ. ಆದರೆ ಯಂತ್ರದ ಮೂಲಕ ಉತ್ಪಾದಿಸಿದರೆ ಹೆಚ್ಚು ಎಣ್ಣೆ ಸಿಗುತ್ತದೆ. ಉದಾಹರಣೆಗೆ ಯಾಂತ್ರಿಕ ಮಾರ್ಗದಲ್ಲಿ 2 ಕೆ.ಜಿ. ಎಳ್ಳಿನಿಂದ 1 ಕೆ.ಜಿ. ಎಣ್ಣೆ ಸಿಕ್ಕಿದರೆ, ಗಾಣದ ಮಾರ್ಗದಲ್ಲಿ 2.5 ಕೆ.ಜಿ. ಎಳ್ಳಿನಿಂದ 1 ಕೆ.ಜಿ. ಎಣ್ಣೆ ಸಿಗುತ್ತದೆ. ವಾಣಿಜ್ಯಿಕವಾಗಿ ಬಹುತೇಕರು ಯಾಂತ್ರಿಕ ಮಾರ್ಗಾವಲಂಬಿಗಳಾದರು.

ಅಡ್ಡ ಪರಿಣಾಮ ಕಲಿಸಿದ ಶೋಧ
ಉಡುಪಿ ಕೆಎಂ ಮಾರ್ಗದಲ್ಲಿರುವ ಅನಾಮಯ ಚಿಕಿತ್ಸಾಲಯದ ಡಾ| ಚಂದ್ರಶೇಖರ್‌ ಅವರು ಪಂಚಕರ್ಮ ಚಿಕಿತ್ಸೆಗೆ ಎಳ್ಳೆಣ್ಣೆ ಬಳಸುತ್ತಿದ್ದರು. ನಿರೀಕ್ಷಿತ ಫ‌ಲಿತಾಂಶ ಇಲ್ಲದಿರುವುದೇ ಮೊದಲಾದ ಅಡ್ಡ ಪರಿಣಾಮಗಳು ಕಂಡಾಗ ಗಾಣದಿಂದ ತೆಗೆದ ಎಳ್ಳೆಣ್ಣೆಯನ್ನು ಬಳಸಿದರು. ಇದರ ಫ‌ಲಿತಾಂಶ ಉತ್ತಮವಾಗಿ ಕಂಡುಬಂತು. ಹೀಗಾಗಿ ಮಾರ್ಪಳ್ಳಿಯಲ್ಲಿ ತಾವೇ ಸ್ವತಃ ಗಾಣವನ್ನು ಸ್ಥಾಪಿಸಿ ಎಣ್ಣೆ ತೆಗೆಯಲು ಆರಂಭಿಸಿದರು. ಇಲ್ಲಿ ವ್ಯತ್ಯಾಸವೆಂದರೆ ಹಿಂದಿನ ಕಾಲದ ಎತ್ತಿನ ಬದಲು ಮೋಟಾರ್‌ ಬಳಕೆಯಷ್ಟೆ.

ದುಬಾರಿಯಾದರೂ ಶ್ರೇಷ್ಠ
ಡಾ| ಚಂದ್ರಶೇಖರ್‌ ಉತ್ಪಾದಿಸುವ ಗಾಣದ ಎಳ್ಳೆಣ್ಣೆ ಒಂದು ಕೆ.ಜಿ. ದರ 465 ರೂ. 10 ಕೆ.ಜಿ. ಎಳ್ಳು ಹಾಕುವಾಗ ಅರ್ಧ ಕೆ.ಜಿ. ಸಾವಯವ ಬೆಲ್ಲವನ್ನು ಬಳಸುತ್ತಾರೆ. ಈ ಮಾದರಿಯಲ್ಲಿ ಎಣ್ಣೆ ತೆಗೆಯುವಾಗ ಶೇ.40 ಮಾತ್ರ ಎಣ್ಣೆ ಸಿಗುತ್ತದೆ. ಆದರೆ ಗುಣಧರ್ಮ, ಫ‌ಲಿತಾಂಶ ಅತ್ಯಂತ ಶ್ರೇಷ್ಠವಾಗಿರುತ್ತದೆ.

