Home ಧಾರ್ಮಿಕ ಸುದ್ದಿ ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

501
0
SHARE
ಸಾಂದರ್ಭಿಕ ಚಿತ್ರ.

ಉಡುಪಿ: ರಾಜ್ಯದ ವಿವಿಧ ಮುಜರಾಯಿ ದೇವಸ್ಥಾನಗಳಲ್ಲಿ ಜೂ. 1ರಿಂದ ಭಕ್ತರಿಗೆ ಪ್ರವೇಶಾವಕಾಶ ಕೊಡಲು ರಾಜ್ಯ ಸರಕಾರ ನಿರ್ಧರಿಸಿದೆಯಾದರೂ ಉಡುಪಿ ಶ್ರೀಕೃಷ್ಣ ಮಠದಲ್ಲಿ 10-15 ದಿನಗಳ ಬಳಿಕವೇ ಅವಕಾಶ ಕೊಡಲು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.

ಪ್ರಸ್ತುತ ಅಗತ್ಯದ ಸೇವಾ ಪರಿಚಾರಕರು ಮಾತ್ರ ಮಠದೊಳಗಿದ್ದು ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ಅವರಾರೂ ಹೊರಗೆ ಹೋಗುತ್ತಿಲ್ಲ, ಹೊರಗಿದ್ದವರನ್ನು ಒಳಗೆ ಬಿಡುತ್ತಿಲ್ಲ.

ಶ್ರೀಕೃಷ್ಣ ಮಠದಲ್ಲಿ ಅಷ್ಟಮಠದ ಯತಿಗಳೇ ಪೂಜೆ ನಡೆಸುತ್ತಿರುವುದರಿಂದ ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಜೂನ್‌ ಮಧ್ಯಾವಧಿಯ ಬಳಿಕ ಪರಿಸ್ಥಿತಿ ಯನ್ನು ಗಮನಿಸಿ, ಇತರ ಮಠಾ ಧೀಶರ ಸಲಹೆ ಸೂಚನೆ ಪ್ರಕಾರ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀ ಈಶಪ್ರಿಯತೀರ್ಥರು ತಿಳಿಸಿದ್ದಾರೆ.

ಹಿಂಭಾಗದಿಂದ ಪ್ರವೇಶ?
ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ಪ್ರವೇಶಾ ವಕಾಶ ಕಲ್ಪಿಸುವಾಗ ಇದುವರೆಗೆ ಇದ್ದಂತೆ ರಾಜಾಂಗಣದ ಪ್ರದೇಶದಿಂದ ಭೋಜನಶಾಲೆಯ ಉಪ್ಪರಿಗೆ ಮೂಲಕ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತಿದೆ. ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಕಾಪಾಡಲು ಇದರಿಂದ ಸಾಧ್ಯವಾ ಗುತ್ತದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್‌ ತಿಳಿಸಿದ್ದಾರೆ.

ಆನ್‌ಲೈನ್‌ ಪೂಜೆ, ಪ್ರವಚನ
ಶ್ರೀಕೃಷ್ಣ ಮಠದಲ್ಲಿ ಪೂಜೆ ಪುನಸ್ಕಾರಗಳು ಮತ್ತು ಪ್ರವಚನಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರವಚನಗಳನ್ನು, ಬೆಳಗ್ಗೆ, ಮಧ್ಯಾಹ್ನದ ಪೂಜೆಗಳನ್ನೂ ಆನ್‌ಲೈನ್‌ನಲ್ಲಿ ಬಿತ್ತರಿಸಲಾಗುತ್ತಿದೆ. ರಾಜಾಂಗಣದಲ್ಲಿ ನಡೆಯುತ್ತಿದ್ದ ವಿದ್ವಾಂಸರ ಪ್ರವಚನಗಳೂ ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಪ್ರವಚನ, ಪೂಜೆಗಳನ್ನು ಅಪಾರ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ. ಕೆಲವರು ವರ್ಷಂಪ್ರತಿ ಸಲ್ಲಿಸುವ ಸೇವೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸುತ್ತಿದ್ದಾರೆ.

ಕನಕನ ಕಿಂಡಿಯಲ್ಲಿ ಕೃಷ್ಣದರ್ಶನ ಅಬಾಧಿತ
ಸುಮಾರು ಎರಡು ತಿಂಗಳಿಂದ ಶ್ರೀಕೃಷ್ಣ ಮಠದ ಪ್ರವೇಶ ಭಕ್ತರಿಗೆ ಇಲ್ಲವಾದರೂ ಕನಕದಾಸರು ಹಾಕಿಕೊಟ್ಟ ಸಂಪ್ರದಾಯದಂತೆ ದಿನದ 24 ಗಂಟೆಯೂ ಕನಕನ ಕಿಂಡಿ ಮೂಲಕ ದೇವರ ದರ್ಶನ ನಡೆಯುತ್ತಿದೆ. ಸ್ಥಳೀಯರು ಕನಕನ ಕಿಂಡಿ ಮೂಲಕ ದರ್ಶನ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here