ಶೀಘ್ರ ಪರಿಶುದ್ಧ ಎಳ್ಳೆಣ್ಣೆ ಪ್ರಯೋಗ
ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಚಂದ್ರಶೇಖರ್‌ ಅವರ ಎಳ್ಳೆಣ್ಣೆ ಉತ್ಪಾದನೆ ವಿಷಯ ಗೊತ್ತಾಗಿ ಪರಿಶುದ್ಧ ಎಳ್ಳೆಣ್ಣೆ ಪೂರೈಕೆ ಮಾಡಲು ತಿಳಿಸಿದ್ದು ಪ್ರಾಯೋಗಿಕವಾಗಿ ಪೂರೈಕೆ ಆರಂಭಿಸಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ಎಣ್ಣೆ ಹಾಕುವ ಭಕ್ತರಿದ್ದಾರೆ. ಇವರ ನಂಬಿಕೆ, ಶ್ರದ್ಧೆಗೂ ತೊಂದರೆಯಾಗಬಾರದು, ಇನ್ನೊಂದೆಡೆ ಪರಿಶುದ್ಧ ಎಳ್ಳೆಣ್ಣೆ ಬಳಕೆ ಯಾಗಬೇಕು ಎಂಬ ಚಿಂತನೆಯಲ್ಲಿ ಶ್ರೀಪಾದರಿದ್ದಾರೆ. ಸದ್ಯದಲ್ಲಿಯೇ ಇದರ ಅನುಷ್ಠಾನವಾಗಲಿದೆ ಎಂದು ಪರ್ಯಾಯ ಶ್ರೀಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್‌ ಹೇಳುತ್ತಾರೆ.

ಮಾರುಕಟ್ಟೆಯ ಅತ್ಯುತ್ಕೃಷ್ಟ,ಕನಿಷ್ಠ!
ಈಗ ಮಾರುಕಟ್ಟೆಯಲ್ಲಿರುವ ಅತ್ಯುತ್ಕೃಷ್ಟ ಗುಣಮಟ್ಟದ ಒಂದು ಕೆ.ಜಿ. ಎಳ್ಳೆಣ್ಣೆ ದರ 360 ರೂ., ಒಂದು ಕೆ.ಜಿ. ಎಳ್ಳಿನ ಈಗಿನ ದರ 155 ರೂ., ಅತ್ಯುತ್ಕೃಷ್ಟ ಎಂಬ ಎಳ್ಳೆಣ್ಣೆಯನ್ನು 360 ರೂ.ನಲ್ಲಿ ಮಾರಾಟ ಮಾಡಲು ಸಾಧ್ಯವೆ? ದೀಪದ ಎಣ್ಣೆ ಕೆ.ಜಿ.ಗೆ 90 ರೂ.ನಲ್ಲೂ ಸಿಗುತ್ತದೆ. ಇದು ಒಂದೋ ಮೀನೆಣ್ಣೆ ಅಥವಾ ಮಿನರಲ್‌ ಆಯಿಲ್‌ನಿಂದ (ಪೆಟ್ರೋಲಿಯಂ ಎಂಡ್‌ ಪ್ರೊಡಕ್ಟ್) ಮಿಶ್ರಣ ಮಾಡಿರುತ್ತಾರೆ. ಪೆಟ್ರೋಲಿಯಂ ಎಂಡ್‌ ಪ್ರೊಡಕ್ಟ್ ಕ್ಯಾನ್ಸರ್‌ಗೂ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಡಾ| ಚಂದ್ರಶೇಖರ್‌.

LEAVE A REPLY

Please enter your comment!
Please enter your name here